Homeರಾಜ್ಯದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಮತ್ತೆ ಲಘು ಭೂಕಂಪ

ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಮತ್ತೆ ಲಘು ಭೂಕಂಪ

ದೊಡ್ಡಬಳ್ಳಾಪುರ,ಅ.24- ನಿನ್ನೆ ಬೆಳಗ್ಗೆಯಷ್ಟೇ ತೂಬಗೆರೆ ವ್ಯಾಪ್ತಿಯಲ್ಲಿ ಸಂಭವಿಸಿದ ಭೂ ಕಂಪನದ ಬೆನ್ನಲ್ಲೇ ಇಂದು ತಾಲ್ಲೂಕಿನ ಆರೂಢಿ ಹಾಗೂ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವೀರಮನಹಳ್ಳಿ ನಡುವಿನ ಪ್ರದೇಶದಲ್ಲಿ ಇಂದು ಕೂಡ ಮುಂಜಾನೆ ಲಘು ಭೂಕಂಪ ಸಂಭವಿಸಿದೆ.

ರಿಕ್ಟರ್‌ ಮಾಪಕದಲ್ಲಿ 2.9 ತೀವ್ರತೆಯ ಕಂಪನ ದಾಖಲಾಗಿದೆ. ಮುಂಜಾನೆ 3 ಗಂಟೆ 29 ನಿಮಿಷ 42 ಸೆಕೆಂಡ್‌ಗೆ ಭೂಕಂಪ ಸಂಭವಿಸಿದೆ ಎಂದು ಭೂಕಂಪನದ ದತ್ತಾಂಶ ತಿಳಿಸಿದೆ. ಭೂಕಂಪದ ಕೇಂದ್ರಬಿಂದು 13.497 ಅಕ್ಷಾಂಶ ಹಾಗೂ 77.420 ರೇಖಾಂಶದಲ್ಲಿದ್ದು, ಭೂಮಿಯ ಮೇಲೆ ೖ ಯಿಂದ 5 ಕಿಲೋಮೀಟರ್‌ ಆಳದಲ್ಲಿ ಕಂಪನ ದಾಖಲಾಗಿದೆ.

ಭೂಕಂಪನದ ತೀವ್ರತೆ ಕಡಿಮೆ ಮಟ್ಟದಲ್ಲಿದ್ದು, ಘಟನೆಯನ್ನು ಪರಿಶೀಲಿಸಲಾಗಿದೆ ಎಂದು ದತ್ತಾಂಶದಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಈ ಘಟನೆಯಿಂದ ಯಾವುದೇ ಹಾನಿ ಅಥವಾ ಸಾರ್ವಜನಿಕರಿಗೆ ಕಂಪನದ ಅನುಭವವಾಗಿದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ತಾಲೂಕಿನ ತೂಬಗೆರೆ ಗ್ರಾಮದ ಸುತ್ತಮುತ್ತ ನಿನ್ನೆ ಬೆಳಿಗ್ಗೆ ಭೂಕಂಪನ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 3.0 ತೀವ್ರತೆ ದಾಖಲಾಗಿದೆ. ಭೂಕಂಪನದಿಂದ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌‍ಎನ್‌ಡಿಎಂಸಿ) ತಿಳಿಸಿದೆ.

ಬೆಳಿಗ್ಗೆ 9 ಗಂಟೆ 1 ನಿಮಿಷ 59 ಸೆಕೆಂಡ್‌ಗೆ ಭೂಕಂಪನ ದಾಖಲಾಗಿದ್ದು, ತೂಬಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮೋಜನಹಳ್ಳಿ ಗ್ರಾಮದ ಸಮೀಪ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ. ಮೋಜನಹಳ್ಳಿ ಗ್ರಾಮದಿಂದ ಸುಮಾರು 500 ಮೀಟರ್‌ ಉತ್ತರಕ್ಕೆ ಹಾಗೂ ಭೂಮಿಯ ಸುಮಾರು 10 ಕಿಲೋಮೀಟರ್‌ ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ಕೆಎಸ್‌‍ಎನ್‌ಡಿಎಂಸಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ನರಗನಹಳ್ಳಿ, ತೂಬಗೆರೆ ಹಾಗೂ ಕಾರನಾಳ ಗ್ರಾಮಗಳ ಸಮೀಪ ಕೇಂದ್ರಬಿಂದು ಗುರುತಿಸಲಾಗಿದ್ದು, ಕೇಂದ್ರಬಿಂದುವಿನಿಂದ ಸುಮಾರು 20ರಿಂದ 30 ಕಿಲೋಮೀಟರ್‌ ವ್‌ಯಾಪ್ತಿಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.

ಭೂಕಂಪನದ ತೀವ್ರತೆ ಕಡಿಮೆಯಾಗಿದ್ದು, ಯಾವುದೇ ಹಾನಿ ಅಥವಾ ಅನಾಹುತ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಭೂಕಂಪನ ಸಂಭವಿಸಿದ ಪ್ರದೇಶವು ಭೂಕಂಪ ವಲಯ-2ರ ವ್ಯಾಪ್ತಿಗೆ ಒಳಪಡುತ್ತದೆ. ಹೀಗಾಗಿ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಕೆಎಸ್‌‍ಎನ್‌ಡಿಎಂಸಿ ಸ್ಪಷ್ಟಪಡಿಸಿದೆ.

RELATED ARTICLES
spot_img

Latest News