Homeರಾಜ್ಯಸಿದ್ದರಾಮಯ್ಯನವರ ತೇಜೋವಧೆಗೆ ನಮ್ಮ ಪಕ್ಷದವರಿಂದಲೇ ಸ್ಟಿಂಗ್‌ ಆಪರೇಷನ್‌ : ಯತೀಂದ್ರ ಗಂಭೀರ ಆರೋಪ

ಸಿದ್ದರಾಮಯ್ಯನವರ ತೇಜೋವಧೆಗೆ ನಮ್ಮ ಪಕ್ಷದವರಿಂದಲೇ ಸ್ಟಿಂಗ್‌ ಆಪರೇಷನ್‌ : ಯತೀಂದ್ರ ಗಂಭೀರ ಆರೋಪ

ಮೈಸೂರು. ಅ.23- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೇಜೋವಧೆ ಮಾಡುವ ಸಲುವಾಗಿಯೇ ಸ್ಟಿಂಗ್‌ ಆಪರೇಷನ್‌ ನಡೆದಿದೆ ಎಂದು ನಗರಾಭಿವೃದ್ಧಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಟಿಂಗ್‌ ಆಪರೇಷನ್‌ನಲ್ಲಿ ತಮ್ಮದೇ ಪಕ್ಷದ ಮಹಿಳೆಯೊಬ್ಬರು ಇರುವುದು ಪತ್ತೆಯಾಗಿದೆ. ಒಬ್ಬ ಕಾರ್ಯಕರ್ತರು ಭಾಗಿಯಾಗಿದ್ದಾರೆ ಎಂದಾಕ್ಷಣಕ್ಕೆ ಇಡೀ ಪಕ್ಷವೇ ನಮ ವಿರುದ್ಧ ಇದೆ ಎಂದು ಭಾವಿಸಬೇಕಿಲ್ಲ. ಇದರ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯ ಬಳಿಕ ತಿಳಿದು ಬರಲಿದೆ ಎಂದು ಹೇಳಿದರು.

ಸ್ಟಿಂಗ್‌ ಆಪರೇಷನ್‌ ವಿಚಾರವಾಗಿ ದೂರು ನೀಡಿರುವ ತಮ ತಂದೆಯವರು ಸರಿಯಾದ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಸೂಚನೆ ನೀಡಿದ್ದಾರೆ. ರಾಕೇಶ್‌ ಶೆಟ್ಟಿಯವರನ್ನು ವಿಚಾರಣೆ ಮಾಡಿರುವುದು ಹಾಗೂ ಇತರ ಇಬ್ಬರನ್ನು ವಶಕ್ಕೆ ಪಡೆದಿರುವ ಬಗ್ಗೆ ತಂದೆಯವರಿಗೆ ಮಾಹಿತಿ ನೀಡಲಾಗಿದೆ. ಯಾರೇ ಭಾಗಿಯಾಗಿದ್ದರೂ ಬಂಧಿಸುವಂತೆ ಅವರು ಸೂಚನೆ ನೀಡಿದ್ದಾರೆ ಎಂದರು.

ನಮ ಪೊಲೀಸರು ಸರಿಯಾದ ತನಿಖೆ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಒಂದು ವೇಳೆ ಆ ರೀತಿಯಾಗದೇ ಇದ್ದರೆ, ಆಗ ಉನ್ನತ ಮಟ್ಟದ ತನಿಖೆ ಬಗ್ಗೆ ಚರ್ಚಿಸಬಹುದು ಎಂದು ಹೇಳಿದರು.
ಸಿದ್ದರಾಮಯ್ಯ ಅವರ ತೇಜೋವಧೆ ಹಾಗೂ ಬ್ಲಾಕ್‌ ಮೇಲ್‌ ಮಾಡಲು ಮತ್ತು ಲೆಗಸಿಯನ್ನು ಹಾಳು ಮಾಡಲು ಸ್ಟಿಂಗ್‌ ಆಪರೇಷನ್‌ ನಡೆಸಿರುವುದು ಕಂಡು ಬರುತ್ತದೆ. ಪುತ್ತೂರು ವಿಧಾನಸಭಾ ಚುನಾವಣೆಯ ಟಿಕೆಟ್‌ನ ಆಕಾಂಕ್ಷಿಯಾಗಿದ್ದ ಮಹಿಳೆಯೊಬ್ಬರು ಇದರಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ ಎಂದರು.

