ನವದೆಹಲಿ,ಏ.5- ಮುಂದಿನ ಪ್ರಧಾನಮಂತ್ರಿ ಯಾರು ಎಂಬ ವಿಚಲಿತಕಾರಿ ಚರ್ಚೆ ಸದ್ಯಕ್ಕೆ ಅನಗತ್ಯ. ಇಂಡಿಯಾ ಘಟಬಂಧನ್ ಚುನಾವಣೆಯಲ್ಲಿ ಗೆಲುವು ಕಂಡ ಬಳಿಕ ಒಟ್ಟಾಗಿ ಚರ್ಚಿಸಿ ನಾಯಕತ್ವದ ಕುರಿತು ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ. ಪಕ್ಷದ ಕಚೇರಿಯಲ್ಲಿಂದು ಕಾಂಗ್ರೆಸ್ ಪ್ರಣಾಳಿಕೆಯ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಅವರು, ಬಿಜೆಪಿಯ ಭಾರೀ ಪ್ರಚಾರವನ್ನು ಲೇವಡಿ ಮಾಡಿದರು.
ಈ ಮೊದಲು ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಭಾರತ ಪ್ರಕಾಶಿಸುತ್ತದೆ ಎಂಬ ಘೋಷಣೆಯೊಂದಿಗೆ ದೊಡ್ಡ ಪ್ರಚಾರ ನಡೆಸಲಾಯಿತು. ಅದನ್ನು ಯಾರು ಮಾಡಿದ್ದರು, ಅದರ ಪರಿಣಾಮ ಏನಾಯಿತು ಎಂದು ನಮ್ಮ ಕಣ್ಣೆದುರಿಗಿದೆ. ಪ್ರಸ್ತುತ ಮೋದಿಯವರ ಸರ್ಕಾರ ಅಂತಹುದೇ ಪ್ರಚಾರ ನಡೆಸುತ್ತಿದೆ. ಅಂತಾರಾಷ್ಟ್ರೀಯ ದೃಷ್ಟಿಕೋನ ಹಾಗೂ ಮೂರ್ನಾಲ್ಕು ದಿಕ್ಕಿನಲ್ಲಿ ಜನರನ್ನು ದಾರಿ ತಪ್ಪಿಸುವ ಪ್ರಚಾರ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಆರ್ಥಿಕ ಏಕ ಸ್ವಾಮ್ಯತೆಯನ್ನು ತಮ್ಮ ಅಧೀನದಲ್ಲಿಟ್ಟುಕೊಂಡಿದ್ದಾರೆ. ಜಾರಿ ನಿರ್ದೇಶನಾಲಯ, ಸಿಬಿಐ, ಆದಾಯ ತೆರಿಗೆ ಸೇರಿದಂತೆ ಕೇಂದ್ರ ತನಿಖಾ ಸಂಸ್ಥೆಗಳನ್ನು ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ.
ದೇಶದ ರಾಜಕಾರಣದಲ್ಲಿ ಹಿಂದೆಂದೂ ಈ ರೀತಿ ಆಗಿರಲಿಲ್ಲ. ವಿರೋಧಪಕ್ಷಗಳ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ವಿಪಕ್ಷಗಳ ನಾಯಕರ ಸಾಮಾಜಿಕ ಜಾಲತಾಣಗಳ ಮೇಲೂ ನಿಯಂತ್ರಣ ತರಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ಆಡಳಿತಾರೂಢ ಬಿಜೆಪಿ ಧಮ್ಕಿ ಹಾಕಿ, ಒತ್ತಡ ಹೇರಿ, ಹಣಕಾಸು ವಸೂಲಿ ಮಾಡುತ್ತಿದೆ. ನಮ್ಮಲ್ಲಿದ್ದ ಭ್ರಷ್ಟರು ಈಗ ಬಿಜೆಪಿಗೆ ಹೋಗಿದ್ದಾರೆ. ಎಲೆಕ್ಟ್ರೋಲ್ ಬಾಂಡ್‍ನಲ್ಲಿ ಬಿಜೆಪಿಯ ಭ್ರಷ್ಟಾಚಾರದ ನೀಲನಕ್ಷೆಯೇ ಸಿಗುತ್ತಿದೆ. ಯಾವಾಗ ಆದಾಯ ತೆರಿಗೆ ಮತ್ತು ಇಡಿ ದಾಳಿಯಾಯಿತು, ಅದರ ಬಳಿಕ ಎಷ್ಟು ಹಣ ಸಂಗ್ರಹವಾಯಿತು, ಗುತ್ತಿಗೆಗಳನ್ನು ನೀಡಿದ ಬಳಿಕ ಎಷ್ಟು ಬಾಂಡ್‍ಗಳನ್ನು ಮಾರಾಟ ಮಾಡಲಾಯಿತು ಎಂಬ ಎಲ್ಲಾ ವಿಚಾರಗಳೂ ಕಣ್ಣೆದುರಿಗಿವೆ ಎಂದು ಹೇಳಿದರು.
