Friday, November 22, 2024
Homeರಾಜ್ಯಯುಗಾದಿಗೂ ಮುನ್ನ ರಾಜ್ಯದ ಕೆಲವೆಡೆ ಮಳೆ ಸಾಧ್ಯತೆ

ಯುಗಾದಿಗೂ ಮುನ್ನ ರಾಜ್ಯದ ಕೆಲವೆಡೆ ಮಳೆ ಸಾಧ್ಯತೆ

ಬೆಂಗಳೂರು,ಏ.4- ಬೇಸಿಗೆ ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವಾಡಿಕೆಗಿಂತ ಒಂದೂವರೆಯಿಂದ 3 ಡಿ.ಸೆ.ನಷ್ಟು ಹೆಚ್ಚಾಗಿದೆ. ಇದರಿಂದ ಬಿಸಿ ಗಾಳಿಯು ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಮುನ್ಸೂಚನೆಗಳಿವೆ.ರಾಜ್ಯದ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಏ.6ರಿಂದ ಮೂರು ದಿನಗಳ ಕಾಲ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ.

ಹಿಂಗಾರು ಪೂರ್ವ ಮಳೆ ದಕ್ಷಿಣ ಒಳನಾಡಿನಲ್ಲಿ ಕಳೆದ ಮೂರು ತಿಂಗಳಿನಿಂದ ಬಿದ್ದಿಲ್ಲ. ಏಪ್ರಿಲ್‍ನಲ್ಲಿ ಮಿಂಚು ಗುಡುಗಿನಿಂದ ಕೂಡಿದ ಮಳೆಯಾಗುವುದು ವಾಡಿಕೆ. ಆದರೆ ಏ.6ರಿಂದ ಮೂರು ದಿನಗಳ ಕಾಲ ರಾಜ್ಯದ ಒಳನಾಡಿನಲ್ಲಿ ಅಲ್ಲಲ್ಲಿ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ರಾಜ್ಯದಲ್ಲಿ ತೀವ್ರ ಸ್ವರೂಪದ ಬರ ಉಂಟಾಗಿದ್ದರ ಪರಿಣಾಮ ತಾಪಮಾನದಲ್ಲಿ ಸರಾಸರಿಗಿಂತ ಹೆಚ್ಚಾಗಿದೆ. ಇದರಿಂದ ಬಿಸಿ ಗಾಳಿ ಉಂಟಾಗಿ ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ.

ಹವಾಮಾನ ಮುನ್ಸೂಚನೆ ಪ್ರಕಾರ ಏಪ್ರಿಲ್ ತಿಂಗಳಿನಲ್ಲಿ ವಾಡಿಕೆ ಪ್ರಮಾಣದ ಮಳೆಯಾಗುವ ಸಾಧ್ಯತೆ ಇಲ್ಲ. ಈ ತಿಂಗಳ ವಾಡಿಕೆ ಮಳೆ ಪ್ರಮಾಣ 36 ಮಿ.ಮೀನಷ್ಟಿದೆ. ರಾಜ್ಯದ ಕೆಲವೆಡೆ ಚದುರಿದಂತೆ ಮಳೆಯಾಗುತ್ತಿದ್ದರೂ ವಾಡಿಕೆ ಪ್ರಮಾಣದಲ್ಲಿಲ್ಲ. ಜನವರಿಯಿಂದ ಮಾರ್ಚ್ ಅಂತ್ಯದವರೆಗೂ ವಾಡಿಕೆ ಪ್ರಮಾಣದ ಮುಂಗಾರು ಪೂರ್ವ ಮಳೆಯಾಗಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಬಿಸಿಲಿನ ಬೇಗೆ ಹಾಗೂ ಬಿಸಿ ಗಾಳಿ ಹೆಚ್ಚಾಗಲಿದೆ. ವಾತಾವರಣದಲ್ಲಿ ತೇವಾಂಶ ಕುಸಿತವಾಗಲಿದೆ. ರಾಜ್ಯದಲ್ಲಿ ಗರಿಷ್ಠ ಹಾಗೂ ಕನಿಷ್ಠ ಉಷ್ಣಾಂಶದಲ್ಲೂ ಗಣನೀಯ ಏರಿಕೆ ಉಂಟಾಗಿದೆ. ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಗಡಿ ದಾಟಿದೆ. ಕಲಬುರಗಿಯಲ್ಲಿ 42.4 ಡಿ.ಸೆ, ನಷ್ಟು ದಾಖಲಾಗಿದೆ. ರಾಜಧಾನಿ ಬೆಂಗಳೂರಿನಲ್ಲೂ 37.2 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿದ್ದು, ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

RELATED ARTICLES

Latest News