Friday, May 17, 2024
Homeರಾಜ್ಯಮಹಿಳೆಯ ಹಿಂದೆ ಬಿದ್ದು ಮನೆಗೆ ಬೆಂಕಿ ಹಚ್ಚಿದ್ದ ಆರೋಪಿ ಬಂಧನ

ಮಹಿಳೆಯ ಹಿಂದೆ ಬಿದ್ದು ಮನೆಗೆ ಬೆಂಕಿ ಹಚ್ಚಿದ್ದ ಆರೋಪಿ ಬಂಧನ

ಬೆಂಗಳೂರು, ಮೇ 2- ಮದುವೆಯಾಗುವಂತೆ ವಿವಾಹಿತೆಯನ್ನು ಪೀಡಿಸಿ ಆಕೆ ಮನೆಗೆ ಬೆಂಕಿ ಹಚ್ಚಿದ್ದ ಆರೋಪಿಯನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಡಿಜೆ ಹಳ್ಳಿ ನಿವಾಸಿ ಅರ್ಬಾಜ್ ಬಂಧಿತ ಆರೋಪಿ. ಈತ ಹಣ್ಣಿನ ವ್ಯಾಪಾರಿಯಾಗಿದ್ದು, ಮಹಿಳೆಯ ದೂರದ ಸಂಬಂಧಿ.

ಸಾರಾಯಿಪಾಳ್ಯದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಈ ಮಹಿಳೆ ಪತಿ, ಮಗ ಹಾಗೂ ಮೂವರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದು ಟೈಲರಿಂಗ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ನಡುವೆ ದೂರದ ಸಂಬಂಧಿ ಅರ್ಬಾಜ್ ಎಂಬಾತ ಆಗಾಗ್ಗೆ ಈ ಮಹಿಳೆಗೆ ಫೋನ್ ಮಾಡಿ ಮದುವೆಯಾಗುವಂತೆ ಪೀಡಿಸುತ್ತಿದ್ದ. ಇದೇ ವಿಚಾರಕ್ಕೆ ಆಗಾಗ್ಗೆ ಕರೆ ಮಾಡಿ ಗಲಾಟೆ ಮಾಡುತ್ತಿದ್ದನು.

ಏ. 11ರಂದು ರಂಜಾನ್ ನಿಮಿತ್ತ ರಾತ್ರಿ ಮಹಿಳೆ ಶಾಪಿಂಗ್‍ಗಾಗಿ ಟ್ಯಾನರಿ ರಸ್ತೆಯ ಡಿಜೆ ಹಳ್ಳಿಯಲ್ಲಿ ವಾಸವಿರುವ ಸಹೋದರಿ ಸಾನಿಯಾ ಅವರ ಮನೆಗೆ ಹೋಗಿ ಅಲ್ಲಿಂದ ರಾತ್ರಿ 2 ಗಂಟೆ ಸುಮಾರಿಗೆ ಶಿವಾಜಿನಗರಕ್ಕೆ ಹೋಗುತ್ತಿದ್ದಾಗ ಅಲ್ಲೇ ಕೆಲಸ ಮಾಡುತ್ತಿದ್ದ ಪತಿಯನ್ನು ಮಾತನಾಡಿಸಿಕೊಂಡು ಬೆಳಗಿನ ಜಾವ 4 ಗಂಟೆಯಲ್ಲಿ ಈ ಮೂವರು ಮನೆಗೆ ವಾಪಸ್ಸಾಗುತ್ತಿದ್ದರು.

ಆ ಸಂದರ್ಭದಲ್ಲಿ ಆರೋಪಿ ಅರ್ಬಾಜ್ ಮಹಿಳೆಯ ಪತಿಗೆ ಮೊಬೈಲ್ ಕರೆ ಮಾಡಿ ನಿಮ್ಮ ಮನೆಗೆ ಬೆಂಕಿ ಬಿದ್ದಿದೆ ಎಂದು ಹೇಳಿದ್ದಾನೆ. ಇವರೆಲ್ಲರೂ ಮನೆ ಬಳಿ ಹೋಗಿ ನೋಡುವಷ್ಟರಲ್ಲಿ ಅಗ್ನಿಶಾಮಕ ದಳ ಹಾಗೂ ಅಕ್ಕಪಕ್ಕದವರು ಬೆಂಕಿಯನ್ನು ನಂದಿಸಿದ್ದು, ಬೆಂಕಿಯಿಂದ ಮನೆಯಲ್ಲಿದ್ದ ಎಲೆಕ್ಟ್ರಾನಿಕ್ ಉಪಕರಣಗಳು ಸೇರಿದಂತೆ ಎಲ್ಲ ವಸ್ತುಗಳು ಬೆಂಕಿಗಾಹುತಿಯಾಗಿದ್ದವು.

ಈ ಬಗ್ಗೆ ಅರ್ಬಾಜ್ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಅರ್ಬಾಜ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಈತನೇ ಮನೆಗೆ ಬೆಂಕಿ ಹಚ್ಚಿರುವುದು ಗೊತ್ತಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News