ಬೆಂಗಳೂರು,ಏ.6- ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಇಂದಿನಿಂದ ಅಧಿಕೃತವಾಗಿ ಪ್ರಚಾರ ಯಾತ್ರೆಗೆ ಚಾಲನೆ ನೀಡಿದ್ದು, ರಣಬಿಸಿಲಿನಲ್ಲಿ ಮತದಾರರ ಮನವೊಲಿಕೆಗೆ ನಾಯಕರು ಬೆವರಿಳಿಸಲಾರಂಭಿಸಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡುಮಲೆ ಯಲ್ಲಿನ ಗಣೇಶ ದೇವಸ್ಥಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಜಾಧ್ವನಿ ಯಾತ್ರೆ-2 ಕ್ಕೆ ಚಾಲನೆ ನೀಡಿದರು.
ಕುರುಡುಮಲೆ ದೇವಸ್ಥಾನದಿಂದ ಪ್ರಚಾರ ಆರಂಭಿಸಿದರೆ ಪಕ್ಷಕ್ಕೆ ಒಳ್ಳೆಯದಾಗುತ್ತದೆ. ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು ಎಂಬ ನಂಬಿಕೆ ಕಾಂಗ್ರೆಸ್ ಪಕ್ಷದಲ್ಲಿ ಮೊದಲಿನಿಂದಲೂ ಇದೆ. ಈ ಮೊದಲು ಹಲವು ಚುನಾವಣೆಗಳಲ್ಲಿ ಇಲ್ಲಿಂದಲೇ ಪ್ರಚಾರ ಆರಂಭಿಸಿದ್ದನ್ನು ಸ್ಮರಿಸಬಹುದು. ಕಳೆದ ವಿಧಾನಸಭೆ ಚುನಾವಣೆಯಲ್ಲೂ ಇಲ್ಲಿಂದಲೇ ಪ್ರಚಾರ ಆರಂಭಿಸಿ, 135 ಸ್ಥಾನಗಳನ್ನು ಗೆದ್ದುಕೊಂಡಿರುವ ಕಾಂಗ್ರೆಸ್ ಮತ್ತೆ ಲೋಕಸಭಾ ಚುನಾವಣೆಯಲ್ಲೂ ಅದೇ ರೀತಿಯ ಯಶಸ್ಸಿನ ನಿರೀಕ್ಷೆಯಲ್ಲಿದೆ.
ಮಾ.29 ರಂದು ಪ್ರಜಾಧ್ವನಿ ಯಾತ್ರೆ-2 ಕ್ಕೆ ಚಾಲನೆ ನೀಡಬೇಕಿತ್ತು. ಆದರೆ ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರವಾಗಿ ಬಣ ರಾಜಕೀಯಗಳ ನಡುವೆ ಸಂಘರ್ಷ ತೀವ್ರವಾಗಿತ್ತು. ಕಾಂಗ್ರೆಸ್ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡುವ ವೇಳೆ ಅಸಮಾಧಾನಿತ ಬಣಗಳಿಂದ ಇರಿಸುಮುರಿಸು ಆಗಬಾರದು ಎಂಬ ಕಾರಣಕ್ಕೆ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.
