Homeರಾಷ್ಟ್ರೀಯಕೋಲ್ಕತ್ತಾ ಕಾಲ್ತುಳಿತ : ಅಲರ್ಟ್ ಆದ ಯುಪಿ ಸಿಎಂ ಯೋಗಿ, ದುರ್ಗಾ ಪೂಜಾ ಮಂಟಪಗಳ ಪರಿಶೀಲನೆಗೆ...

ಕೋಲ್ಕತ್ತಾ ಕಾಲ್ತುಳಿತ : ಅಲರ್ಟ್ ಆದ ಯುಪಿ ಸಿಎಂ ಯೋಗಿ, ದುರ್ಗಾ ಪೂಜಾ ಮಂಟಪಗಳ ಪರಿಶೀಲನೆಗೆ ಸೂಚನೆ

ಲಕ್ನೋ, ಅ.18- ಕೋಲ್ಕತ್ತಾದ ದುರ್ಗಾ ಪೂಜಾ ಮಂಟಪದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದ ಹಿನ್ನೆಲೆಯಲ್ಲಿ, ಉತ್ತರ ಪ್ರದೇಶದಾದ್ಯಂತ ದುರ್ಗಾ ಪೂಜಾ ಮಂಟಪಗಳ ಸುರಕ್ಷತಾ ವ್ಯವಸ್ಥೆಗಳನ್ನು ತಕ್ಷಣ ಪರಿಶೀಲಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ರಾಜ್ಯದಲ್ಲಿನ ಎಲ್ಲಾ ಪೊಲೀಸ್‌‍ ಆಯುಕ್ತರು, ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಹಾಗೂ ಪೊಲೀಸ್‌‍ ಮುಖ್ಯಸ್ಥರು ಮಂಟಪಗಳಿಗೆ ಭೇಟಿ ನೀಡಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಉತ್ತರ ಕೋಲ್ಕತ್ತಾದ ದುರ್ಗಾ ಪೂಜಾ ಮಂಟಪದಲ್ಲಿ ಶನಿವಾರ ಸಂಜೆ ಸಂಭವಿಸಿದ ಕಾಲ್ತುಳಿತದಲ್ಲಿ 19 ಮಂದಿ ಮೃತಪಟ್ಟಿದ್ದು, 25 ಜನರು ಗಾಯಗೊಂಡಿದ್ದಾರೆ. ಈ ದುರಂತದ ಹಿನ್ನೆಲೆಯಲ್ಲಿ ಇತರ ರಾಜ್ಯಗಳಲ್ಲಿಯೂ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಜನಸಂದಣಿ ಸೇರುವ ಸ್ಥಳಗಳಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ.

ಮುಖ್ಯಮಂತ್ರಿಗಳ ಕಚೇರಿ ಹೊರಡಿಸಿರುವ ನಿರ್ದೇಶನಗಳ ಪ್ರಕಾರ, ದುರ್ಗಾ ಪೂಜಾ ಮಂಟಪಗಳಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆಗಳು, ಪ್ರವೇಶ ಮತ್ತು ನಿರ್ಗಮನ ದ್ವಾರಗಳು, ತುರ್ತು ನಿರ್ಗಮನ ಮಾರ್ಗಗಳು ಹಾಗೂ ವಿದ್ಯುತ್‌ ಅಳವಡಿಕೆಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು. ಭಕ್ತರು ಯಾವುದೇ ಅಡೆತಡೆಯಿಲ್ಲದೆ ಸುರಕ್ಷಿತವಾಗಿ ಸಂಚರಿಸಲು ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಬೇಕು ಎಂದು ಸೂಚಿಸಲಾಗಿದೆ.

ವಿಶೇಷವಾಗಿ, ತುರ್ತು ಪರಿಸ್ಥಿತಿಯಲ್ಲಿ ಜನರನ್ನು ತ್ವರಿತವಾಗಿ ಹೊರಗೆ ಕರೆದೊಯ್ಯಲು ಸಾಕಷ್ಟು ನಿರ್ಗಮನ ಮಾರ್ಗಗಳಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಜನಸಂದಣಿ ನಿಯಂತ್ರಣ, ಅಗ್ನಿ ಅವಘಡ ತಡೆ ಹಾಗೂ ತುರ್ತು ಸಂದರ್ಭಗಳನ್ನು ನಿಭಾಯಿಸುವ ಸಿದ್ಧತೆಗಳಿಗೂ ಆದ್ಯತೆ ನೀಡುವಂತೆ ಸೂಚಿಸಲಾಗಿದೆ.ಅಧಿಕಾರಿಗಳು ಕೇವಲ ಕಚೇರಿಗಳಿಂದಲೇ ಮೇಲ್ವಿಚಾರಣೆ ನಡೆಸದೆ, ಕ್ಷೇತ್ರದಲ್ಲಿಯೇ ಹಾಜರಿದ್ದು ಸುರಕ್ಷತಾ ನಿಯಮಗಳ ಪಾಲನೆಯಾಗುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಯೋಗಿ ಆದಿತ್ಯನಾಥ್‌ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

RELATED ARTICLES
spot_img

Latest News