Homeರಾಜ್ಯಅ.26ರಂದು ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ರೈತರ ಜೊತೆ ಸಿಎಂ ಸಭೆ

ಅ.26ರಂದು ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ರೈತರ ಜೊತೆ ಸಿಎಂ ಸಭೆ

ಬೆಂಗಳೂರು, ಅ.22- ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಅಕ್ಟೋಬರ್‌ 26ರಂದು ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ರೈತರ ಸಭೆ ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿಯವರು ಈ ವಿಚಾರವಾಗಿ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಇದೇ ತಿಂಗಳ 26 ರಂದು ನಡೆಯುವ ಸಭೆಯಲ್ಲಿ ತಾವೂ ಭಾಗವಹಿಸುವುದಾಗಿ ಜೋಷಿಯವರು ಆರಂಭದಲ್ಲೇ ಹೇಳಿದ್ದರು. ಆದರೆ ಕೊನೇ ಕ್ಷಣದಲ್ಲಿ ಸಭೆಯಲ್ಲಿ ಭಾಗವಹಿಸಲಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಮುಂದೊಂದು ದಿನ ತಾವು ಪ್ರತ್ಯೇಕ ಸಭೆ ಮಾಡುವುದಾಗಿ ಹೇಳಿದ್ದಾರೆ ಎಂದರು.

ಕಬ್ಬು ಬೆಳೆಗಾರರ ಸಮಸ್ಯೆ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ ಅಧಿಕಾರಿಗಳನ್ನು ಕೂಡ ಸಭೆಯಲ್ಲಿ ಭಾಗವಹಿಸಲು ಸೂಚಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.ಇಂದು ದೆಹಲಿಗೆ ತಾವು ಭೇಟಿ ನೀಡುತ್ತಿದ್ದು, ಮೂರ್ನಾಲ್ಕು ಗಂಟೆಗಳ ಕಾಲ ಅಲ್ಲಿದ್ದು, ಕೆಲವಾರು ಸಭೆಗಳನ್ನು ನಡೆಸಿ, ಕೇಂದ್ರ ಸಚಿವರನ್ನು ಭೇಟಿ ಮಾಡಿ ಸಂಜೆಯೇ ವಾಪಸ್‌‍ ಬರುತ್ತೇನೆ ಎಂದರು.

ನಾಳೆ ಬೆಂಗಳೂರಿಗೆ ಪೋಲ್ಯಾಂಡ್‌ ಪ್ರಧಾನಿ ಆಗಮಿಸುತ್ತಿದ್ದು, ತಾವು ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಬೇಕಿದೆ. ಅದರ ಬಳಿಕ ಮತ್ತೊಂದು ದಿನ ದೆಹಲಿಗೆ ತೆರಳುವುದಾಗಿ ಹೇಳಿದರು.
ಮಹದಾಯಿ ನದಿ ವಿವಾದಕ್ಕೆ ಸಂಬಂಧಪಟ್ಟಂತೆ ರೈತರ ಬೇಡಿಕೆಗಳಿವೆ. ಅಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೂ ಈ ಬಗ್ಗೆ ತಾವು ದೆಹಲಿ ಭೇಟಿಯ ವೇಳೆ ಚರ್ಚೆ ಮಾಡುತ್ತೇನೆ ಎಂದರು.

ತುಂಗಾಭದ್ರಾ ನದಿಯಲ್ಲಿ ನೀರಿನ ಕೊರತೆ ಎದುರಾಗಿದೆ, ಅಲ್ಲಲ್ಲಿ ಮೋಟರ್‌-ಪಂಪ್‌ಗಳನ್ನು ಅಳವಡಿಸಿ ಆ ನೀರನ್ನು ಬಳಸಿಕೊಳ್ಳುತ್ತಿರುವುದರಿಂದ ತೊಂದರೆಯಾಗುತ್ತಿದೆ. ಕಾವೇರಿಯಂತೆ ತುಂಗಾಭದ್ರೆಯಲ್ಲೂ ನೀರಿಲ್ಲದೆ ಬರಿದಾಗಿದೆ ಎಂದು ಹೇಳಿದರು.ನೀರಿನ ಕೊರತೆಯ ಬಗ್ಗೆ ಆಂಧ್ರಪ್ರದೇೕಶದ ಮುಖ್ಯಮಂತ್ರಿ ಜೊತೆ ಚರ್ಚಿಸಲು ಅಗತ್ಯ ಇದೆ. ನಾನಾದರೂ ಅಲ್ಲಿಗೆ ಹೋಗುತ್ತೇನೆ ಅಥವಾ ಆಂಧ್ರಪ್ರದೇಶ ಮುಖ್ಯಮಂತ್ರಿಯವರೇ ದೆಹಲಿಗೆ ಬಂದರೆ ಭೇಟಿ ಮಾಡುತ್ತೇನೆ ಎಂದು ಹೇಳಿದರು.

ಪ್ರಧಾನಿಯವರ ಜೊತೆ ಚರ್ಚೆಗೆ ಪ್ರಯತ್ನ:
ಬರ ವಿಚಾರವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಷಾ ಅವರನ್ನು ಭೇಟಿ ಮಾಡಿ ಕ್ರಿಯಾ ಯೋಜನೆಯ ಚರ್ಚೆ ನಡೆಸಬೇಕಿದೆ. ಕೇಂದ್ರದಿಂದ ಬರ ವೀಕ್ಷಣೆಗೆ ಮತ್ತೊಂದು ತಂಡ ಬರಬೇಕು. ಬೇರೆ ರಾಜ್ಯದವರು ಏನೆಲ್ಲಾ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ ಎಂಬುದನ್ನು ಪರಿಶೀಲಿಸಬೇಕು. ಈ ಎಲ್ಲಾ ವಿಚಾರಗಳಿಗಾಗಿ ಅಧಿಕಾರಿಗಳ ತಂಡವೊಂದನ್ನು ನೇಮಿಸಿದ್ದೇನೆ. ಅವರ ಜೊತೆ ಕೂಡ ಚರ್ಚೆ ನಡೆಸಬೇಕಿದೆ ಎಂದು ಹೇಳಿದರು.

RELATED ARTICLES
spot_img

Latest News