ಹೈದರಾಬಾದ್,ಅ. 18- ಅಹಮದಾಬಾದ್ನಿಂದ ಹೈದರಾಬಾದ್ಗೆ ಬರುತ್ತಿದ್ದ ವಿಮಾನದಲ್ಲಿ ಬಾಂಬ್ ಬೆದರಿಕೆಯಿಂದಾಗಿ ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಎಚ್ಚರಿಕೆ ಘೋಷಿಸಲಾಗಿತ್ತು.
ಏಳನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ, ಶಾಲಾ ಪ್ರವಾಸ ಮುಗಿಸಿಕೊಂಡು ಶಿಕ್ಷಕರು ಮತ್ತು ಇತರ ವಿದ್ಯಾರ್ಥಿಗಳೊಂದಿಗೆ ಹೈದರಾಬಾದ್ಗೆ ಮರಳುತ್ತಿದ್ದಳು. ಈ ವೇಳೆ ಸಹಪಾಠಿಯೊಬ್ಬಳಿಗೆ ವಿಮಾನದಲ್ಲಿ ಬಾಂಬ್ ಇದೆ ಎಂದು ತಮಾಷೆಯಾಗಿ ಹೇಳಿದ್ದಾಳೆ. ಬಾಲಕಿಯ ಮಾತು ಕೇಳಿಸಿಕೊಂಡ ವಿಮಾನದ ಸಿಬ್ಬಂದಿಯೊಬ್ಬರು ತಕ್ಷಣ ಪೈಲಟ್ಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಮಾಣಿತ ಭದ್ರತಾ ಕ್ರಮಗಳ ಪ್ರಕಾರ, ವಿಮಾನ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ಸಂಪೂರ್ಣ ತಪಾಸಣೆ ನಡೆಸಲಾಯಿತು. ಆದರೆ, ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಬಾಲಕಿ ಅಪ್ರಾಪ್ತ ವಯಸ್ಸಿನವಳಾಗಿರುವುದರಿಂದ ಆಕೆಯ ವಿರುದ್ಧ ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ. ಶಿಕ್ಷಕರು ಬಾಲಕಿಗೆ ಕೌನ್ಸೆಲಿಂಗ್ ನಡೆಸಿ ತಿಳಿವಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಬಾಲಕಿ ಅರಿವಿಲ್ಲದೆ ಈ ಮಾತನ್ನು ಹೇಳಿದ್ದಾಳೆ. ಬೆದರಿಕೆ ನೀಡುವ ಉದ್ದೇಶ ಆಕೆಗೆ ಇರಲಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
