ನವದೆಹಲಿ,ಏ.5- ಹದಿನೆಂಟನೇ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ಪರಿಸ್ಥಿತಿ ಕೈ ಬದಲಾಗುತ್ತಿದೆ ಎಂಬ ಘೋಷಣೆಯೊಂದಿಗೆ ಭರವಸೆಗಳ ನ್ಯಾಯಪತ್ರವನ್ನು ಇಂದು ಬಿಡುಗಡೆ ಮಾಡಿದೆ. ದೆಹಲಿಯ ಎಐಸಿಸಿಯ ಕಚೇರಿಯಲ್ಲಿಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನ್ಯಾಯಪತ್ರವನ್ನು ಅನಾವರಣಗೊಳಿಸಿದರು. ನಾಳೆ ಜೈಪುರ ಮತ್ತು ತೆಲಂಗಾಣದಲ್ಲಿ ಬೃಹತ್ ಬಹಿರಂಗ ಸಭೆಗಳಲ್ಲಿ ಪ್ರಣಾಳಿಕೆಯನ್ನು ಜನರ ಮುಂದಿಡುವುದಾಗಿ ಕಾಂಗ್ರೆಸ್ ತಿಳಿಸಿದೆ.
ಸುಮಾರು 2-3 ತಿಂಗಳಿನಿಂದಲೂ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ನೇತೃತ್ವದಲ್ಲಿ ಪ್ರಣಾಳಿಕಾ ಸಮಿತಿ ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಿ ಪ್ರಣಾಳಿಕೆಯನ್ನು ಸಿದ್ಧಪಡಿಸಿದೆ. ಪ್ರಮುಖವಾಗಿ ಯುವಕರು, ಕೃಷಿಕರು, ಮಹಿಳೆಯರು, ಬಡವರು ಮತ್ತು ಭಾಗಿದಾರರ ವರ್ಗದಲ್ಲಿ ತಲಾ 5 ರಂತೆ 25 ಭರವಸೆಗಳನ್ನು ಜನರ ಮುಂದಿಡುತ್ತಿದೆ. ಅದರಲ್ಲಿ ನಿರುದ್ಯೋಗಿ ಯುವಕರಿಗೆ ಒಂದು ಲಕ್ಷ ರೂ. ವೆಚ್ಚದೊಂದಿಗೆ ಕೌಶಲ್ಯ ತರಬೇತಿ ನೀಡಿ ಮೊದಲ ಉದ್ಯೋಗ ದೊರಕಿಸಿಕೊಡುವ ಭರವಸೆಯನ್ನು ಘೋಷಿಸಲಾಗಿದೆ.
30 ಲಕ್ಷ ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ಮಾಡುವುದು, ನವೋದ್ಯಮಿಗಳಿಗೆ ಶೇ. 50 ರಷ್ಟು ಆರ್ಥಿಕ ನೆರವು ಸೇರಿದಂತೆ ಮಹತ್ವದ 8 ಭರವಸೆಗಳನ್ನು ನೀಡಲಾಗಿದೆ.ಬಡಕುಟುಂಬದ ಮಹಿಳೆಯರಿಗೆ ಮಹಾಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಖಚಿತ ಆದಾಯದ ಭರವಸೆ ನೀಡಲಾಗಿದ್ದು, ಪ್ರತಿ ವರ್ಷ ಒಂದು ಲಕ್ಷ ರೂ. ಆರ್ಥಿಕ ಸೌಲಭ್ಯ ನೀಡುವುದು, ಮಹಿಳಾ ಸಬಲೀಕರಣಗಳನ್ನೊಳಗೊಂಡಂತೆ 14 ಭರವಸೆಗಳನ್ನು ಘೋಷಿಸಲಾಗಿದೆ.
ರೈತರಿಗೆ ಸಾಲಮನ್ನಾ ಮತ್ತು ಕೃಷಿ ಬೆಂಬಲ ಬೆಲೆಗೆ ಕಾನೂನಿನ ಬಲ ನೀಡುವುದೂ ಸೇರಿದಂತೆ 14 ಭರವಸೆಗಳನ್ನು ನೀಡಲಾಗಿದೆ.
