ಬೆಂಗಳೂರು, ಏ.7- ಬೆಳ್ಳಂಬೆಳಗ್ಗೆಯೇ ಟಯರ್ ಗೋದಾಮಿನಲ್ಲಿ ಬೆಂಕಿ ಹೊತ್ತಿ ಉರಿದಿರುವ ಘಟನೆ ಚಾಮರಾಜ ಪೇಟೆಯ ಗವಿಪುರಂ ಬಳಿ ನಡೆದಿದೆ. ಇಂದು ಬೆಳಗಿನ ಜಾವ 4 ಗಂಟೆ ಸುಮಾರಿನಲ್ಲಿ ಟಯರ್ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆ ಕ್ಷಣಮಾತ್ರದಲ್ಲಿ ಪಕ್ಕದ ಪೈಪ್ ಹಾಗೂ ಪ್ಲೇವುಡ್ ಗೋಡೌನ್‍ಗೂ ಆವರಿಸಿ ಸುಮಾರು ಮೂರು ಗೋದಾಮುಗಳು ಸುಟ್ಟು ಕರಕಲಾಗಿವೆ.
ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗೋದಾಮಿನಲ್ಲಿ 15 ಸಾವಿರಕ್ಕೂ ಅಧಿಕ ಟಯರ್, 60 ಸಾವಿರ ಟೂಬ್ ಮತ್ತು ಆಯಿಲ್ ಬೆಂಕಿಗಾಹುತಿಯಾಗಿವೆ ಎಂದು ತಿಳಿದುಬಂದಿದೆ. ದಟ್ಟ ಹೊಗೆಯಿಂದ ಅಕ್ಕಪಕ್ಕದ ಮನೆಯ ನಿವಾಸಿಗಳು ಹೊರಬಂದು ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಆರು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಬೆಳಗ್ಗೆ 11 ಗಂಟೆ ವೇಳೆಗೆ ತಹಬದಿಗೆ ತಂದಿದ್ದು, ಸಂಭವಿಸಬಹುದಾದ ಭಾರೀ ಅನಾಹುತ ತಪ್ಪಿಸಿದ್ದಾರೆ. ಟಯರ್ ಹಾಗೂ ಆಯಿಲ್ ದಾಸ್ತಾನು ಮಾಡಿದ್ದರಿಂದ ಬೆಂಕಿಯ ಜ್ವಾಲೆ ಹೆಚ್ಚಾಗಿತ್ತು. ಪಕ್ಕದಲ್ಲೂ ಸಹ ಪ್ಲಾಸ್ಟಿಕ್ ಪೈಪ್ ಹಾಗೂ ಪ್ಲೇವುಡ್ ಗೋಡೌನ್ ಇದ್ದು, ಬೆಂಕಿಯ ಜ್ವಾಲೆ ಆ ಗೋದಾಮುಗಳಿಗೂ ಸಹ ಆವರಿಸಿದೆ.
ಮಗು ಮಲಗಿದ್ದಾಗಲೇ ಪತ್ನಿ ಕೊಂದು ಪರಾರಿಯಾದ ಪಾಪಿ ಪತಿ
ಬೆಂಕಿ ಅವಘಡದಿಂದ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ತಗುಲಿರುವ ಸಾಧ್ಯತೆ ಇದೆ. ಈ ಸಂಬಂಧ ಕೆಂಪೇಗೌಡನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.