Thursday, November 21, 2024
Homeರಾಜ್ಯಪಿಯುಸಿ ಪರೀಕ್ಷೆಗಳ ಮೌಲ್ಯಮಾಪಕರ ಸಂಭಾವನೆ ಬಿಡುಗಡೆಗೆ ಆಗ್ರಹ

ಪಿಯುಸಿ ಪರೀಕ್ಷೆಗಳ ಮೌಲ್ಯಮಾಪಕರ ಸಂಭಾವನೆ ಬಿಡುಗಡೆಗೆ ಆಗ್ರಹ

ಬೆಂಗಳೂರು, ಸೆ.25- ಪಿಯುಸಿ ವಾರ್ಷಿಕ ಪರೀಕ್ಷಾ ಮತ್ತು ಪೂರಕ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿದ ಉಪನ್ಯಾಸಕರ ಸಂಭಾವನೆ ಹಾಗೂ ಭತ್ಯೆಗಳನ್ನು ಬಿಡುಗಡೆ ಮಾಡುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯನ್ನು ಶಿಕ್ಷಕರ ಮತ್ತು ಆಡಳಿತ ಮಂಡಳಿ ಫೋರಂ ಕರ್ನಾಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಒತ್ತಾಯಿಸಿದ್ದಾರೆ.

ಈ ಸಂಬಂಧ ಮಂಡಳಿಯ ಅಧ್ಯಕ್ಷರಿಗೆ ಪತ್ರ ಬರೆದಿದ್ದು, ಉಪನ್ಯಾಸಕರ ಸಂಭಾವನೆ ಹಾಗೂ ಭತ್ಯೆ ಬಿಡುಗಡೆ ಮಾಡುವಲ್ಲಿ ವಿಳಂಬ ನೀತಿ ಅನುಸರಿಸಿದರೆ ಅಕ್ಟೋಬರ್ 3ರಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ಮುಂದೆ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ.

ಕಳೆದ ಮಾರ್ಚ್ – ಏಪ್ರಿಲ್‍ನಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಮತ್ತು ಮೌಲ್ಯಮಾಪನ ಕಾರ್ಯ, ಜೂನ್‍ನಲ್ಲಿ ನಡೆದ ಮೊದಲ ಪೂರಕ ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯ ಹಾಗೂ ಆಗಸ್ಟ್-ಸೆಪ್ಟೆಂಬರ್‍ನಲ್ಲಿ ನಡೆದ 2ನೇ ಪೂರಕ ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯಗಳಲ್ಲಿ ಭಾಗಿಯಾದ ಉಪನ್ಯಾಸಕರ ಸಂಭಾವನೆ ಮತ್ತು ಭತ್ಯೆಗಳನ್ನು ಈವರೆಗೂ ಸಂಪೂರ್ಣವಾಗಿ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

ಮಹಿಳಾ ಮೀಸಲಾತಿ ಲೋಪದ ವಿರುದ್ಧ ಕಾಂಗ್ರೆಸ್‍ನಿಂದ ಸರಣಿ ಪತ್ರಿಕಾಗೋಷ್ಠಿ

ಜರೂರಾಗಿ ಮೌಲ್ಯಮಾಪನ ಮಾಡಿಸಿ, ಶೀಘ್ರದಲ್ಲಿ ಫಲಿತಾಂಶ ಬಿಡುಗಡೆ ಮಾಡಿದ್ದೇವೆಂದು ಹೆಮ್ಮೆಪಡುವ ಮಂಡಲಿಯು ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯದಲ್ಲಿ ಭಾಗಿಯಾಗುವ ಮೂಲಕ ಮಂಡಲಿಯ ಹಿರಿಮೆ ಮತ್ತು ಯಶಸ್ಸಿಗೆ ಕಾರಣೀಭೂತರಾದ ಉಪನ್ಯಾಸಕರ ಸಂಭಾವನೆ ಮತ್ತು ಭತ್ಯೆಗಳ ಶೀಘ್ರ ಬಿಡುಗಡೆಗೂ ಇದೇ ಇಚ್ಛಾಶಕ್ತಿ ಪ್ರದರ್ಶಿಸಬೇಕಿತ್ತಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಕೆಲವು ವರ್ಷಗಳ ಹಿಂದೆ ಮೌಲ್ಯಮಾಪನದ ಕಡೆಯ ದಿನದಂದೆ ಚೆಕ್ ಮೂಲಕ ಉಪನ್ಯಾಸಕರಿಗೆ ಸಂಭಾವನೆ ಮತ್ತು ಭತ್ಯೆಗಳನ್ನು ವಿತರಿಸಲಾಗುತ್ತಿತ್ತು. ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಪರೀಕ್ಷಾ ಶುಲ್ಕವನ್ನು ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿದ ಉಪನ್ಯಾಸಕರಿಗೆ ವಿತರಿಸಲು ಏಕೆ ವಿಳಂಬ ಧೋರಣೆ ಎಂದಿದ್ದಾರೆ.

ವಿಶೇಷವಾಗಿ ಖಾಸಗಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರು ಮೌಲ್ಯಮಾಪನದ ಸಂಭಾವನೆ ಮತ್ತು ಭತ್ಯೆಗಳಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದು, ಅನೇಕರು ನನ್ನ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇದು ಅವರ ಜೀವನ ನಿರ್ವಹಣೆಯ ಪ್ರಶ್ನೆಯೂ ಆಗಿದೆ ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

RELATED ARTICLES

Latest News