Saturday, April 13, 2024
Homeರಾಜ್ಯಬಿಎಂಡಬ್ಲ್ಯೂ ಕಾರಿನಲ್ಲಿ ಓಡಾಟ, ಸ್ಟಾರ್ ಹೋಟೆಲ್ ವಾಸ್ತವ್ಯ : ಶೋಕಿಲಾಲ ವಂಚಕ ಅರೆಸ್ಟ್

ಬಿಎಂಡಬ್ಲ್ಯೂ ಕಾರಿನಲ್ಲಿ ಓಡಾಟ, ಸ್ಟಾರ್ ಹೋಟೆಲ್ ವಾಸ್ತವ್ಯ : ಶೋಕಿಲಾಲ ವಂಚಕ ಅರೆಸ್ಟ್

ಬೆಂಗಳೂರು, ಏ.4- ಸ್ಟಾರ್ ಹೋಟೆಲ್‌ನಲ್ಲಿ ಉಳಿದುಕೊಂಡು ಬಿಎಂಡಬ್ಲ್ಯೂ ಕಾರಿನಲ್ಲೇ ಓಡಾಡಿಕೊಂಡು ಶೋಕಿ ಮಾಡುತ್ತಾ ಹೋಟೆಲ್ ಬಿಲ್ ಕೊಡದೇ ನಕಲಿ ಪೇಮೆಂಟ್ ಸ್ಕ್ರೀನ್ ಶಾಟ್ ತೋರಿಸಿ ವಂಚಿಸಿದ್ದ ಆಂಧ್ರ ಮೂಲದ ವ್ಯಕ್ತಿಯನ್ನು ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ. ಆಂಧ್ರ ಪ್ರದೇಶದ ವಿಶಾಖಪಟ್ಟಣದ ನಿವಾಸಿ ಬೋರಡ ಸುಧೀರ್ ಬಂಧಿತ ಆರೋಪಿ.

ಮಾ.31 ರಂದು ಆರೋಪಿ ಸುೀಧಿರ್ ಆನ್ಲೈನ್ ಮೂಲಕ ನಗರದ ಪಂಚತಾರಾ ಹೋಟೆಲ್ನಲ್ಲಿ ರೂಂ ಬುಕ್ ಮಾಡಿದ್ದಾನೆ. ಅಲ್ಲದೇ ಏರ್ ಪೋರ್ಟ್ ನಿಂದ ಕರೆತರಲು ಬಿಎಂಡಬ್ಲ್ಯೂ ಕಾರನ್ನೇ ಕಳುಹಿಸುವಂತೆ ಸೂಚಿಸಿದ್ದ. ಅದರಂತೆ ಹೋಟೆಲ್ನವರು ಏರ್ ಪೋರ್ಟ್ ನಿಂದ ಸುಧೀರ್ ನನ್ನ ಅದೇ ಕಾರಿನ ಕರೆಸಿಕೊಂಡಿದ್ದಾರೆ. ನಂತರ ರೂಂನಲ್ಲಿ ಉಳಿದುಕೊಂಡಿದ್ದ ಈತ 17,346 ರೂ. ಪಾವತಿಸಿರುವುದಾಗಿ ಹೋಟೆಲ್ ಸಿಬ್ಬಂದಿಗೆ ಪೇಮೆಂಟ್ ಮಾಡಿದ ನಕಲಿ ಸ್ಕ್ರೀನ್ಶಾಟ್ ತೋರಿಸಿದ್ದಾನೆ.

ಹಣ ಸಂದಾಯ ಆಗಿಲ್ಲವೆಂದು ಸಿಬ್ಬಂದಿ ಪ್ರಶ್ನಿಸಿದಾಗ ನಿಮ್ಮದೇ ಟೆಕ್ನಿಕಲ್ ಸಮಸ್ಯೆ ಇರಬಹುದು ಎಂದು ಹೇಳಿದಾಗ ಆತನ ಮಾತನ್ನು ನಂಬಿ ರೂಂನಲ್ಲಿ ಉಳಿದುಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ.ಮಾರನೇ ದಿನ (ಏ.1) ತನಗೆ ಓಡಾಡಲು ಬಿಎಂಡಬ್ಲ್ಯೂ ಕಾರ್ ಬೇಕೆಂದು ಕೇಳಿದಾಗ ಹೋಟೆಲ್ನವರು ಅದರಂತೆ ವ್ಯವಸ್ಥೆ ಮಾಡಿದ್ದಾರೆ.