ಸಮಾನತೆಗಾಗಿ ಜಾತಿ ಜನಗಣತಿ ನಡೆಸಿ ಎಲ್ಲಾ ಜನಾಂಗಗಳ ಬಡವರಿಗೆ ಅನುಕೂಲ ಮಾಡಿಕೊಡುವುದು, ಶೇ.50 ರಷ್ಟು ಮೀಸಲಾತಿಯ ಮಿತಿಯನ್ನು ಹೆಚ್ಚಿಸುವುದು, ಶೇ.10 ರಷ್ಟು ಮೀಸಲಾತಿ ನೀಡುವ ಇಡಬ್ಲ್ಯೂಎಸ್ ಅನ್ನು ಯಾವುದೇ ಜಾತಿ ಮತ್ತು ಧರ್ಮದ ತಾರತಮ್ಯವಿಲ್ಲದೆ ಎಲ್ಲಾ ದುರ್ಬಲ ವರ್ಗದವರಿಗೆ ವಿಸ್ತರಿಸುವುದಾಗಿ ತಿಳಿಸಲಾಗಿದೆ.
ಎಸ್‍ಸಿ, ಎಸ್ಟಿ, ಓಬಿಸಿ ಸಮುದಾಯಗಳಿಗೆ ಮೀಸಲಿಟ್ಟ ಬ್ಯಾಕ್‍ಲಾಗ್ ಹುದ್ದೆಗಳನ್ನು ಒಂದು ವರ್ಷದಲ್ಲಿ ಭರ್ತಿ ಮಾಡುವುದು ಸೇರಿದಂತೆ 23 ಭರವಸೆಗಳನ್ನು ನೀಡಲಾಗಿದೆ.ಧಾರ್ಮಿಕ, ಭಾಷಾ ಅಲ್ಪಸಂಖ್ಯಾತರಿಗಾಗಿ 9 ಭರವಸೆಗಳನ್ನು, ಹಿರಿಯ ನಾಗರಿಕರು, ವಿಶೇಷ ಚೇತನರು ಹಾಗೂ ತೃತೀಯ ಲಿಂಗಿ ಸಮುದಾಯಗಳ ಶ್ರೇಯೋಭಿವೃದ್ಧಿಗೆ 11 ಭರವಸೆಗಳನ್ನು ನೀಡಲಾಗಿದೆ.
ಆರೋಗ್ಯ ವಲಯದಲ್ಲಿ ಪ್ರಾಥಮಿಕ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವುದು, ಗರಿಷ್ಠ 25 ಲಕ್ಷ ರೂ.ವರೆಗೂ ನಗದು ರಹಿತ ಸಾರ್ವತ್ರಿಕ ಆರೋಗ್ಯ ಕಾಳಜಿ ಸೇರಿದಂತೆ 19 ಭರವಸೆಗಳನ್ನು ನೀಡಲಾಗಿದೆ.
ಎನ್‍ಇಟಿಯನ್ನು ಜನಪರವಾಗಿ ಪರಿಷ್ಕರಿಸುವುದು, ಆರ್‍ಟಿಇ ಕಾಯ್ದೆಯನ್ನು 12ನೇ ತರಗತಿಯವರೆಗೂ ವಿಸ್ತರಿಸುವುದೂ ಸೇರಿದಂತೆ ಶಿಕ್ಷಣ ವಲಯಕ್ಕೆ 25, ಕ್ರೀಡಾ ಕ್ಷೇತ್ರಕ್ಕೆ 7, ಮೀನುಗಾರರು ಮತ್ತು ಮೀನುಗಾರಿಕಾ ಸಮುದಾಯಗಳಿಗೆ 10, ಕಾರ್ಮಿಕ ವರ್ಗಕ್ಕೆ 14 ಭರವಸೆಗಳನ್ನು ನೀಡಲಾಗಿದೆ.
ಮನ್ರೇಗಾ ಯೋಜನೆಯ ಕೂಲಿಯನ್ನು 400 ರೂ.ಗೆ ಹೆಚ್ಚಳ ಮಾಡುವುದು, ಅಂಗನವಾಡಿಯಲ್ಲಿ 14 ಲಕ್ಷ ಉದ್ಯೋಗ ಸೃಷ್ಟಿ, ಕೈಗಾರಿಕೆ ಮತ್ತು ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿ ಉತ್ಪಾದನೆ ಹೆಚ್ಚಳ ಮತ್ತು ಉದ್ಯೋಗ ಸೃಷ್ಟಿಗೆ ಬೆಂಬಲ ನೀಡುವುದಾಗಿ ತಿಳಿಸಲಾಗಿದೆ.
