Friday, May 3, 2024
Homeರಾಜ್ಯಪ್ರಚಾರದಿಂದ ಕೆ.ಎಚ್.ಮುನಿಯಪ್ಪ ದೂರ

ಪ್ರಚಾರದಿಂದ ಕೆ.ಎಚ್.ಮುನಿಯಪ್ಪ ದೂರ

ಬೆಂಗಳೂರು,ಏ.7- ಕೋಲಾರ ಲೋಕಸಭಾ ಕ್ಷೇತ್ರದ ಬಂಡಾಯ ಈವರೆಗೂ ಶಮನವಾಗಿಲ್ಲ, ಸಚಿವ ಕೆ.ಎಚ್.ಮುನಿಯಪ್ಪ ಈವರೆಗೂ ಕ್ಷೇತ್ರದ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸದೆ ದೂರ ಉಳಿದಿರುವುದು ಕಾಂಗ್ರೆಸ್ಸಿಗರಿಗೆ ತಲೆನೋವಾಗಿ ಪರಿಣಮಿಸಿದೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಕೆ.ಎಚ್.ಮುನಿಯಪ್ಪ, ಕೋಲಾರ ಲೋಕಸಭಾ ಕ್ಷೇತ್ರದ ಪ್ರಚಾರ ಕಾರ್ಯಕ್ರಮಕ್ಕೆ ತಮಗೆ ಆಹ್ವಾನ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಮಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಜವಾಬ್ದಾರಿ ವಹಿಸಿದ್ದು, ತಾವು ಅಲ್ಲಿ ಕೆಲಸ ಮಾಡುವುದಾಗಿ ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ. ಜಿಲ್ಲೆಯ ರಾಜಕಾರಣದಲ್ಲಿ ಮಾಜಿ ಸಚಿವ ರಮೇಶ್ ಕುಮಾರ್ ಹಾಗೂ ಹಾಲಿ ಸಚಿವ ಕೆ.ಎಚ್.ಮುನಿಯಪ್ಪ ನಡುವಿನ ಬಂಡಾಯ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಮುನಿಯಪ್ಪ ಲೋಕಸಭಾ ಚುನಾವಣೆಯಲ್ಲಿ ಸ್ರ್ಪಸಲು ತಮ್ಮ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಇದಕ್ಕೆ ಒಂದು ಹಂತದಲ್ಲಿ ಹೈಕಮಾಂಡ್ ಒಪ್ಪಿಕೊಂಡಿತ್ತು. ಆದರೆ ಕಾಂಗ್ರೆಸ್‍ನ ಸಚಿವರು, ಶಾಸಕರು ಇದಕ್ಕೆ ಒಪ್ಪದೆ ರಾಜೀನಾಮೆ ನೀಡಲು ಮುಂದಾಗಿದ್ದರು.

ಮುನಿಯಪ್ಪ ಅವರ ಕುಟುಂಬಕ್ಕೆ ಟಿಕೆಟ್ ನೀಡಿದರೆ ತಾವು ರಾಜೀನಾಮೆ ನೀಡುತ್ತೇವೆ ಎಂದು ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕ ಪತ್ತನೂರು ಮಂಜುನಾಥ್, ಕೆ.ವೈ.ನಂಜೇಗೌಡ, ವಿಧಾನಪರಿಷತ್ ಸದಸ್ಯರಾದ ನಜೀರ್ ಅಹಮ್ಮದ್, ಅನಿಲ್‍ಕುಮಾರ್, ಎಸ್.ಎನ್. ನಾರಾಯಣಸ್ವಾಮಿ ಬೆದರಿಕೆ ಹಾಕಿದ್ದರು. ಸಾಲದೆಂಬಂತೆ ಕೋಲಾರ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಜನಸಂಖ್ಯೆ 3.80 ಲಕ್ಷ ಇದೆ. ಆ ಸಮುದಾಯಕ್ಕೆ ಅವಕಾಶ ಮಾಡಿಕೊಡಿ ಎಂದು ಪ್ರತಿಪಾದಿಸುವ ಮೂಲಕ ಮುನಿಯಪ್ಪ ಅವರ ಕುಟುಂಬದ ವಿರುದ್ಧ ಸೆಡ್ಡು ಹೊಡೆದಿದ್ದರು.

