Homeರಾಜ್ಯದೆಹಲಿಯಲ್ಲಿ ಹೈಕಮಾಂಡ್‌ ನಾಯಕರ ಜೊತೆ ಸಿಎಂ ಡಿಕೆಶಿ, ಪ್ರಿಯಾಂಕ್‌ ಖರ್ಗೆ ಪ್ರತ್ಯೇಕ ಮಾತುಕತೆ

ದೆಹಲಿಯಲ್ಲಿ ಹೈಕಮಾಂಡ್‌ ನಾಯಕರ ಜೊತೆ ಸಿಎಂ ಡಿಕೆಶಿ, ಪ್ರಿಯಾಂಕ್‌ ಖರ್ಗೆ ಪ್ರತ್ಯೇಕ ಮಾತುಕತೆ

ಬೆಂಗಳೂರು. ಅ.23- ರಾಜ್ಯದಲ್ಲಿ ಸ್ಟಿಂಗ್‌ ಆಪರೇಷನ್‌ ವಿಚಾರ ಗಂಭೀರ ಚರ್ಚೆಯಾಗುತ್ತಿರುವ ನಡುವೆಯೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಗೃಹ ಸಚಿವ ಪ್ರಿಯಾಂಕ್‌ ಖರ್ಗೆಯವರು ಹೈಕಮಾಂಡ್‌ ನಾಯಕರನ್ನು ಪ್ರತ್ಯೇಕವಾಗಿ ಭೇಟಿ ಮಾಡಿರುವುದು ನಾನಾ ರೀತಿಯ ಚರ್ಚೆಗೆ ಕಾರಣವಾಗಿದೆ.

ನಿನ್ನೆ ದೆಹಲಿಗೆ ತೆರಳಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಧ್ಯಾಹ್ನದ ವೇಳೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿದರು. ಆದರೆ ತಮ ಭೇಟಿಯ ವೇಳೆ ಸ್ಟಿಂಗ್‌ ಆಪರೇಷನ್‌ ಕುರಿತು ಯಾವುದೇ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅದೇ ವೇಳೆಗೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಕೂಡ ದೆಹಲಿಗೆ ಭೇಟಿ ನೀಡಿದ್ದು, ಕೆ.ಸಿ.ವೇಣುಗೋಪಾಲ್‌ ಅವರ ಭೇಟಿಗೆ ಆಗಮಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಸಂದಿಸಿದ್ದು ಕೆ.ಸಿ.ವೇಣುಗೋಪಾಲ್‌ ಜೊತೆ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ.

ಸಚಿವ ಪ್ರಿಯಾಂಕ್‌ ಅವರು ದೆಹಲಿಗೆ ಬರುವ ಬಗ್ಗೆ ನನಗೆ ಮಾಹಿತಿ ಇರಲಿಲ್ಲ ಎಂದು ಮುಖ್ಯಮಂತ್ರಿಯವರು ಹೇಳಿದ್ದು ಅಚ್ಚರಿ ಮೂಡಿಸಿತ್ತು. ವೇಣುಗೋಪಾಲ್‌ ಭೇಟಿಯ ಬಳಿಕ ಪ್ರಿಯಾಂಕ್‌ ಖರ್ಗೆಯವರು ಸ್ಟಿಂಗ್‌ ಆಪರೇಷನ್‌ ಬಗ್ಗೆ ಹೈಕಮಾಂಡ್‌ ನಾಯಕರಿಗೆ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸ್ಟಿಂಗ್‌ ಆಪರೇಷನ್‌ ನಡೆಸಲು ರೂಪಿಸಲಾಗಿದ್ದ ಸಂಚು ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ವಿರೋಧ ಪಕ್ಷಗಳು ಅದರಲ್ಲೂ ಜೆಡಿಎಸ್‌‍ ನಾಯಕ ಎಚ್‌.ಡಿ.ಕುಮಾರಸ್ವಾಮಿಯವರು ಇದನ್ನು ಆಧ್ಯತೆಯ ವಿಷಯವನ್ನಾಗಿ ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದ್ದರು. ಅಧಿಕಾರ ಹಂಚಿಕೆಯಾಗಲು ಸ್ಟಿಂಗ್‌ ಆಪರೇಷನ್‌ ಕೂಡ ಕಾರಣ ಎಂದು ಗಂಭೀರ ಆರೋಪ ಮಾಡಿದರು.

ಕಾಂಗ್ರೆಸ್‌‍ನಲ್ಲೇ ಸಿದ್ದರಾಮಯ್ಯ ಅವರ ಧ್ವನಿ ಅಡಗಿಸಲು ಸ್ಟಿಂಗ್‌ ಆಪರೇಷನ್‌ ಅಸ್ತ್ರ ಬಳಸಲಾಗಿದೆ ಎಂಬ ಟೀಕೆಗಳಿವೆ. ಅದಕ್ಕೆ ಪೂರಕ ಎಂಬಂತೆ ಇಲ್ಲಿವರೆಗೂ ಸಿದ್ದರಾಮಯ್ಯ ಅವರು ಬಹಿರಂಗವಾಗಿ ಎಲ್ಲಿಯೂ ಸಂಚನ್ನು ಅಲ್ಲಗಳೆದು ಹೇಳಿಕೆ ನೀಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಒಂದಿಷ್ಟು ಸ್ಪಷ್ಟನೆಗಳನ್ನು ನೀಡಿದ್ದು ಹೊರತು ಪಡಿಸಿದರೆ, ಉಳಿದೆಲ್ಲವೂ ಮುಗುಮಾಗಿದೆ.

ಕಾಂಗ್ರೆಸ್‌‍ನ ಒಳಗೊಳಗೆ ಸಿದ್ದರಾಮಯ್ಯ ಅವರ ಬಣ ಮತ್ತು ಡಿ.ಕೆ.ಶಿವಕುಮಾರ್‌ ಬಣದ ನಡುವೆ ಸ್ಟಿಂಗ್‌ ಆಪರೇಷನ್‌ನ ಸಂಘರ್ಷಗಳು ಬೂದಿ ಮುಚ್ಚಿದ ಕೆಂಡದಂತಾಗಿವೆ. ಈ ನಡುವೆ ಹೈಕಮಾಂಡ್‌ ನಾಯಕರಿಗೂ ರಾಜ್ಯ ರಾಜಕಾರಣದ ಗೊಂದಲಗಳ ಬಗ್ಗೆ ವರದಿ ತಲುಪಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಶೀಘ್ರವೇ ಮತ್ತೊಂದು ಸುತ್ತು ದೆಹಲಿಗೆ ಭೇಟಿ ನೀಡಿ ಸ್ಟಿಂಗ್‌ ಆಪರೇಷನ್‌ ಬಗ್ಗೆ ದಾಖಲೆಗಳ ಸಹಿತ ವರದಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

RELATED ARTICLES
spot_img

Latest News