ಬೆಂಗಳೂರು,ಏ.6- ಎಸ್ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಇಂದು ಮುಗಿದಿದ್ದು, ಏ.15 ರಿಂದ ಉತ್ತರಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಪ್ರಾರಂಭವಾಗಲಿದೆ. 2023-24 ನೇ ಸಾಲಿನ ಎಸ್ಎಸ್ಎಲ್ಸಿ ಮೊದಲ ವಾರ್ಷಿಕ ಪರೀಕ್ಷೆ ಮಾ.25 ರಿಂದ ಇಂದಿನವರೆಗೆ ರಾಜ್ಯದಲ್ಲಿ ನಡೆದಿದೆ. ಮಾ.25 ರಂದು ಪ್ರಥಮ ಭಾಷಾ ಪರೀಕ್ಷೆಗಳು ನಡೆದಿದ್ದು, ಇಂದು ದ್ವಿತೀಯ ಭಾಷಾ ಪರೀಕ್ಷೆಗಳು ನಡೆದವು.
ರಾಜ್ಯಾದ್ಯಂತ 4,41,910 ಬಾಲಕರು, 4,28,058 ಬಾಲಕಿಯರು ಸೇರಿದಂತೆ ಒಟ್ಟು 8,69,968 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದರು. 2,750 ಪರೀಕ್ಷಾ ಕೇಂದ್ರಗಳನ್ನು ರಚಿಸಿ ಪರೀಕ್ಷೆ ಸುಸೂತ್ರವಾಗಿ ನಡೆಯಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿತ್ತು.
ಎಸ್ಎಸ್‌ಎಲ್‌ಸಿ ಪರೀಕ್ಷೆ ಮುಗಿದಿರುವುದರಿಂದ ಉತ್ತರ ಪತ್ರಿಕೆಗಳ ಮಾಲ್ಯಮಾಪನ ಪ್ರಕ್ರಿಯೆ ರಾಜ್ಯದ 15 ಶೈಕ್ಷಣಿಕ ಜಿಲ್ಲೆಗಳಲ್ಲಿ ಏ.15 ರಿಂದ ಪ್ರಾರಂಭವಾಗಲಿದೆ. ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಮಂಡಳಿಯು ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಮುಖ್ಯ ಶಿಕ್ಷಕರಿಗೆ ಮೌಲ್ಯಮಾಪನಕ್ಕೆ ನಿಯೋಜನೆಗೊಂಡಿರುವ ಶಿಕ್ಷಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗುವಂತೆ ನಿರ್ದೇಶನ ನೀಡಲು ಸೂಚಿಸಿದೆ.