ಮೈಸೂರು,ಅ.18-ಕತ್ತಲೆ ಆಗಸದಲ್ಲಿ ಮಿನುಗಿದ ಸಾವಿರಾರು ಬೆಳಕಿನ ಚುಕ್ಕಿಗಳು ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದ ಬಣ್ಣಬಣ್ಣದ ಆಕತಿಗಳು ಬಾನಂಗಳದಲ್ಲೇ ಜೀವತಳೆದ ನವಿಲು, ಸಿಂಹ, ಚಾಮುಂಡೇಶ್ವರಿ ಹಾಗೂ ಚಿನ್ನದ ಅಂಬಾರಿಯ ಮನಮೋಹಕ ದಶ್ಯಗಳು ಹೀಗೆ 3,500 ಡ್ರೋನ್ಗಳು ಸಷ್ಟಿಸಿದ ಬೆಳಕಿನ ಮಾಯಾಲೋಕ ಮೈಸೂರು ದಸರಾ ವೈಭವಕ್ಕೆ ಹೊಸ ಮೆರುಗು ನೀಡಿತು.
ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ರಾತ್ರಿ ನಡೆದ ಅತ್ಯಾಕರ್ಷಕ ಡ್ರೋನ್ ಪ್ರದರ್ಶನದಲ್ಲಿ ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಆಧುನಿಕ ತಂತ್ರಜ್ಞಾನದ ಸಂಗಮಕ್ಕೆ ಸಾಕ್ಷಿಯಾಯಿತು. ಬಾನಂಗಳಕ್ಕೆ ಏಕ ಕಾಲಕ್ಕೆ ಹಾರಿದ 3500 ಡ್ರೋನ್ಗಳು ಬಣ್ಣಬಣ್ಣದ ಎಲ್ಇಡಿ ದೀಪಗಳ ಬೆಳಕಿನಿಂದ 12 ವಿಭಿನ್ನ ವಿನ್ಯಾಸಗಳ ಚಿತ್ತಾರಗಳನ್ನು ಆಗಸದಲ್ಲಿ ಬಿಡಿಸಿ, ಇಡೀ ಮೈದಾನದಲ್ಲಿ ನೆರೆದಿದ್ದ ಅಸಂಖ್ಯಾತ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.
ದಸರೆಯ ಸಾಂಸ್ಕೃತಿಕ ವೈಭವಕ್ಕೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿದ ಈ ಪ್ರದರ್ಶನವು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಮಸ್ತ ಜನತೆಗೆ ದಸರಾ ಮಹೋತ್ಸವಕ್ಕೆ ಸ್ವಾಗತ ಕೋರುವ ವಿನ್ಯಾಸದೊಂದಿಗೆ ಈ ಬಾರಿಯ ಡ್ರೋನ್ ಶೋ ಆರಂಭಗೊಂಡಿತು. ನಂತರ ಒಂದರ ಹಿಂದೆ ಒಂದರಂತೆ ಆಕಾಶದಲ್ಲಿ ಮೂಡಿಬಂದ ಬೆಳಕಿನ ವಿನ್ಯಾಸಗಳು ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸಿದವು.
ಈ ಬಾರಿಯ ಪ್ರದರ್ಶನದಲ್ಲಿ ಗ್ಯಾಲಕ್ಸಿ, ದೇಶದ ಹೆಮೆಯ ಸೈನಿಕ, ಆಕರ್ಷಕ ಚಿಟ್ಟೆ, ರಾಷ್ಟ್ರೀಯ ಪಕ್ಷಿ ನವಿಲು ಹಾಗೂ ಕಾಡಿನ ರಾಜ ಸಿಂಹದ ವಿನ್ಯಾಸಗಳು ಗಮನ ಸೆಳೆದವು. ಅದರಲ್ಲೂ ರಾಷ್ಟ್ರೀಯ ಪಕ್ಷಿ ನವಿಲಿನ ವಿನ್ಯಾಸದ ಮೂಲಕ ಮತ್ತೊಂದು ಗಿನ್ನಿಸ್ ದಾಖಲೆ ನಿರ್ಮಿಸುವ ಸೆಸ್ಕ್ನ ಪ್ರಯತ್ನ ವಿಶೇಷ ಕುತೂಹಲ ಮೂಡಿಸಿತು.
ಇವುಗಳೊಂದಿಗೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳು, ಧಾರ್ಮಿಕ ಭಾವನೆ ಮೂಡಿಸಿದ ಸುದರ್ಶನ ಚಕ್ರ ಹಾಗೂ ಶಿವತಾಂಡವದ ದಶ್ಯಾವಳಿಗಳು ಪ್ರೇಕ್ಷಕರ ಮೈನವಿರೇಳಿಸಿದರೆ. ಮೈಸೂರಿನ ಐತಿಹಾಸಿಕ ಹಿನ್ನೆಲೆ ಹಾಗೂ ಧಾರ್ಮಿಕ ಪರಂಪರೆ ಪ್ರತಿಬಿಂಬಿಸುವ ನಂದಿ ವಿಗ್ರಹ, ವಿಶ್ವವಿಖ್ಯಾತ ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾದ ಚಿನ್ನದ ಅಂಬಾರಿ ಮತ್ತು ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ದೇವಿಯ ವಿನ್ಯಾಸಗಳು ಪ್ರದರ್ಶನಕ್ಕೆ ವಿಶೇಷ ಮೆರುಗು ನೀಡಿದವು.
