Friday, May 17, 2024
Homeರಾಜ್ಯಪೆನ್‍ಡ್ರೈವ್ ಪ್ರಕರಣ: ಅಂತರ ಕಾಯ್ದುಕೊಳ್ಳಲು ಬಿಜೆಪಿ ಹೈಕಮಾಂಡ್ ಸೂಚನೆ

ಪೆನ್‍ಡ್ರೈವ್ ಪ್ರಕರಣ: ಅಂತರ ಕಾಯ್ದುಕೊಳ್ಳಲು ಬಿಜೆಪಿ ಹೈಕಮಾಂಡ್ ಸೂಚನೆ

ಬೆಂಗಳೂರು,ಮೇ2- ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಪೆನ್‍ಡ್ರೈವ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ ಕಾಯ್ದುಕೊಳ್ಳುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ. ಅಶ್ಲೀಲ ವಿಡಿಯೋ ಪ್ರಕರಣ ಇದೀಗ ದೇಶದಾದ್ಯಂತವಲ್ಲದೆ ವಿದೇಶಗಳಲ್ಲೂ ಸುದ್ದಿಯಾಗಿದೆ. ಈ ಹಿನ್ನೆಲೆಯಲ್ಲಿ ವಿವಾದದ ಸುಳಿಯಲ್ಲಿ ತಾವೂ ಸಿಕ್ಕಿಕೊಳ್ಳದೆ ಎಚ್ಚರಿಕೆ ವಹಿಸುವಂತೆ ಹೈಕಮಾಂಡ್ ಸೂಚನೆ ನೀಡಿದೆ. ಪೆನ್‍ಡ್ರೈವ್ ವಿವಾದದಲ್ಲಿ ಕಾಂಗ್ರೆಸ್ ಜೆಡಿಎಸ್ ಪಕ್ಷದ ಜೊತೆಗೆ ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸುತ್ತಿದೆ.

ಈ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಪಕ್ಷದ ನಿಲುವೇನು ಎಂಬ ಪ್ರಶ್ನೆ ಕೇಳಿಬರುತ್ತಿದೆ. ಪ್ರಜ್ವಲ್ ಹಾಗೂ ಬಿಜೆಪಿ ವಿರುದ್ದ ಕಾಂಗ್ರೆಸ್ ದಾಳಿ ನಡೆಸುತ್ತಿದ್ದು, ಪ್ರಜ್ವಲ್ ರೇವಣ್ಣ ಪರ ಪ್ರಧಾನಿ ನರೇಂದ್ರಮೋದಿ ಮತ ಯಾಚಿಸಿದ ಫೋಟೋ ರಿಲೀಸ್ ಮಾಡಿದೆ.

ಎಐಸಿಸಿ ಮಾಧ್ಯಮ ಮುಖ್ಯಸ್ಥೆ ಸುಪ್ರಿಯಾ ಶ್ರೀನಾಟೆ ಇದೇ ವಿಚಾರವಾಗಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಮೋದಿ ಅತ್ಯಾಚಾರಿಗಳನ್ನು ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್ ಜೊತೆಗೆ ನಿಂತುಕೊಂಡಂತೆ ಮೋದಿ ಅತ್ಯಾಚಾರಕ್ಕೆ ಒಳಗಾದ ಮಹಿಳೆಯರ ರಕ್ಷಣೆಗೆ ನಿಂತಿಲ್ಲ ಎಂದು ಆರೋಪಿಸಿದ್ದಾರೆ.

ಇಡೀ ಪ್ರಕರಣದಲ್ಲಿ ಕರ್ನಾಟಕದ ರಾಕ್ಷಸನೊಬ್ಬ ದೇಶ ಬಿಟ್ಟು ಹೋಗಲು ಬಿಜೆಪಿಯೇ ಅವಕಾಶ ಮಾಡಿಕೊಟ್ಟಿದೆ. ರಾಷ್ಟ್ರೀಯ ಮಹಿಳಾ ಆಯೋಗ ಇದರಲ್ಲಿ ಏನು ಮಾಡುತ್ತಿದೆ? ಸ್ಮೃತಿ ಇರಾನಿ ಈಗ ಮೌನವಾಗಿದ್ದಾರೆ ಯಾಕೆ? ಮೋದಿ ಯಾಕೆ ಬಾಯಿ ಬಿಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಈ ವಿಚಾರವಾಗಿ ರಾಜ್ಯದಲ್ಲಿ ಬಿಜೆಪಿ ನಾಯಕರು ಯಾರೂ ಸಮರ್ಥನೆ ಮಾಡುತ್ತಿಲ್ಲ. ಪ್ರಕರಣದ ಬಗ್ಗೆ ಬಿಜೆಪಿ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಅಂತರ ಕಾಯ್ದುಕೊಳ್ಳುತ್ತಿದೆ. ಜೆಡಿಎಸ್ ಎನ್‍ಡಿಎ ಭಾಗ ಅಷ್ಟೇ. ಹಾಗಾಗಿ ಪ್ರಜ್ವಲ್ ಮೈತ್ರಿ ಅಭ್ಯರ್ಥಿ. ಅವರು ಮಾಡಿದ ತಪ್ಪಿಗೆ ನಾವು ಹೊಣೆ ಅಲ್ಲ ಎಂದು ವಾದಿಸುತ್ತಿದೆ.

ಇನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಖಡಕ್ ಸಂದೇಶ ನೀಡಿದ್ದು, ಈ ವಿಚಾರವಾಗಿ ಅಂತರ ಕಾಯ್ದುಕೊಳ್ಳಲು ಸೂಚನೆ ನೀಡಿದ್ದಾರೆ. ತನಿಖೆ ವಿಚಾರದಲ್ಲಿ ಮಾತಾಡಬಾರದು. ವಿವಾದಾತ್ಮಕ ಹೇಳಿಕೆ ಕೊಡಬಾರದೆಂದು ಸೂಚಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

RELATED ARTICLES

Latest News