Homeಬೆಂಗಳೂರುದಸರಾ ಹಬ್ಬ : ಕೆ.ಆರ್‌. ಮಾರುಕಟ್ಟೆಯೊಂದರಲ್ಲೇ 100 ಟನ್‌ ತ್ಯಾಜ್ಯ ಸಂಗ್ರಹ

ದಸರಾ ಹಬ್ಬ : ಕೆ.ಆರ್‌. ಮಾರುಕಟ್ಟೆಯೊಂದರಲ್ಲೇ 100 ಟನ್‌ ತ್ಯಾಜ್ಯ ಸಂಗ್ರಹ

ಬೆಂಗಳೂರು, ಅ.22- ದಸರಾ ಹಬ್ಬದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ನಗರದಲ್ಲಿ ತ್ಯಾಜ್ಯದ ಪ್ರಮಾಣ ಹೆಚ್ಚಾಗಿದ್ದು, ಪ್ರಮುಖ ವಾಣಿಜ್ಯ ಕೇಂದ್ರವಾದ ಕೆ.ಆರ್‌. ಮಾರುಕಟ್ಟೆಯೊಂದರಲ್ಲೇ 100 ಟನ್‌ಗೂ ಹೆಚ್ಚು ಕಸ ಸಂಗ್ರಹವಾಗಿದೆ.

ಹಬ್ಬದ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಿದ್ದರಿಂದ ಬಾಳೆ ದಿಂಡು, ಕುಂಬಳಕಾಯಿ, ಮಾವಿನ ಎಲೆ ಸೇರಿದಂತೆ ವಿವಿಧ ಬಗೆಯ ಹಸಿ ತ್ಯಾಜ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗಿವೆ. ಇವು ಮಾರುಕಟ್ಟೆಯ ರಸ್ತೆಗಳ ಬದಿಯಲ್ಲಿ ಹಾಗೂ ವ್ಯಾಪಾರ ಮಳಿಗೆಗಳ ಸುತ್ತಮುತ್ತ ಸಂಗ್ರಹವಾಗಿದ್ದವು. ಇದರಿಂದ ಕಸ ತೆರವುಗೊಳಿಸುವ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಯಿತು.

ನಗರದಲ್ಲಿ ಸಾಮಾನ್ಯ ದಿನಗಳಲ್ಲಿ ನಿತ್ಯ ಸರಾಸರಿ 6 ಸಾವಿರ ಟನ್‌ಗಳಷ್ಟು ತ್ಯಾಜ್ಯ ಸಂಗ್ರಹವಾಗುತ್ತದೆ. ಆದರೆ, ದಸರಾ ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಸುಮಾರು 100 ಟನ್‌ಗಳಿಗೂ ಹೆಚ್ಚು ತ್ಯಾಜ್ಯ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೆಚ್ಚುವರಿ ಸಿಬ್ಬಂದಿ ನಿಯೋಜನೆ:
ಹಬ್ಬದ ದಿನಗಳಲ್ಲಿ ಮಾರುಕಟ್ಟೆಗಳಲ್ಲಿ ತ್ಯಾಜ್ಯ ಸಂಗ್ರಹ ಹೆಚ್ಚಾಗುವ ಹಿನ್ನೆಲೆಯಲ್ಲಿ ಕಸ ವಿಲೇವಾರಿ ಕಾರ್ಯಕ್ಕೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅಲ್ಲದೆ, ತ್ಯಾಜ್ಯವನ್ನು ತ್ವರಿತವಾಗಿ ತೆರವುಗೊಳಿಸಲು ಹೆಚ್ಚುವರಿ ಕಸದ ಗಾಡಿಗಳ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಮಾರುಕಟ್ಟೆಯ ರಸ್ತೆಗಳು ಹಾಗೂ ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯಕ್ಕೆ ಒತ್ತು ನೀಡಲಾಗಿತ್ತು.

ಹಬ್ಬದ ಸಂದರ್ಭದಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯವನ್ನು ತಕ್ಷಣ ತೆರವುಗೊಳಿಸುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಸಂಗ್ರಹವಾಗದಂತೆ ನೋಡಿಕೊಳ್ಳುವುದು ಪಾಲಿಕೆಯ ಸಿಬ್ಬಂದಿಗೆ ಪ್ರಮುಖ ಸವಾಲಾಗಿತ್ತು.ದಸರಾ ಸೇರಿದಂತೆ ಹಬ್ಬಗಳ ಸಂದರ್ಭದಲ್ಲಿ ಮಾರುಕಟ್ಟೆ ಪ್ರದೇಶಗಳಲ್ಲಿ ತ್ಯಾಜ್ಯದ ಪ್ರಮಾಣ ಹೆಚ್ಚಾಗುವುದರಿಂದ ಸ್ವಚ್ಛತಾ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಲು ಹೆಚ್ಚುವರಿ ವ್ಯವಸ್ಥೆ ಮಾಡುವುದು ಅನಿವಾರ್ಯವಾಗಿದೆ. ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ ನಿಗದಿತ ಸ್ಥಳಗಳಲ್ಲಿ ಹಾಕಿದರೆ ಸ್ವಚ್ಛತಾ ಕಾರ್ಯ ಸುಗಮವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES
spot_img

Latest News