ಸಂವಿಧಾನದ ರಕ್ಷಣೆಗೆ ಸಂಬಂಧಪಟ್ಟಂತೆ 18 ಭರವಸೆಗಳನ್ನು ನೀಡಿದರೆ, ಕಳೆದ 10 ವರ್ಷಗಳಲ್ಲಿ ಎನ್‍ಡಿಎ ಸರ್ಕಾರ ಮಾಡಿರುವ ಹಾನಿಯನ್ನು ತಪ್ಪಿಸಲು ಪಿಎಂಕೆ ಮತ್ತು ಎಲೊಕ್ಟ್ರೋಲ್ ಬಾಂಡ್, ಸಾರ್ವಜನಿಕ ಆಸ್ತಿಗಳ ಮಾರಾಟ, ಗುಪ್ತಚರ ಇಲಾಖೆಯ ವೈಫಲ್ಯದ ಪುನರಾವರ್ತನೆ, ರಕ್ಷಣಾ ಒಪ್ಪಂದಗಳಲ್ಲಿನ ಭ್ರಷ್ಟಾಚಾರವನ್ನು ತನಿಖೆಗೊಳಪಡಿಸುವುದಾಗಿ ತಿಳಿಸಲಾಗಿದೆ.
ಮಾಧ್ಯಮಗಳ ಸ್ವಾಯತ್ತತೆಗೂ 8 ಭರವಸೆಗಳನ್ನು ನೀಡಲಾಗಿದೆ. ನ್ಯಾಯಾಂಗ ಸುಧಾರಣೆಗೆ 6, ಭ್ರಷ್ಟಾಚಾರ ನಿಗ್ರಹ, ಕಲೆ, ಸಂಸ್ಕøತಿ, ಪರಂಪರೆಯ ರಕ್ಷಣೆ, ಆರ್ಥಿಕತೆ ಸುಧಾರಣೆ, ಆಸ್ತಿ ಸೃಜನೆಗೆ ಹಲವು ಭರವಸೆಗಳನ್ನು ನೀಡಲಾಗಿದೆ.
ತೆರಿಗೆ ಪದ್ಧತಿ ಮತ್ತು ತೆರಿಗೆ ವ್ಯವಸ್ಥೆ ಸುಧಾರಣೆಗೆ 12, ಕೈಗಾರಿಕಾಭಿವೃದ್ಧಿ, ಮೂಲ ಸೌಕರ್ಯಾಭಿವೃದ್ಧಿಗೆ 10, ಒಕ್ಕೂಟ ವ್ಯವಸ್ಥೆ ಸಂರಕ್ಷಣೆಗೆ 12, ಗ್ರಾಮೀಣ ಮತ್ತು ನಗರ ಪ್ರದೇಶಗಳ ಅಭಿವೃದ್ಧಿಗೆ 10, ಈಶಾನ್ಯ ರಾಜ್ಯಗಳಿಗೆ 7, ರಾಷ್ಟ್ರೀಯ ಭದ್ರತೆಗೆ 11, ಆಂತರಿಕ ಸುರಕ್ಷತೆಗೆ 7, ವಿದೇಶಾಂಗ ನೀತಿಗೆ 12, ಪರಿಸರ ರಕ್ಷಣೆಗೆ 13, ನೀರಿನ ನಿರ್ವಹಣೆ ಮತ್ತು ನೈರ್ಮಲೀಕರಣಕ್ಕೆ 7 ಪ್ರಮುಖ ಭರವಸೆಗಳನ್ನು ಜನರ ಮುಂದಿಡಲಾಗಿದೆ.
ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‍ನ ನ್ಯಾಯ ಪತ್ರವನ್ನು ಬಡವರಿಗೆ ಅರ್ಪಣೆ ಮಾಡುವುದಾಗಿ ತಿಳಿಸಿದರು.ರಾಹುಲ್‍ಗಾಂಧಿ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯನ್ನು ಪಡೆದಿದೆ. ಆದರೆ ಇದರಲ್ಲಿನ ಎಲ್ಲಾ ಭರವಸೆಗಳು ಮತ್ತು ಅಭಿಪ್ರಾಯಗಳು ಜನರೇ ಹೇಳಿದ್ದಾಗಿವೆ. ನಾವು ಶೇ. 98 ರಷ್ಟಿರುವ ಜನಸಂಖ್ಯೆಯನ್ನು ತಲುಪಲು ಮತ್ತು ಅವರ ಶ್ರೇಯೋಭಿವೃದ್ಧಿಗಾಗಿ ಪ್ರಣಾಳಿಕೆ ರೂಪಿಸಿದ್ದೇವೆ.
ಬಿಜೆಪಿ ಶೇ.2 ರಷ್ಟಿರುವ ಶ್ರೀಮಂತ ಉದ್ಯಮಿಗಳನ್ನು ಕೇಂದ್ರವಾಗಿಟ್ಟುಕೊಂಡು ಪ್ರಣಾಳಿಕೆ ನೀಡಬಹುದು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ, ಪ್ರಣಾಳಿಕೆ ಸಮಿತಿಯ ಪಿ.ಚಿದಂಬರಂ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ಪವಾನ್ ಖೇರ, ಜಯರಾಂ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.