Homeಮನರಂಜನೆಮಧ್ಯರಾತ್ರಿ ನಿದ್ದೆಗೆಡಿಸಿದ ದಸರಾ ಪಟಾಕಿ ಸದ್ದು, ಆಕ್ರೋಶ ವ್ಯಕ್ತಪಡಿಸಿದ ನಟಿ ರಮ್ಯಾ

ಮಧ್ಯರಾತ್ರಿ ನಿದ್ದೆಗೆಡಿಸಿದ ದಸರಾ ಪಟಾಕಿ ಸದ್ದು, ಆಕ್ರೋಶ ವ್ಯಕ್ತಪಡಿಸಿದ ನಟಿ ರಮ್ಯಾ

ಬೆಂಗಳೂರು, ಅ.22- ನಗರದಲ್ಲಿ ಬೆಳಗಿನ ಜಾವ 4 ಗಂಟೆವರೆಗೂ ಪಟಾಕಿ ಸಿಡಿಸಿ, ಅಬ್ಬರದ ಡಿಜೆ ಸದ್ದುಕೇಳುತ್ತಿರುವ ಕುರಿತು ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಿನ ಜಾವ ಸುಮಾರು 3 ಗಂಟೆಯಾದರೂ ಫನ್‌ ವರ್ಲ್ಡ್ ನಲ್ಲಿ ಪಟಾಕಿ ಸಿಡಿಸುವುದು ಮತ್ತು ಜೋರಾಗಿ ಸಂಗೀತ ಪ್ರಸಾರ ಮಾಡುವುದು ಮುಂದುವರಿದಿದೆ.

ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಪಟಾಕಿ ಸಿಡಿಸುವುದನ್ನು ಸುಪ್ರೀಂಕೋರ್ಟ್‌ ನಿಷೇಧಿಸಿದೆ. ವಿಶೇಷ ಅನುಮತಿ ಇದ್ದರೂ ಮಧ್ಯರಾತ್ರಿ 12 ಗಂಟೆಯ ನಂತರ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ ಎಂದು ಅವರು ತಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ವಿಶೇಷ ಸಂದರ್ಭಗಳಲ್ಲಿ ಕೆಲವು ವಿನಾಯಿತಿಗಳನ್ನು ಪರಿಗಣಿಸಬಹುದು ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ, ಮಧ್ಯರಾತ್ರಿ ಕಳೆದರೂ, ಬೆಳಗಿನ ಜಾವದವರೆಗೂ ಇಂತಹ ಶಬ್ದ ಮಾಲಿನ್ಯವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ರಮ್ಯಾ ಹೇಳಿದ್ದಾರೆ.

ಫನ್‌ ವರ್ಲ್‌್ಡ ಸುತ್ತಮುತ್ತ ಆಸ್ಪತ್ರೆಗಳಿದ್ದು, ಹಿರಿಯ ನಾಗರಿಕರು ಮತ್ತು ಮಕ್ಕಳು ವಾಸಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತಡರಾತ್ರಿಯವರೆಗೂ ಪಟಾಕಿ ಸಿಡಿಸಿ, ಅಬ್ಬರದ ಸಂಗೀತ ಪ್ರಸಾರ ಮಾಡುವುದು ಜನರಿಗೆ ತೊಂದರೆ ಉಂಟುಮಾಡುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.ಈ ಕುರಿತು ಬೆಂಗಳೂರು ನಗರ ಪೊಲೀಸ್‌‍ ಇಲಾಖೆ ಹಾಗೂ ಉತ್ತರ ವಿಭಾಗದ ಉಪ ಪೊಲೀಸ್‌‍ ಆಯುಕ್ತರು ತಕ್ಷಣ ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ರಮ್ಯಾ ಮನವಿ ಮಾಡಿದ್ದಾರೆ.

