ಬೆಂಗಳೂರು,ಅ.18- ಪಾಕಿಸ್ತಾನದ ಕುಖ್ಯಾತ ಉಗ್ರ ಸಂಘಟನೆ ಲಷ್ಕರ್-ಎ-ತೈಬಾ ಜೊತೆ ನಂಟು ಹೊಂದಿರುವ ಶಂಕೆಯ ಮೇರೆಗೆ ಕಲಬುರಗಿ ನಗರದಲ್ಲಿ ಕೇಂದ್ರ ಗುಪ್ತಚರ ಇಲಾಖೆ ಹಾಗೂ ಸ್ಥಳೀಯ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಮತ್ತೊಬ್ಬ ಶಂಕಿತ ಉಗ್ರನನ್ನು ವಶಕ್ಕೆ ಪಡೆಯಲಾಗಿದೆ.ಪಶ್ಚಿಮ ಬಂಗಾಳ ಮೂಲದ ಮವ್ತಾಜ್ವುಲ್ ಮಲೀಕ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.ಆರೋಪಿ ಮವ್ತಾಜ್ವುಲ್ ಮಲೀಕ್ ಕಲಬುರಗಿ ನಗರದ ಸರಾಫ್ ಬಜಾರ್ನಲ್ಲಿ ತನ್ನ ಸಹೋದರನೊಂದಿಗೆ ಚಿನ್ನಾಭರಣ ಕೆಲಸ ಮಾಡಿಕೊಂಡಿದ್ದನು.
ಈತ ಸಾಮಾಜಿಕ ಜಾಲತಾಣಗಳ ಮೂಲಕ ಲರ್ಷ್ಕ-ಎ-ತೈಬಾ ಸಂಘಟನೆಯ ಖಾತೆಗಳೊಂದಿಗೆ ಸಂಪರ್ಕದಲ್ಲಿದ್ದು, ಹಲವು ಮಹತ್ವದ ವಿಷಯಗಳನ್ನು ಸಂದೇಶಗಳ ಮೂಲಕ ಹಂಚಿಕೊಂಡಿದ್ದಾನೆ ಎಂಬ ಗಂಭೀರ ಆರೋಪವಿದೆ. ಖಚಿತ ಮಾಹಿತಿ ಆಧರಿಸಿ ಕೇಂದ್ರೀಯ ಗುಪ್ತಚರ ಇಲಾಖೆ ನೀಡಿದ ಸುಳಿವಿನ ಮೇರೆಗೆ ಬ್ರಹಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಜಂಟಿ ಕಾರ್ಯಾಚರಣೆ ನಡೆಸಲಾಗಿದ್ದು, ಶಂಕಿತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ಮವ್ತಾಜ್ವುಲ್ ಮಲೀಕ್ ಸಾಮಾಜಿಕ ಜಾಲತಾಣಗಳ ಮೂಲಕ ಲರ್ಷ್ಕ-ಎ-ತೈಬಾ ಸಂಘಟನೆಗೆ ಸಂಬಂಧಿಸಿದ ಖಾತೆಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ತಿಳಿದು ಬಂದಿದೆ.ಕಲಬುರಗಿಯಲ್ಲಿ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ನಡೆದ ಮತ್ತೊಂದು ಕಾರ್ಯಾಚರಣೆ ಇದಾಗಿದೆ. ಕೆಲ ದಿನಗಳ ಹಿಂದಷ್ಟೇ ನಗರದ ಕಸಾಯಿಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಯುವಕನನ್ನು ಇದೇ ರೀತಿಯ ಶಂಕೆಯ ಮೇರೆಗೆ ಬಂಧಿಸಲಾಗಿತ್ತು.
