ಬೆಂಗಳೂರು,ಅ.22- ಮೈಸೂರು ದಸರಾ ಜಂಬೂ ಸವಾರಿ ನೋಡಿಕೊಂಡು ವಾಪಸ್ ಬೈಕ್ನಲ್ಲಿ ಹಿಂದಿರುಗುತ್ತಿದ್ದಾಗ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಕೆಂಗೇರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಗೊರಗುಂಟೆಪಾಳ್ಯದ ನಿವಾಸಿ ರಜತ್ (21) ಹಾಗೂ ಇವರ ಸಂಬಂಧಿ ಶಿವಮೊಗ್ಗ ಮೂಲದ ನಾಗೇಂದ್ರ (20) ಮೃತಪಟ್ಟ ಯುವಕರು.
ರಜತ್ ಅವರು ದಿನಸಿ ಅಂಗಡಿ ಇಟ್ಟುಕೊಂಡಿದ್ದು ಇವರ ಸಂಬಂಧಿ ಶಿವಮೊಗ್ಗ ಮೂಲದ ನಾಗೇಂದ್ರ ಅವರು ಡಿಪ್ಲೋಮಾ ವ್ಯಾಸಂಗ ಮಾಡಿದ್ದು, ಇಂಟರ್ನ್ಶಿಪ್ ಮಾಡುವ ಸಲುವಾಗಿ ನಗರಕ್ಕೆ ಬಂದು ಇವರ ಮನೆಯಲ್ಲಿ ಉಳಿದುಕೊಂಡಿದ್ದರು. ಇವರಿಬ್ಬರೂ ಮೈಸೂರು ದಸರಾ ಜಂಬೂ ಸವಾರಿ ನೋಡಲು ಬೈಕ್ನಲ್ಲಿ ಮೈಸೂರಿಗೆ ಹೋಗಿದ್ದರು. ರಾತ್ರಿ ವಾಪಸ್ ಮನೆಗೆ ಹಿಂದಿರುಗುತ್ತಿದ್ದಾಗ ಇಂದು ಬೆಳಗಿನ ಜಾವ 2.30ರ ಸುಮಾರಿನಲ್ಲಿ ಮೈಸೂರು ರಸ್ತೆಯ ಮೈಲಸಂದ್ರ ಜಂಕ್ಷನ್ ಬಳಿ ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದೆ.
ಪರಿಣಾಮ ಇಬ್ಬರೂ ರಸ್ತೆಗುರುಳಿದ್ದು ಸವಾರ ರಜತ್ ಅವರಿಗೆ ಗಂಭೀರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂಬದಿ ಸವಾರ ನಾಗೇಂದ್ರ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದು ಕೆಂಗೇರಿ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಇಬ್ಬರ ಮೃತದೇಹಗಳನ್ನು ಆರ್ಆರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
