ಮೈಸೂರು,ಅ.21- ನಾಡಹಬ್ಬ ಮೈಸೂರು ದಸರಾದ ಖಾಸಗಿ ದರ್ಬಾರ್ನ ಪ್ರಮುಖ ಆಕರ್ಷಣೆಯಾದ ಐತಿಹಾಸಿಕ ಜಟ್ಟಿ ಕಾಳಗ ಈ ಬಾರಿ ರದ್ದಾಗಿದೆ.
ಶಮಿ ಪೂಜೆಯಿಂದ ವಾಪಸಾದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅರಮನೆಗೆ ಹಿಂದಿರುಗಿದ ಬೆನ್ನಲ್ಲೇ ಜಟ್ಟಿ ಕಾಳಗ ರದ್ದಾಗಿದೆ. ರಾಜ ಮನೆತನದವರನ್ನು ಮನವೊಲಿಸಲು ಯತ್ನ ನಡೆದರೂ ಪ್ರಯೋಜನವಾಗಲಿಲ್ಲ.
ಮುಹೂರ್ತ ಮೀರಿದ್ದೇ ಕಾರಣ :
ನಿಗದಿತ ಮುಹೂರ್ತ ಮೀರಿದ್ದರಿಂದ ಜಟ್ಟಿ ಕಾಳಗವನ್ನು ರದ್ದುಗೊಳಿಸಲಾಗಿದೆ. ದಸರಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಜಟ್ಟಿ ಕಾಳಗ ರದ್ದಾಗಿರುವುದು ವಿಷಾದನೀಯ ಸಂಗತಿ.
ಪೊಲೀಸರ ವಿರುದ್ಧ ಆಕ್ರೋಶ :
ಕಾಳಗ ರದ್ದಾಗಲು ಪೊಲೀಸರ ಅಡಚಣೆಯೇ ಕಾರಣ ಎಂದು ಪೈಲ್ವಾನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಕಾಲಕ್ಕೆ ಪ್ರವೇಶ ಕಲ್ಪಿಸಿದ್ದರೆ ಸಿದ್ಧತೆ ಮಾಡಿಕೊಳ್ಳಬಹುದಿತ್ತು. ಆದರೆ ಪೊಲೀಸರು ಸರಿಯಾದ ಸಮಯಕ್ಕೆ ಒಳಗೆ ಬಿಡದ ಕಾರಣ ಮುಹೂರ್ತ ಮೀರಿತು ಎಂದು ಪೈಲ್ವಾನರು ಪೊಲೀಸರ ವರ್ತನೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
