ಬೆಂಗಳೂರು, ಅ.22- ಪುಲಕೇಶಿನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ಸಂಭವಿಸಿದ ಸ್ಫೋಟ ದಲ್ಲಿ ಐಇಡಿ ಬಳಕೆಯಾಗಿರುವ ಶಂಕೆ ಹಿನ್ನೆಲೆಯಲ್ಲಿ ಎನ್‌ಐಎ ತನಿಖೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಈ ಸ್ಫೋಟಕ್ಕೆ ಐಇಡಿ ಬಳಕೆ ಮಾಡಿರುವ ಶಂಕೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ. ಮೂರು ಬ್ಯಾಟರಿಗಳನ್ನು ಬಳಸಿ ಸ್ಫೋಟಕ ಸಾಧನವನ್ನು ಸ್ಫೋಟಿಸಲಾಗಿದೆ ಎಂಬುದು ಸಹ ಗೊತ್ತಾಗಿದೆ.
ಈಗಾಗಲೇ ಸ್ಫೋಟದ ಬಗ್ಗೆ ಮಾಹಿತಿ ಪಡೆದಿರುವ ಎನ್‌ಐಎ ಅಧಿಕಾರಿ ಗಳು ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ವರದಿಗಳನ್ನು ಸಹ ಕೇಳಿದ್ದಾರೆ. ಇವೆಲ್ಲವೂ ಕೈ ಸೇರಿದ ನಂತರ ಸ್ಥಳ ಪರಿಶೀಲನೆ ಮಾಡಲಿದೆ. ವಿಧಿ-ವಿಜ್ಞಾನ ಪ್ರಯೋಗಾಲಯದ ವರದಿಗಳನ್ನು ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಸ್ಫೋಟದ ಬಗ್ಗೆ ಪುಲಿಕೇಶಿನಗರ ಠಾಣೆ ಪೊಲೀಸರು ಹಾಗೂ ಭಯೋತ್ಪಾದನಾ ನಿಗ್ರಹ ದಳದ (ಎಟಿಸಿ) ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಕಟ್ಟಡದ ಮಾಲೀಕರು, ಗುತ್ತಿಗೆದಾರ, ಸೆಕ್ಯೂರಿಟಿ ಗಾರ್ಡ್, ಸ್ಫೋಟದಿಂದ ಗಾಯಗೊಂಡಿರುವ ಇಬ್ಬರು ವ್ಯಕ್ತಿಗಳನ್ನು ಸಹ ಪೊಲೀಸರು ಈಗಾಗಲೇ ವಿಚಾರಣೆಗೊಳಪಡಿಸಿ ಕೆಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ನಿರ್ಮಾಣ ಹಂತದ ಈ ಕಟ್ಟಡಕ್ಕೆ ಸ್ಫೋಟಕ ತಂದಿಟ್ಟವರಾರು? ಅವರ ಉದ್ದೇಶ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
