ಬೆಂಗಳೂರು,ಅ.22- ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳ ನಡುವಿನ ಪ್ರತಿಷ್ಠೆಯ ಕಣವಾಗಿರುವ ವಿಧಾನ ಪರಿಷತ್ತಿನ ಎರಡು ಶಿಕ್ಷಕರ ಹಾಗೂ ಎರಡು ಪದವೀಧರ ಕ್ಷೇತ್ರಗಳ ಚುನಾವಣೆಯ ಮತದಾನ ನಾಳೆ ನಡೆಯಲಿದ್ದು, ಚುನಾವಣಾ ಆಯೋಗ ಸಕಲ ರೀತಿಯಲ್ಲಿ ಸಜ್ಜಾಗಿದೆ.
ಬೆಂಗಳೂರು ಶಿಕ್ಷಕರ, ಈಶಾನ್ಯ ಶಿಕ್ಷಕರ, ಪಶ್ಚಿಮ ಪದವೀಧರ ಹಾಗೂ ಆಗ್ನೇಯ ಪದವೀಧರ ಕ್ಷೇತ್ರಗಳ ವ್ಯಾಪ್ತಿಯ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿನ ಮತಗಟ್ಟೆಗಳಲ್ಲಿ ನಾಳೆ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಶಿಕ್ಷಕ ಹಾಗೂ ಪದವೀಧರ ಮತದಾರರು ಒಟ್ಟು 43 ಅಭ್ಯರ್ಥಿಗಳ ಭವಿಷ್ಯವನ್ನು ನಾಳೆ ಬರೆಯಲಿದ್ದಾರೆ.
ಲೋಕಸಭೆ ಚುನಾವಣೆಯಂತೆ ವಿಧಾನ ಪರಿಷತ್ತಿನ ಈ ಚುನಾವಣೆಯಲ್ಲೂ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸ್ಪರ್ಧಿಸಿದ್ದರೆ, ಉಳಿದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಮಾಜಿ ಉಪ ಸಭಾಪತಿ ಪುಟ್ಟಣ್ಣ, ಜೆಡಿಎಸ್ನಿಂದ ಎ.ಪಿ.ರಂಗನಾಥ ಸೇರಿದಂತೆ ಒಟ್ಟು ಆರು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಶರಣಪ್ಪ ಮಟ್ಟೂರು, ಬಿಜೆಪಿಯಿಂದ ಶಶೀಲ್ ಜಿ.ನಮೋಶಿ ಸೇರಿದಂತೆ ಒಟ್ಟು 13 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಶಶಿ ಹುಲಿಕುಂಟೆಮಠ್, ಬಿಜೆಪಿಯಿಂದ ಕೆ.ಎಂ.ಸುರೇಶ ಅವರು ಸೇರಿದಂತೆ 10 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಮೋಹನ ಲಿಂಬಿಕಾಯಿ, ಬಿಜೆಪಿಯಿಂದ ಸಂಕನೂರ ಎಸ್.ವಿ. ಸೇರಿದಂತೆ ಒಟ್ಟು 14 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಪದವೀಧರ ಮತ್ತು ಶಿಕ್ಷಕ ಮತದಾರರು ಈ ಚುನಾವಣೆಯಲ್ಲಿ ಪ್ರಾಶಸ್ತ್ಯದ ಮತ ಚಲಾವಣೆ ಮಾಡಬೇಕಾಗಿದೆ. ಅ.27ರಂದು ನಾಲ್ಕು ಕ್ಷೇತ್ರಗಳ ಮತ ಎಣಿಕೆ ನಡೆಯಲಿದ್ದು, ಅಂದು ಸಂಜೆ ವೇಳೆಗೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆಗಳಿವೆ.
ವಿಧಾನ ಪರಿಷತ್ ಸದಸ್ಯರಾದ ಚಿದಾನಂದ ಎಂ.ಗೌಡ, ಸಂಕನೂರ ಎಸ್.ವಿ., ಶಶೀಲ್ ಜಿ.ನಮೋಶಿ, ಪುಟ್ಟಣ್ಣ ಅವರು ನವೆಂಬರ್ 11ರಂದು ವಿಧಾನ ಪರಿಷತ್ ಸದಸ್ಯ ಸ್ಥಾನದಿಂದ ನಿವೃತ್ತಿಯಾಗಲಿದ್ದು, ಇವರ ನಿವೃತ್ತಿಯಿಂದ ತೆರವಾಗುವ ಸ್ಥಾನಗಳಿಗೆ ಚುನಾವಣಾ ಆಯೋಗ ಚುನಾವಣೆ ನಡೆಸುತ್ತಿದೆ. ಅಕ್ಟೋಬರ್ 31ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗಲಿದ್ದು, ಚುನಾವಣಾ ನೀತಿ ಸಂಹಿತೆಯು ಅಂತ್ಯಗೊಳ್ಳಲಿದೆ.