40 ವರ್ಷಗಳ ರಾಜಕೀಯ ಜೀವನದಲ್ಲಿ ಕಳಂಕ ರಹಿತ ಜೀವನ ನಡೆಸಿದ ಸಿದ್ದರಾಮಯ್ಯ ಅವರಿಗೆ ಸಹಜವಾಗಿಯೇ ಸ್ಟಿಂಗ್‌ ಆಪರೇಷನ್‌ನಿಂದ ಬೇಸರವಾಗಿದೆ. ರಾಜಕೀಯದ ಕೊನೆಯ ದಿನಗಳಲ್ಲಿ ಈ ರೀತಿಯ ಆರೋಪಗಳು ನೋವುಂಟು ಮಾಡಿವೆ. ಆದರೆ ತಂದೆಯವರ ತಪ್ಪಿಲ್ಲ ಎಂದು ತಮ ತಾಯಿಗೆ ಮನವರಿಕೆಯಾಗಿದೆ. ಹೀಗಾಗಿ ಅವರು ಯಾವುದೇ ರೀತಿಯ ಬೇಸರ ಮಾಡಿಕೊಂಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಚಿವರಿಗೆ ಅಡ್ಡಿಪಡಿಸಿದ್ದು ತಪ್ಪು:
ದಸರಾ ಆಚರಣೆಯ ಸಂದರ್ಭದಲ್ಲಿ ನಂದಿಧ್ವಜ ಪೂಜೆಗೆ ಮುಖ್ಯಮಂತ್ರಿಯವರೊಂದಿಗೆ ಆಗಮಿಸಿದ ಸಚಿವರನ್ನು ಪೊಲೀಸರು ತಡೆದು ನಿಲ್ಲಿಸಿದ್ದು ತಪ್ಪು. ಐಜಿಪಿ ಹಂತದ ಅಧಿಕಾರಿ ಆ ರೀತಿ ಏಕೆ? ಮಾಡಿದರು ಎಂದು ನನಗೆ ಗೊತ್ತಿಲ್ಲ. ಶಿಷ್ಠಾಚಾರದ ಪ್ರಕಾರ ಸಚಿವರನ್ನು ತಡೆಯಬಾರದಿತ್ತು. ಅಧಿಕಾರಿಗೆ ಯಾರಿಂದಲಾದರು ಸೂಚನೆ ಇತ್ತೆ ಎಂಬ ಮಾಹಿತಿ ತಮಗಿಲ್ಲ ಎಂದರು.

ಘಟನೆಯ ಬಗ್ಗೆ ತನಿಖೆಗಾಗಿ ತಂಡ ರಚಿಸಲಾಗಿದೆ. ಅದು ಶೀಘ್ರವೇ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ವರದಿ ನೀಡಲಿದೆ. ದಲಿತ ಸಚಿವರನ್ನು ಮಾತ್ರ ತಡೆಯಲಾಗಿದೆ ಎಂಬುದು ಸರಿಯಲ್ಲ. ತಡೆ ಹಿಡಿಯಲಾದ ಮೂವರು ಸಚಿವರು ದಲಿತರು ಎಂಬುದು ಆಕಸಿಕ. ಹಾಗೆಯೇ ಎಚ್‌.ಸಿ.ಬಾಲಕೃಷ್ಣ ಮತ್ತು ಪುಟ್ಟರಂಗ ಶೆಟ್ಟಿಯವರನ್ನು ತಡೆ ಹಿಡಿಯಲಾಗಿತ್ತು. ನಾನೇ ಹೋಗಿ ಅವರನ್ನು ಕರೆದುಕೊಂಡು ಬಂದೆ ಎಂದು ಹೇಳಿದರು.

ಅಂಬಾರಿಯಲ್ಲಿನ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವವರ ಪಟ್ಟಿಯಲ್ಲಿ ಮುಖ್ಯಮಂತ್ರಿಯವರ ಪತ್ನಿ ಹಾಗೂ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳ ಹೆಸರು ಇರಲಿಲ್ಲ. ಆದರೂ ಅವರು ಪುಷ್ಪಾರ್ಚನೆಯಲ್ಲಿ ಭಾಗವಹಿಸಿದ್ದಾರೆ. ಆದರೂ ತಪ್ಪಿಲ್ಲ. ಮುಖ್ಯಮಂತ್ರಿಯವರ ಪತ್ನಿ ಪುಷ್ಪಾರ್ಚನೆಯಲ್ಲಿ ಮಾತ್ರ ಭಾಗವಹಿಸಿದ್ದಾರೆ. ಬೇರೆ ಯಾವುದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿಲ್ಲ ಎಂದು ಹೇಳಿದರು.

ದಸರಾ ಸಂದರ್ಭದಲ್ಲಿ ಸರ್ಕಾರಿ ಜಾಹೀರಾತಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಫೋಟೊ ಹಾಕುವ ವಾಡಿಕೆ ಮೊದಲಿನಿಂದಲೂ ಇಲ್ಲ. ಇದನ್ನು ತಾವು ಪರಿಶೀಲಿಸಿ ಖಚಿತ ಪಡಿಸಿಕೊಂಡಿದ್ದೇನೆ. ಆದರೆ ಈ ಬಾರಿ ರಾಜ ಮನೆತನದವರ ಫೋಟೊ ಹಾಕಿದ್ದಾರೆ. ಇದು ಕೂಡ ಮೊದಲಿನಿಂದಲೂ ಇರಲಿಲ್ಲ. ಅದರಲ್ಲೂ ಬೇರೆ ಪಕ್ಷದವರ ಫೋಟೊ ಹಾಕಿರುವುದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.

ಈ ಬಾರಿ ದಸರಾ ಅತ್ಯಂತ ಅಚ್ಚುಕಟ್ಟಾಗಿ ನಡೆದಿದೆ. ಕಳೆದ ಬಾರಿಯಂತೆ ಆಸನಗಳ ಗೊಂದಲಗಳಾಗಿಲ್ಲ. ವಿದೇಶಿಯವರು, ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ದಸರಾ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ಮಾತನಾಡಿದ್ದಾರೆ. ಹಿಂದಿನ ದಸರಾದಲ್ಲಿ 15 ಲಕ್ಷ ಜನ ಭಾಗವಹಿಸಿದ್ದರು. ಈ ಬಾರಿ ಇನ್ನೂ ಹೆಚ್ಚು ಮಂದಿ ಭಾಗವಹಿಸಿರುವ ಸಾಧ್ಯತೆ ಇದೆ ಎಂದು ಹೇಳಿದರು.

RELATED ARTICLES
spot_img

Latest News