ಜಬಲ್ಪುರ, ಅ. 22- ನವರಾತ್ರಿ ಹಬ್ಬದ ಬಳಿಕ ದುರ್ಗಾ ಮೂರ್ತಿ ವಿಸರ್ಜನೆಗೆ ತೆರಳುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿಯ ಮೇಲೆ ವಿದ್ಯುತ್ ತಂತಿ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಆರು ಮಂದಿ ವಿದ್ಯುತ್ ಆಘಾತಕ್ಕೆ ಒಳಗಾಗಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯಲ್ಲಿ ಇಂದು ಮುಂಜಾನೆ ನಡೆದಿದೆ.
ಮಧ್ಯರಾತ್ರಿ 12.04ರ ಸುಮಾರಿಗೆ ಮಜ್ಹೌಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಮಂದಿ ಸಿವಿಲ್ ಲೈನ್ ಪಥ್ನಿಂದ ನಾರಿಲಿ ಕೆರೆಗೆ ದುರ್ಗಾ ಮೂರ್ತಿ ವಿಸರ್ಜನೆಗಾಗಿ ಮೆರವಣಿಗೆಯಲ್ಲಿ ತೆರಳುತ್ತಿದ್ದರು.
ಮೂರ್ತಿಯನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಸಾಗಲು ಅನುಕೂಲವಾಗುವಂತೆ ಕೆಲವರು ಕೆಳಕ್ಕೆ ಜೋತುಬಿದ್ದಿದ್ದ ಹೈವೋಲ್ಟೇಜ್ ವಿದ್ಯುತ್ ತಂತಿಯನ್ನು ಕೋಲಿನ ಸಹಾಯದಿಂದ ಮೇಲಕ್ಕೆ ಎತ್ತಿದ್ದರು. ಈ ವೇಳೆ ತಂತಿಯು ಹೈಟೆನ್ಷನ್ ವಿದ್ಯುತ್ ಲೈನ್ಗೆ ತಾಗಿದ್ದು, ವಿದ್ಯುತ್ ಪ್ರವಹಿಸಿದ ಬಳಿಕ ತಂತಿ ತುಂಡಾಗಿ ಟ್ರ್ಯಾಕ್ಟರ್ ಟ್ರಾಲಿಯ ಮೇಲೆ ಬಿದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಟ್ರ್ಯಾಕ್ಟರ್ನಲ್ಲಿ ಕುಳಿತಿದ್ದ ವಿಕಾಸ್ ರಜಪೂತ್ (22) ಮತ್ತು ಪ್ರಿನ್ಸ್ ಚೌಹಾಣ್ (23) ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಉಪವಿಭಾಗಾಧಿಕಾರಿ ಮೊಹಂತಿ ಮರವೀ ತಿಳಿಸಿದ್ದಾರೆ.ಗಾಯಗೊಂಡ ಆರು ಮಂದಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಳಿಕ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಮಜ್ಹೌಲಿಯಲ್ಲಿ ರಸ್ತೆ ತಡೆ ನಡೆಸಿದರು. ಕಡಿಮೆ ಎತ್ತರದಲ್ಲಿ ನೇತಾಡುತ್ತಿದ್ದ ವಿದ್ಯುತ್ ತಂತಿಗಳ ಬಗ್ಗೆ ಸಭೆಯ ವೇಳೆ ಪೊಲೀಸರು, ಆಡಳಿತಾಧಿಕಾರಿಗಳು ಹಾಗೂ ಮೆರವಣಿಗೆ ಆಯೋಜನಾ ಸಮಿತಿಯ ಸದಸ್ಯರಿಗೆ ಮಾಹಿತಿ ನೀಡಿ, ಅವುಗಳನ್ನು ಸರಿಪಡಿಸುವಂತೆ ಮನವಿ ಮಾಡಲಾಗಿತ್ತು. ಆದರೆ, ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆಗೆ ಕಾರಣವೇನು ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.