ಅಂದು ಸಂಜೆವರೆಗೂ ಕಾರಿನಲ್ಲಿ ಓಡಾಡಿದ್ದಾನೆ. ಸಂಜೆ ಕಾರು ಚಾಲಕನಿಗೆ ನಾನು ಮತ್ತೆ ಹೋಟೆಲ್ಗೆ ಹೋಗುವುದಿಲ್ಲ. ತನ್ನನ್ನು ಏರ್ ಪೋರ್ಟ್ ಗೆ ಡ್ರಾಪ್ ಮಾಡುವಂತೆ ತಿಳಿಸಿದ್ದಾನೆ. ಆದರೆ ಕಾರು ಚಾಲಕ ತನಗೆ ಹೋಟೆಲ್ನವರು ಡ್ರಾಪ್ ಮಾಡಲು ಹೇಳಿಲ್ಲವೆಂದು ವಾಪಸು ಸುಧೀರ್ ನನ್ನ ಹೋಟೆಲ್ ಬಳಿ ಕರೆದುಕೊಂಡು ಬಂದಿದ್ದಾರೆ.

ಕಾರು ಬಾಡಿಗೆ ಹಾಗೂ ರೂಮಿನ ಬಾಡಿಗೆ ಸೇರಿ 80 ಸಾವಿರ ಪಾವತಿಸುವಂತೆ ಹೋಟೆಲ್ ಸಿಬ್ಬಂದಿ ಸೂಚಿಸಿದಾಗ ಆರೋಪಿಯು ತನ್ನ ಕ್ರೆಡಿಟ್ ಕಾರ್ಡ್ ನೀಡಿದ್ದಾನೆ. ಆದರೆ ಹಣ ಸಂದಾಯವಾಗಿಲ್ಲ. ಈ ವಿಚಾರವಾಗಿ ಹೋಟೆಲ್ ಸಿಬ್ಬಂದಿ ಹಾಗೂ ಈತನ ನಡುವೆ ವಾಗ್ವಾದ ವಾಗಿದೆ. ನಂತರ ಆರೋಪಿಯು ತನ್ನ ಬಳಿ 10,750 ರೂ. ಮಾತ್ರವಿದೆ. ಉಳಿದ ಹಣವನ್ನು ನಂತರ ಕೊಡುವುದಾಗಿ ಹೇಳಿದ್ದಾನೆ.

ರಾತ್ರಿಯಾದರೂ ಬಿಲ್ ಪಾವತಿಸದಿದ್ದಾಗ ಹೋಟೆಲ್ ಸಿಬ್ಬಂದಿ ಬಳಿಕ ಆತನಿಗೆ ಬಿಲ್ ಪಾವತಿಸುವಂತೆ ಕೇಳಿದಾಗ ನಾನು ಪೂರ್ತಿ ಹಣ ಪಾವತಿಸಿರುವುದಾಗಿ ವಾದ ಮಾಡಿದ್ದಾನೆ. ಈತನ ನಡುವಳಿಕೆಯಿಂದ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ತಕ್ಷಣ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿ ಪೊಲೀಸರು ಆರೋಪಿ ಸುೀಧಿರ್ನ ಮೊಬೈಲ್ ಪಡೆದು ಕರೆಗಳ ಬಗ್ಗೆ ಪರಿಶೀಲಿಸಿದಾಗ, ಸ್ಟಾರ್ ಹೋಟೆಲ್ಗಳಲ್ಲಿ ಉಳಿದುಕೊಳ್ಳಲು ನಕಲಿ ಐಡಿ ಕ್ರಿಯೇಟ್ ಮಾಡಿ ಹಣ ಕಟ್ಟದೇ ವಂಚಿಸಿರುವುದು ಗೊತ್ತಾಗಿದೆ. ಆರೋಪಿಯು ಸೇನಾ ಅಧಿಕಾರಿ ಹೆಸರಿನಲ್ಲಿ ವಂಚಿಸಿರುವ ಬಗ್ಗೆ ಕೊಲ್ಕತಾದಾ ಪ್ರಗತಿ ಮೈದಾನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಹೈಗ್ರೌಂಡ್ಸ್ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News