ಕೊನೆಗೆ ರಾಜ್ಯ ನಾಯಕರು ಅಳೆದು ತೂಗಿ ಯಾರಿಗೂ ಅಸಮಾಧಾನವಾಗಬಾರದು ಎಂಬ ಕಾರಣಕ್ಕೆ ಪರ್ಯಾಯ ಅಭ್ಯರ್ಥಿಯನ್ನಾಗಿ ಎಡಗೈ ಸಮುದಾಯದ ಕೆ.ವಿ.ಗೌತಮ್ ಅವರನ್ನು ಕಣಕ್ಕಿಳಿಸಿದೆ. ಕೋಲಾರ ಟಿಕೆಟ್ ಹಂಚಿಕೆಯ ಗೊಂದಲ ಮುಗಿದ ಬಳಿಕ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೋಲಾರ ಜಿಲ್ಲೆಯ ಕುರುಡುಮಲೆಯ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕಾಂಗ್ರೆಸ್‍ನ ಪ್ರಜಾಧ್ವನಿ-2 ಯಾತ್ರೆಗೆ ಚಾಲನೆ ನೀಡಿದರು. ಈ ವೇಳೆ ರಮೇಶ್‍ಕುಮಾರ್ ಬಣದ ಎಲ್ಲಾ ನಾಯಕರೂ ಹಾಜರಿದ್ದರು. ಸಚಿವ ಮುನಿಯಪ್ಪ ಮತ್ತು ಅವರ ಪುತ್ರಿ ಹಾಗೂ ಶಾಸಕಿಯಾಗಿರುವ ರೂಪ ಶಶಿಧರ್ ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದರು.

ಮಾಜಿ ಸಚಿವ ರಮೇಶ್‍ಕುಮಾರ್, ಪಕ್ಷ ಒಮ್ಮೆ ಟಿಕೆಟ್ ಘೋಷಣೆ ಮಾಡಿದ ಮೇಲೆ ಮುಗಿಯಿತು. ಅದನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕು. ಕೆಲಸ ಮಾಡಲೇಬೇಕು. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿಕೊಂಡು ಬರಬೇಕು ಎಂದು ಹೇಳುವ ಮೂಲಕ ಮುನಿಯಪ್ಪ ಅವರಿಗೆ ಟಾಂಗ್ ನೀಡಿದ್ದರು.
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕೆ.ಎಚ್.ಮುನಿಯಪ್ಪ, ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ನಿನ್ನೆ ಪ್ರಜಾಧ್ವನಿ-2 ಯಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ನನಗೆ ಯಾರೂ ಆಹ್ವಾನ ನೀಡಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಕರೆದಿಲ್ಲ. ಹೀಗಾಗಿ ನಾನು ಕಾರ್ಯಕ್ರಮಕ್ಕೆ ಹೋಗಲಿಲ್ಲ ಎಂದು ತಿಳಿಸಿದ್ದಾರೆ. ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಅವರೇ ಗೆಲ್ಲಿಸಿಕೊಂಡು ಬರಲಿ, ಏನಾದರೂ ಮಾಡಿಕೊಳ್ಳಲಿ ತಾವು ತಲೆಕೆಡಿಸಿಕೊಳ್ಳುವುದಿಲ್ಲ, ತಮಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಜವಾಬ್ದಾರಿ ವಹಿಸಿದ್ದಾರೆ. ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಹೇಳಿದ್ದಾರೆ.

ಮುನಿಯಪ್ಪ ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ಪ್ರಭಾವಿ ನಾಯಕರಾಗಿದ್ದಾರೆ. ಅವರ ಅಸಮಾಧಾನ ರಾಜ್ಯದಲ್ಲಿ 18 ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಮತದಾರರನ್ನು ಹೊಂದಿರುವ ಎಡಗೈ ಸಮುದಾಯದ ಮೇಲೆ ಪರಿಣಾಮ ಬೀರಲಿದೆ. ತನ್ಮೂಲಕ ಚುನಾವಣಾ ಫಲಿತಾಂಶದಲ್ಲೂ ವ್ಯತ್ಯಾಸಗಳಾಗಲಿವೆ ಎಂಬ ಆತಂಕ ಕಾಂಗ್ರೆಸ್ ಅನ್ನು ಕಾಡುತ್ತಿದೆ. ಕೋಲಾರದಲ್ಲಿ ಜಿಲ್ಲೆಗೆ ಸೀಮಿತವಾಗಿರುವ ನಾಯಕರಿಗೆ ಮಣೆ ಹಾಕಿ ರಾಜ್ಯಮಟ್ಟದ ಪ್ರಭಾವಿ ನಾಯಕರನ್ನು ಅಪಮಾನ ಮಾಡುವ ಮೂಲಕ ಕಾಂಗ್ರೆಸ್ ತನ್ನ ಸಾಂಪ್ರದಾಯಿಕ ಮತ ಬ್ಯಾಂಕಿಗೆ ಕೊಳ್ಳಿ ಇಟ್ಟುಕೊಳ್ಳುತ್ತಿದೆ ಎಂಬ ವ್ಯಾಖ್ಯಾನಗಳು ಕೇಳಿಬಂದಿವೆ.

RELATED ARTICLES

Latest News