Friday, May 3, 2024
Homeರಾಷ್ಟ್ರೀಯಕಾಂಗ್ರೆಸ್ ಸಾಧಿಸಬಹುದಾದಂತ ಭರವಸೆಗಳನ್ನು ಮಾತ್ರ ನೀಡುತ್ತದೆ : ಮಲ್ಲಿಕಾರ್ಜುನ್ ಖರ್ಗೆ

ಕಾಂಗ್ರೆಸ್ ಸಾಧಿಸಬಹುದಾದಂತ ಭರವಸೆಗಳನ್ನು ಮಾತ್ರ ನೀಡುತ್ತದೆ : ಮಲ್ಲಿಕಾರ್ಜುನ್ ಖರ್ಗೆ

ನವದೆಹಲಿ,ಏ.5- ಕಾಂಗ್ರೆಸ್ ಪಕ್ಷ ಕಾರ್ಯಸಾಧುವಾದಂತಹ ಭರವಸೆಗಳನ್ನು ಮಾತ್ರ ನೀಡುತ್ತದೆ, ಜನರನ್ನು ನಂಬಿಸಲು ಉತ್ಪ್ರೇಕ್ಷೆಯ ಆಶ್ವಾಸನೆಗಳನ್ನು ಪ್ರಕಟಿಸುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಎಐಸಿಸಿ ಕೇಂದ್ರ ಕಚೇರಿಯಲ್ಲಿಂದು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ನಾವು ಭರವಸೆಗಳನ್ನು ನೀಡಿ ಭಾಷಣ ಮಾಡಿದರೆ ಸಾಲುವುದಿಲ್ಲ. ಅದನ್ನ ಮನೆಮನೆಗೆ ತಲುಪಿಸಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್ ಪಕ್ಷ ಈ ಮೊದಲು ನೀಡಿದ್ದ ಎಲ್ಲಾ ಭರವಸೆಗಳನ್ನೂ ಈಡೇರಿಸಿದೆ. ಪ್ರಸ್ತುತ ಅಧಿಕಾರದಲ್ಲಿರುವ ಹಿಮಾಚಲ ಪ್ರದೇಶ, ಕರ್ನಾಟಕ, ತೆಲಂಗಾಣ ರಾಜ್ಯಗಳಲ್ಲೂ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದೇವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಅಧಿಕಾರ ಸಿಕ್ಕರೆ ಪ್ರಣಾಳಿಕೆಯ ಎಲ್ಲಾ ವಾಗ್ದಾನಗಳನ್ನೂ ಜಾರಿಗೆ ತರುತ್ತೇವೆ ಎಂದು ವಿವರಿಸಿದರು.

ಬಿಜೆಪಿ ಚಂದಾ ಕೊಡು, ದಂಧೆ ಮಾಡು ಎಂಬ ಧೋರಣೆ ಅನುಸರಿಸುತ್ತಿದೆ. ಪ್ರಧಾನಿಯವರು ನಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಾರೆ. ಆದರೆ 50ಕ್ಕೂ ಹೆಚ್ಚು ಭ್ರಷ್ಟ ನಾಯಕರನ್ನು ಬಿಜೆಪಿಗೆ ಸೇರಿಸಿಕೊಂಡಿದ್ದಾರೆ. ನಮ್ಮಲ್ಲಿದ್ದ ಭ್ರಷ್ಟಾಚಾರಿಗಳು ಬಿಜೆಪಿ ಸೇರಿದಾಕ್ಷಣ ಸ್ವಚ್ಛಗೊಳ್ಳುವುದು ಹೇಗೆ ಎಂದು ಪ್ರಶ್ನಿಸಿದರು.

ಈ ಹಿಂದೆ ನಮ್ಮ ಸರ್ಕಾರದಲ್ಲಿ ಆರ್‍ಟಿಇ, ಆರ್‍ಟಿಐ, ಉದ್ಯೋಗ ಖಾತ್ರಿ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ರೂಪಿಸಲಾಗಿತ್ತು. ಅದರ ಹಿಂದೆ ಸೋನಿಯಾಗಾಂಧಿಯವರ ಒತ್ತಡವಿತ್ತು. ಪ್ರತಿ ಸಂಪುಟ ಸಭೆಯ ಬಳಿಕವೂ ಉದ್ಯೋಗ ಖಾತ್ರಿ ಯೋಜನೆ ಜಾರಿಯ ಬಗ್ಗೆ ಸೋನಿಯಾಗಾಂಧಿಯವರು ಸಚಿವರುಗಳನ್ನು ಪ್ರಶ್ನಿಸುತ್ತಿದ್ದರು ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರಿಗೆ 10 ವರ್ಷಗಳಲ್ಲಿ ಇಂತಹ ಒಂದು ಜನಪರ ಯೋಜನೆಗಳನ್ನು ಜಾರಿಗೊಳಿಸಲಾಗಿಲ್ಲ. ಇಡಿ, ಆದಾಯ ತೆರಿಗೆಗಳನ್ನು ದುರ್ಬಳಕೆ ಮಾಡಿಕೊಂಡು ವಿಪಕ್ಷಗಳನ್ನು ಬೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನಾವು ಬೆದರುವ ಪ್ರಶ್ನೆಯೇ ಇಲ್ಲ. ಸೋನಿಯಾಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್‍ನ ಯಾರ ಬಳಿಯೂ ಹೆದರಿಕೆ ಎಂಬ ಪದ ಸುಳಿಯುವುದಿಲ್ಲ. ರಾಹುಲ್‍ಗಾಂಧಿಯವರು ಗಲಬಭೆಪೀಡಿತ ಮಣಿಪುರಕ್ಕೆ ಭೇಟಿ ನೀಡುವ ಧೈರ್ಯ ತೋರಿಸುವುದಾದರೆ ಪ್ರಧಾನಿಯವರಿಗೆ ಏಕೆ ಸಾಧ್ಯವಾಗುವುದಿಲ್ಲ ಎಂದು ಖರ್ಗೆ ಪ್ರಶ್ನಿಸಿದರು.

ಚುನಾವಣೆಯಲ್ಲಿ ಹೋರಾಟದ ಸಮಾನ ವೇದಿಕೆ ಇರಬೇಕು, ಆದರೆ ಪ್ರಸ್ತುತ ಅಂತಹ ವ್ಯವಸ್ಥೆಯಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಕಾನೂನು ಮೀರಿ ಆದಾಯ ತೆರಿಗೆ ಇಲಾಖೆ ದಂಡ ಹಾಕಿದೆ.ಬ್ಯಾಂಕ್ ಖಾತೆಗಳನ್ನು ಭರ್ತಿ ಮಾಡಲಾಗಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಮೀರಿ ಮೋದಿ ನಡೆದುಕೊಳ್ಳುತ್ತಿದ್ದಾರೆ. ಅವರನ್ನು ಅಧಿಕಾರದಿಂದ ದೂರವಿಡದೇ ಇದ್ದರೆ ಪ್ರಜಾಪ್ರಭುತ್ವಕ್ಕೆ ಅಪಾಯ ತಪ್ಪಿದ್ದಲ್ಲ ಎಂದು ಖರ್ಗೆ ಎಚ್ಚರಿಸಿದರು.

RELATED ARTICLES

Latest News