ಬೆಂಗಳೂರು,ಅ.22- ರಾಜ್ಯದಲ್ಲಿ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಉಂಟಾಗಿದ್ದ ತೀವ್ರ ವಿದ್ಯುತ್ ಬಿಕ್ಕಟ್ಟನ್ನು ನಿಭಾಯಿಸಲು ಉಂಟಾದ ಹೆಚ್ಚುವರಿ ವೆಚ್ಚವನ್ನು ಸರಿದೂಗಿಸಲು, ಅಕ್ಟೋಬರ್ ಮತ್ತು ನವೆಂಬರ್ ಅವಧಿಯಲ್ಲಿ ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ 40 ರಿಂದ 50 ಪೈಸೆಯಷ್ಟು ಹೆಚ್ಚಿಸಲು ರಾಜ್ಯ ಸರ್ಕಾರ ಹಾಗೂ ಇಂಧನ ಇಲಾಖೆ ಯೋಜಿಸಿವೆ.
ಮುಂಬರುವ ನವಂಬರ್ 1 ರಿಂದಲೇ ನೂತರ ದರ ಪರಿಷ್ಕರಣೆಯಾಗುವ ಸಂಭವವಿದೆ. ಈ ದರ ಏರಿಕೆಯು ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ ನಿಯಮಾವಳಿಗಳ ಅಡಿಯಲ್ಲಿ ಬರಲಿದ್ದು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಂತಿಮ ಅನುಮೋದನೆಯೊಂದಿಗೆ ಜಾರಿಗೆ ಬರಲಿದೆ. ಉಚಿತ ವಿದ್ಯುತ್ ಒದಗಿಸುವ ಗೃಹ ಜ್ಯೋತಿ ಯೋಜನೆಯ ವ್‌ಯಾಪ್ತಿಗೆ ಬಾರದ ಗ್ರಾಹಕರು ಮತ್ತು ವಾಣಿಜ್ಯ ಬಳಕೆಯ ಗ್ರಾಹಕರು ಈ ಹೆಚ್ಚುವರಿ ದರವನ್ನು ತಮ ಮಾಸಿಕ ಬಿಲ್‌ನಲ್ಲಿ ಪಾವತಿಸಬೇಕಾಗುತ್ತದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ನೈಋತ್ಯ ಮುಂಗಾರು ಮಳೆಯ ಅಭಾವ ಮತ್ತು ಒಣ ಹವೆಯ ವಾತಾವರಣದಿಂದಾಗಿ ರಾಜ್ಯದಾದ್ಯಂತ ವಿದ್ಯುತ್‌ಗೆ ಅಭೂತಪೂರ್ವ ಬೇಡಿಕೆ ಸೃಷ್ಟಿಯಾಗಿತ್ತು. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ವಿದ್ಯುತ್ ಬೇಡಿಕೆಯು ಬರೋಬ್ಬರಿ 20,000 ಮೆಗಾವ್ಯಾಟ್ ದಾಟಿ ಹೊಸ ದಾಖಲೆ ಬರೆದಿದೆ.
ಪವನ ವಿದ್ಯುತ್ ಉತ್ಪಾದನೆ ಕುಸಿತ:
ರಾಜ್ಯದಲ್ಲಿ ಜಲ, ಉಷ್ಣ, ಸೌರ ಮತ್ತು ಪವನ ಶಕ್ತಿಯ ಮೂಲಗಳಿಂದ ಒಟ್ಟು 22,000 ಮೆಗಾವ್ಯಾಟ್‌ವರೆಗೆ ಬೇಡಿಕೆ ಪೂರೈಸುವ ಸಾಮರ್ಥ್ಯವಿದ್ದರೂ, ಗಾಳಿಯ ವೇಗ ಕಡಿಮೆಯಾದ ಕಾರಣ ಪವನ ವಿದ್ಯುತ್ ಉತ್ಪಾದನೆ ತೀವ್ರವಾಗಿ ಕುಸಿಯಿತು. ದೈನಂದಿನ 2,500 – 3,000 ಮೆಗಾವ್ಯಾಟ್ ತಲುಪುತ್ತಿದ್ದ ಪವನ ವಿದ್ಯುತ್ ಉತ್ಪಾದನೆ ಕೇವಲ 200 – 300 ಮೆಗಾವ್ಯಾಟ್‌ಗೆ ಕುಸಿಯಿತು.ರಾತ್ರಿಯ ಸಮಯದಲ್ಲಿ ಸೌರ ವಿದ್ಯುತ್ ಲಭ್ಯವಿಲ್ಲದಿರುವುದರಿಂದ ಮತ್ತು ಪವನ ವಿದ್ಯುತ್ ಉತ್ಪಾದನೆಯೂ ಇಳಿಕೆಯಾದ್ದರಿಂದ ಪವರ್ ಗ್ರಿಡ್ ಮೇಲಿನ ಒತ್ತಡ ತೀವ್ರವಾಗಿ ಹೆಚ್ಚಾಯಿತು.