ಇಂದು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಕಾಂಗ್ರೆಸ್ನ ಪ್ರಮುಖರು ಬಹಿರಂಗ ಸಮಾವೇಶ ಪಾಲ್ಗೊಂಡಿದ್ದರು.ಬಿಜೆಪಿ ವಿರುದ್ಧ ಕೆಂಡ ಕಾರಿದ ಕಾಂಗ್ರೆಸ್ ನಾಯಕರು ಸುಳ್ಳು ಹಾಗೂ ಭಾವನಾತ್ಮಕ ವಿಚಾರಗಳ ಮೇಲೆ ಬಿಜೆಪಿ ಚುನಾವಣೆಯನ್ನು ನಡೆಸುತ್ತಿದೆ. ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿ ರಾಜಕೀಯ ಲಾಭ ಮಾಡಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಂಚಖಾತ್ರಿ ಯೋಜನೆಗಳು ಮತ್ತು ಕಾಂಗ್ರೆಸ್ ಕಾರ್ಯಕ್ರಮಗಳು ನಮ್ಮ ಪಕ್ಷಕ್ಕೆ ಹೆಚ್ಚು ಸ್ಥಾನ ಗೆಲ್ಲಿಸಿಕೊಡಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ನ ಪ್ರಜಾಧ್ವನಿ ಯಾತ್ರೆ-2ರ ಉದ್ಘಾಟನೆ ವೇಳೆಯಲ್ಲಿ ಜಿಲ್ಲೆಯ ಬಣ ರಾಜಕೀಯ ಸ್ಪಷ್ಟವಾಗಿ ಕಂಡುಬಂದಿತು. ಪಕ್ಷದ ವರಿಷ್ಠರು ಎಷ್ಟೇ ತಿಳಿ ಹೇಳಿದರೂ ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ಮಾಜಿ ಸಚಿವ ರಮೇಶ್ ಕುಮಾರ್ ಬಣದ ನಡುವೆ ಸ್ಪಷ್ಟ ಹೊಂದಾಣಿಕೆ ಇರುವುದು ಕಂಡುಬರುತ್ತಿಲ್ಲ.
ಪ್ರಜಾಧ್ವನಿ ಯಾತ್ರೆ-2 ಕ್ಕಾಗಿ ವಿಶೇಷ ಬಸ್ನಲ್ಲಿ ಆಗಮಿಸಿದ್ದ ಕಾಂಗ್ರೆಸ್ ನಾಯಕರನ್ನು ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ಎಲ್ಲೆಡೆ ಕಾರ್ಯಕರ್ತರು ಬಾವುಟ ಹಿಡಿದು ಜಯಘೋಷವನ್ನು ಮೊಳಗಿಸಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ರಣೋತ್ಸಾಹ ಕಂಡುಬರುತ್ತಿತ್ತು. ಇಂದಿನಿಂದ ಆರಂಭಗೊಳ್ಳುವ ಪ್ರಚಾರ ಯಾತ್ರೆ ಮೊದಲ ಹಂತದಲ್ಲಿ ಚುನಾವಣೆ ನಡೆಯುವ ರಾಜ್ಯದ 14 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪ್ರಮುಖರು ಸಂಚರಿಸಲಿದ್ದಾರೆ.
ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯನವರು ಕೆಲವೆಡೆ ಪ್ರತ್ಯೇಕವಾಗಿ ಪ್ರವಾಸ ಮಾಡಿದರೆ, ಮತ್ತೂ ಕೆಲವೆಡೆ ಜಂಟಿ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಇದಕ್ಕಾಗಿ ಪ್ರತ್ಯೇಕ ವಿಶೇಷ ಬಸ್ಗಳನ್ನು ಆಯೋಜಿಸಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಾರೂಢವಾಗಿರುವುದರಿಂದಾಗಿ ಹೆಚ್ಚು ಸ್ಥಾನ ಗೆಲ್ಲುವುದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಕಾಂಗ್ರೆಸ್ ಪಕ್ಷ ಈಗಾಗಲೇ ಪ್ರಚಾರ ಆರಂಭಿಸಿದ್ದು, ಅಧಿಕೃತವಾಗಿ ಪ್ರಜಾಧ್ವನಿ ಯಾತ್ರೆ-2 ರ ಮೂಲಕ ಮತ್ತಷ್ಟು ಅಬ್ಬರಿಸುತ್ತಿದೆ.
ಇದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ನಾಲ್ಕು ದಿನಗಳ ಹಿಂದೆಯೇ ಕಾಂಗ್ರೆಸ್ ಪ್ರಚಾರ ಆರಂಭಿಸಿದೆ. ಇಂದು ಅಧಿಕೃತವಾಗಿ ಚಾಲನೆ ನೀಡುತ್ತಿದ್ದೇವೆ. ಬಿಜೆಪಿ ಸುಳ್ಳಿನ ಮೇಲೆ ಪ್ರಚಾರ ಮಾಡಿದರೆ, ಕಾಂಗ್ರೆಸ್ ಸತ್ಯ ಹೇಳಿ ಜನರ ಮನ ಗೆಲ್ಲಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.