ಇದಕ್ಕೂ ಮೊದಲು, ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಮಹಮದ್ ಸಮೀರ್ (23) ಎಂಬಾತನನ್ನು ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲಾಗಿತ್ತು. ಆತನ ಮೊಬೈಲ್ನಲ್ಲಿ ಉಗ್ರರಿಗೆ ಸಂಬಂಧಿಸಿದ ಚಿತ್ರಗಳು ಮತ್ತು ವಿಡಿಯೊಗಳು ಪತ್ತೆಯಾಗಿದ್ದವು. ಇದರ ನಡುವೆಯೇ ಮತ್ತೊಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿರುವುದು ಜಿಲ್ಲೆಯ ಭದ್ರತಾ ವ್ಯವಸ್ಥೆ ಮತ್ತು ತನಿಖಾ ಪ್ರಕ್ರಿಯೆಗಳತ್ತ ಗಮನ ಸೆಳೆದಿದೆ.ಕರ್ನಾಟಕದ ಇತರ ಜಿಲ್ಲೆಗಳಲ್ಲಿಯೂ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಪ್ರಕರಣಗಳು ಈ ಹಿಂದೆ ವರದಿಯಾಗಿದ್ದವು.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಯಣಕೂರ ಗ್ರಾಮದ ವಿಶಾಲ್ ಮೇತ್ರೆ ಎಂಬಾತನನ್ನು ಪಾಕಿಸ್ತಾನ ಮೂಲದ ಉಗ್ರರ ಜಾಲದೊಂದಿಗೆ ಸಂಪರ್ಕ ಹೊಂದಿರುವ ಶಂಕೆಯ ಮೇರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಂಧಿಸಿದೆ.ಪಾಕಿಸ್ತಾನ ಮೂಲದ ಶಹಜಾದ್ ಭಟ್ಟಿ ಮತ್ತು ರಾಣಾ ಹುನೇನ್ ಎಂಬವರೊಂದಿಗೆ ವಾಟ್್ಸಆ್ಯಪ್ ಹಾಗೂ ಇನ್ಸ್ಟಾಗ್ರಾಂ ಮೂಲಕ ಸಂಪರ್ಕ ಹೊಂದಿದ್ದ ಆರೋಪವೂ ಆತನ ವಿರುದ್ಧದ ಪ್ರಕರಣದಲ್ಲಿ ಉಲ್ಲೇಖವಾಗಿತ್ತು. ಅಕ್ರಮ ಶಸಾ್ತ್ರಸ್ತ್ರಗಳ ಖರೀದಿ ಮತ್ತು ಸಾಗಣೆ ಕುರಿತು ಚರ್ಚಿಸಿದ್ದಾನೆ ಎಂಬ ಆರೋಪಗಳೂ ತನಿಖೆಯ ಭಾಗವಾಗಿದ್ದವು.
ಇದೇ ರೀತಿ, 2026ರ ಜೂನ್ನಲ್ಲಿ ಉತ್ತರ ಪ್ರದೇಶ ಮೂಲದ ಸುಹೇಲ್ ಎಂಬ ಯುವಕನನ್ನು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಗ್ರಾಮವೊಂದರಲ್ಲಿ ಬಂಧಿಸಲಾಗಿದೆ.ಪೇಂಟರ್ ಸೋಗಿನಲ್ಲಿ ವಾಸಿಸುತ್ತಿದ್ದ ಈತ, ಸಾಮಾಜಿಕ ಜಾಲತಾಣಗಳ ಮೂಲಕ ವಿದೇಶಿ ಹ್ಯಾಂಡ್ಲರ್ಗಳ ಸಂಪರ್ಕದಲ್ಲಿದ್ದು ಉಗ್ರಗಾಮಿ ಚಟುವಟಿಕೆಗಳಿಗೆ ಸಂಬಂಧಿಸಿದ ಆನ್ಲೈನ್ ಚಟುವಟಿಕೆಗಳಲ್ಲಿ ತೊಡಗಿದ್ದಾನೆ ಎಂಬ ಶಂಕೆಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿತ್ತು ಎಂದು ತಿಳಿಸಲಾಗಿತ್ತು.
ಇದೇ ರೀತಿ ತುಮಕೂರು,ರಾಯಚೂರು, ಬಿಜಾಪುರ ಮುಂತಾದ ಸ್ಥಳಗಳಲ್ಲಿ ಅಡಗಿ ಕುಳಿತಿದ್ದ ಶಂಕಿತ ಉಗ್ರರನ್ನು ಕೇಂದ್ರ ಗುಪ್ತಚಾರ ಇಲಾಖೆಯ ಮಾರ್ಗದರ್ಶನದಲ್ಲಿ ಸ್ಥಳೀಯ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