ದಸರಾ ವೇಳೆ ಪಟಾಕಿಗಳ ಅಬ್ಬರ:
ಪಟಾಕಿ ಮತ್ತು ಡಿ.ಜೆ.ಸದ್ದಿಗೆ ಮೂಲ ಕಾರಣ ಜೆ.ಸಿ.ನಗರದಲ್ಲಿನ ಐತಿಹಾಸಿಕ ದಸರಾ ಉತ್ಸವ ಕಾರಣ ಎಂದು ಹೇಳಲಾಗಿದೆ. ಪ್ರತಿವರ್ಷ ನಡೆಯುವ ಈ ಉತ್ಸವದಲ್ಲಿ ದೇವರ ಪಲ್ಲಕ್ಕಿ ಮೆರವಣಿಗೆ, ಹೂವಿನಿಂದ ಅಲಂಕರಿಸಿದ ಪಲ್ಲಕ್ಕಿಗಳು, ವಿದ್ಯುತ್‌ ದೀಪಗಳಿಂದ ಕಂಗೊಳಿಸುವ ರಸ್ತೆಗಳು ಹಾಗೂ ವಿವಿಧ ಮನರಂಜನಾ ಚಟುವಟಿಕೆಗಳು ಜನರನ್ನು ಆಕರ್ಷಿಸುತ್ತವೆ.

ಜೆ.ಸಿ. ನಗರದ ಜಯಮಹಲ್‌ ಮುಖ್ಯರಸ್ತೆಯಲ್ಲಿರುವ ಸರ್ಕಾರಿ ಶಾಲೆಯ ಮೈದಾನವನ್ನು ಕೇಂದ್ರವಾಗಿಟ್ಟುಕೊಂಡು ನಡೆಯುವ ಈ ಉತ್ಸವವು ಸುಮಾರು 10ರಿಂದ 11 ದಿನಗಳ ಕಾಲ ಸಂಭ್ರಮದಿಂದ ಜರುಗುತ್ತದೆ. ದಸರಾ ಮೇಳದಲ್ಲಿ ಬೃಹತ್‌ ಜೈಂಟ್‌ ವೀಲ್‌‍, ವಿವಿಧ ಮನರಂಜನಾ ಆಟಗಳು, ಆಹಾರ ಮಳಿಗೆಗಳು ಹಾಗೂ ರಾತ್ರಿ ವೇಳೆ ನಡೆಯುವ ವ್ಯಾಪಾರ ಚಟುವಟಿಕೆಗಳು ಪ್ರಮುಖ ಆಕರ್ಷಣೆಗಳಾಗಿವೆ.

ಸ್ಥಳೀಯ ದಸರಾ ಉತ್ಸವ ಸಮಿತಿ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಡೆಯುವ ಈ ಆಚರಣೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ. ದೇವರ ಮೆರವಣಿಗೆಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಸ್ಥಳೀಯ ಧಾರ್ಮಿಕ ಹಾಗೂ ಸಾಮಾಜಿಕ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ.
ನಿನ್ನೆ ದಸರಾ ಪ್ರಯುಕ್ತ ಬೆಂಗಳೂರು ಉತ್ತರ ಭಾಗದ ಆರ್‌.ಟಿ.ನಗರ, ಹೆಬ್ಬಾಳ, ಸಂಜಯನಗರ, ಮುನಿರೆಡ್ಡಿ ಪಾಳ್ಯ, ಸುಲ್ತಾನ್‌ ಪಾಳ್ಯ ಸೇರಿದಂತೆ ಸುತ್ತಮುತ್ತಲಿನಿಂದಲೂ ನೂರಾರು ದೇವರ ಮೆರವಣಿಗೆಗಳು ಸಾಗಿ ಬಂದಿದ್ದವು. ಇಡೀ ರಾತ್ರಿ ಅಬ್ಬರದ ಸಂಗೀತದ ಜೊತೆ, ಪಟಾಕಿಗಳ ಅಬ್ಬರ ಜೋರಾಗಿತ್ತು.

RELATED ARTICLES
spot_img

Latest News