ಈಗಿನ ಲೋಕಸಭಾ ಚುನಾವಣೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ರಕ್ಷಕರು ಮತ್ತು ಅದನ್ನು ನಾಶಮಾಡಲು ಹೊರಟಿರುವವರ ನಡುವಿನ ಸಂಘರ್ಷವಾಗಿದೆ ಎಂದರು.ಇದೇ ವೇಳೆ ಮಾತನಾಡಿದ ಪ್ರಣಾಳಿಕೆ ಸಮಿತಿಯ ಅಧ್ಯಕ್ಷ ಪಿ.ಚಿದಂಬರಂ, ಸರ್ಕಾರಿ ನೌಕರರ ಹಳೆ ಪಿಂಚಣಿ ವ್ಯವಸ್ಥೆಯನ್ನು ಮರು ಜಾರಿಗೊಳಿಸುವ ವಿಚಾರವನ್ನು ನಾವು ಮಾಡುತ್ತಿಲ್ಲ, ಕೇಂದ್ರ ಸರ್ಕಾರ ಆರ್ಥಿಕ ಇಲಾಖೆ ಕಾರ್ಯದರ್ಶಿ ನೇತೃತ್ವದಲ್ಲಿ ಎನ್‍ಪಿಎಸ್‍ನ ಪರಿಷ್ಕರಣೆ ಮತ್ತು ಓಪಿಎಸ್‍ನ ಸಾಧಕ-ಬಾಧಕಗಳ ಪರಿಶೀಲನೆಗೆ ಸಮಿತಿ ರಚಿಸಿದೆ. ಅದರ ವರದಿ ಬರುವ ಮೊದಲೇ ಓಪಿಎಸ್ ಬಗ್ಗೆ ನಮ್ಮ ನಿಲುವನ್ನು ಹೇಳುವುದು ಆತುರದ ಕ್ರಮವಾಗಲಿದೆ ಎಂಬ ಕಾರಣಕ್ಕಾಗಿ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಈ ಹಿಂದೆ ಯುಪಿಎ ಸರ್ಕಾರದಲ್ಲಿ ಶೇ.7.5 ರಷ್ಟು ಬೆಳವಣಿಗೆಯ ದರ ಇತ್ತು. ಮೋದಿ ಸರ್ಕಾರ ಈ ಅಂಕಿ ಅಂಶಗಳನ್ನು ಪರಿಷ್ಕರಣೆ ಮಾಡಿ 6.7 ಎಂದು ನಂಬಿಸುವ ಯತ್ನ ಮಾಡಿದೆ. ಕಳೆದ 10 ವರ್ಷಗಳ ಎನ್‍ಡಿಎ ಆಡಳಿತದಲ್ಲಿ ಬೆಳವಣಿಗೆಯ ದರ 5.9 ಕ್ಕೆ ಕುಸಿದಿದೆ. ಶೇ. 1.6 ರಷ್ಟು ವ್ಯತ್ಯಾಸದ ಈ ಬೆಳವಣಿಗೆಯ ದರ ದೇಶದಲ್ಲಿ ಭಾರೀ ಪರಿಣಾಮವನ್ನು ಉಂಟುಮಾಡಿದೆ. ಬಡವರ ಆರ್ಥಿಕತೆಯನ್ನು ಕುಗ್ಗಿಸಿದೆ, ಉದ್ಯೋಗ ನಷ್ಟ, ಹೂಡಿಕೆ ಪ್ರಮಾಣದಲ್ಲಿ ನಿರೀಕ್ಷಿತ ಯಶಸ್ಸು ಕಂಡಿಲ್ಲ, ಕಲ್ಯಾಣ ಯೋಜನೆಗಳು ಸಂಪೂರ್ಣ ಮೂಲೆಗುಂಪಾಗಿವೆ, ಮೋದಿ ಸರ್ಕಾರ ಶ್ರೀಮಂತರಿಂದ, ಶ್ರೀಮಂತರಿಗಾಗಿ, ಶ್ರೀಮಂತರಿಗೋಸ್ಕರ ನಡೆಯುತ್ತಿದೆ ಎಂದರು.
ಯುಪಿಎ ಅವಧಿಯಲ್ಲಿ 24 ಕೋಟಿ ಜನ ಬಡತನ ರೇಖೆಗಿಂತ ಹೊರಬಂದಿದ್ದರು. ಎನ್‍ಡಿಎ ಅವಯಲ್ಲಿ 23 ಕೋಟಿ ಜನ ಬಡತನಕ್ಕೆ ಸಿಲುಕಿದ್ದಾರೆ. ಅವರನ್ನು ಮತ್ತೆ ಆರ್ಥಿಕ ಬೆಳವಣಿಗೆಯ ಮುಖ್ಯ ವಾಹಿನಿಗೆ ತರುವುದು ಕಾಂಗ್ರೆಸ್‍ನ ಧ್ಯೇಯೋದ್ದೇಶ ಎಂದು ಹೇಳಿದರು. ಪಕ್ಷಾಂತರಗೊಂಡ ಸಂದರ್ಭದಲ್ಲಿ ಅವರ ಸದಸ್ಯತ್ವವನ್ನು ತತ್‍ಕ್ಷಣವೇ ರದ್ದುಗೊಳ್ಳಲು ಪೂರಕವಾಗಿ ಸಂವಿಧಾನದ 10ನೇ ಶೆಡ್ಯೂಲ್ ತಿದ್ದುಪಡಿ ತಂದು ಪಕ್ಷಾಂತರ ಕಾಯ್ದೆಯನ್ನು ಬಲಿಷ್ಠಗೊಳಿಸುವುದಾಗಿ ತಿಳಿಸಿದರು.