ದುಬಾರಿ ವಿದ್ಯುತ್ ಖರೀದಿ :
ರಾಜ್ಯದಲ್ಲಿದ್ದ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಪದೇ ಪದೇ ಉಂಟಾಗುತ್ತಿದ್ದ ವಿದ್ಯುತ್ ಕಡಿತವನ್ನು ತಡೆಯಲು ಸರ್ಕಾರವು ಮುಕ್ತ ಮಾರುಕಟ್ಟೆಯಿಂದ ಹೆಚ್ಚಿನ ದರ ನೀಡಿ ವಿದ್ಯುತ್ ಖರೀದಿಸಬೇಕಾಯಿತು. ಸಾಮಾನ್ಯವಾಗಿ ನಾವು ಪ್ರತಿ ಯೂನಿಟ್‌ಗೆ ಸುಮಾರು 6 ರಂತೆ ವಿದ್ಯುತ್ ಖರೀದಿಸುತ್ತೇವೆ. ಮಾರುಕಟ್ಟೆಯಲ್ಲಿ ಗರಿಷ್ಠ ಎಂದರೆ 7 ರಿಂದ 8 ಇರುತ್ತದೆ. ಆದರೆ ಸೆಪ್ಟೆಂಬರ್‌ನಲ್ಲಿ ದಕ್ಷಿಣ ಭಾರತದ ಇತರ ರಾಜ್ಯಗಳಲ್ಲೂ ತೀವ್ರ ವಿದ್ಯುತ್ ಅಭಾವವಿದ್ದ ಕಾರಣ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕೆಲವು ರಾಜ್ಯಗಳು ಹಗಲಿನ ವೇಳೆಯಲ್ಲೇ ಪ್ರತಿ ಯೂನಿಟ್‌ಗೆ 25 ರಿಂದ 30 ಪಾವತಿಸಿ ವಿದ್ಯುತ್ ಖರೀದಿಸಿದವು ಎಂದು ಇಂಧನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗ್ರಾಹಕರಿಗೆ ವಿದ್ಯುತ್ ವಿವೇಕಯುತ ಬಳಕೆ ಸಲಹೆ :
ರಾತ್ರಿ ವೇಳೆಯ ಗ್ರಿಡ್ ಒತ್ತಡವನ್ನು ಕಡಿಮೆ ಮಾಡಲು ಮತ್ತು ವಿದ್ಯುತ್ ಬಳಕೆಯನ್ನು ನಿಯಂತ್ರಿಸಲು ಬೆಸ್ಕಾಂ ಸೇರಿದಂತೆ ವಿವಿಧ ಎಸ್ಕಾಂಗಳು ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ನಿರ್ಧರಿಸಿವೆ.
ಹಗಲಿನ ಬಳಕೆ ಹೆಚ್ಚಿಸಿ :
ವಾಷಿಂಗ್ ಮೆಷಿನ್‌ಗಳು, ಹೈ-ಹಾರ್ಸ್‌ಪರ್ವ ವಾಟರ್ ಪಂಪ್‌ಗಳು ಸೇರಿದಂತೆ ಹೆಚ್ಚು ವಿದ್ಯುತ್ ಎಳೆಯುವ ಉಪಕರಣಗಳನ್ನು ಸೌರಶಕ್ತಿ ಲಭ್ಯವಿರುವ ಹಗಲಿನ ವೇಳೆಯಲ್ಲೇ ಬಳಸಿ ಎಂದು ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ವಾಣಿಜ್ಯ ಸಂಸ್ಥೆಗಳ ಸವಾಲು :
ವಾಣಿಜ್ಯ ಸಂಸ್ಥೆಗಳ ಕಾರ್ಯಾಚರಣೆ ನಿಯಂತ್ರಿಸಲು ಸಾಧ್ಯವಿಲ್ಲದಿದ್ದರೂ, ಗೃಹ ಬಳಕೆಯ ಗ್ರಾಹಕರು ಸ್ವಯಂಪ್ರೇರಿತವಾಗಿ ರಾತ್ರಿ ವೇಳೆಯ ಬಳಕೆಯನ್ನು ಯೋಜಿಸಿದರೆ ಜಾಲದ ಮೇಲಿನ ಒತ್ತಡ ಕಡಿಮೆಯಾಗಲಿದೆ.ಕರ್ನಾಟಕವು ಈಗಾಗಲೇ 3 ವರ್ಷಗಳ ಅವಧಿಯ ದರ ನಿಗದಿ ವ್‌ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, 2025ರ ದರ ಪರಿಷ್ಕರಣೆಯು 2028ರವರೆಗೆ ಜಾರಿಯಲ್ಲಿರುತ್ತದೆ. ಆದಾಗ್ಯೂ, ಸೆಪ್ಟೆಂಬರ್‌ನಲ್ಲಾದ ಅಸಾಧಾರಣ ವೆಚ್ಚವನ್ನು ಭರಿಸಲು FPPCA ಅಡಿಯಲ್ಲಿ ಈ ತಾತ್ಕಾಲಿಕ ಅಲ್ಪಾವಧಿ ಹೆಚ್ಚಳವನ್ನು ಕೈಗೊಳ್ಳಲಾಗುತ್ತಿದ್ದು, ಇದು ಮುಂಬರುವ ತಿಂಗಳಿಗೆ ಮಾತ್ರ ಅನ್ವಯಿಸಲಿದೆ ಎಂದು ಇಂಧನ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
