Tuesday, May 28, 2024
Homeರಾಷ್ಟ್ರೀಯ2ಜಿ ಸ್ಪೆಕ್ಟ್ರಮ್ ಹಂಚಿಕೆ ಪ್ರಕರಣದ ಮರು ವಿಚಾರಣೆಗೆ ಸುಪ್ರೀಂ ನಿರಾಕರಣೆ

2ಜಿ ಸ್ಪೆಕ್ಟ್ರಮ್ ಹಂಚಿಕೆ ಪ್ರಕರಣದ ಮರು ವಿಚಾರಣೆಗೆ ಸುಪ್ರೀಂ ನಿರಾಕರಣೆ

ನವದೆಹಲಿ,ಮೇ 2- ಕೇಂದ್ರ ಸರ್ಕಾರ 2ಜಿ ಸ್ಪೆಕ್ಟ್ರಮ್ ಹಂಚಿಕೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ 2012 ರಲ್ಲಿ ನೀಡಿದ್ದ ತೀರ್ಪನ್ನು ಪರಿಷ್ಕರಿಸುವಂತೆ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕಿದೆ.
2008 ರ ಜನವರಿಯಿಂದ ಆಗಿನ ಕೇಂದ್ರ ದೂರ ಸಂಪರ್ಕ ಸಚಿವ ಎ.ರಾಜ ಅವರ ಅಧಿಕಾರವಧಿಯಲ್ಲಿ ವಿವಿಧ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದ್ದ 2ಜಿ ಸ್ಪೆಕ್ಟ್ರಮ್ ಪರವಾನಗಿಗಳನ್ನು ಸುಪ್ರೀಂಕೋರ್ಟ್ ಅಸಿಂಧುಗೊಳಿಸಿ 2012 ಫೆ.2 ರಂದು ತೀರ್ಪು ನೀಡಿತ್ತು.

ಈ ತೀರ್ಪನ್ನು ಪರಿಷ್ಕರಿಸಬೇಕು ಎಂದು ಕೇಂದ್ರ ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಎ.ವೆಂಕಟರಮಣಿ ಏ.22 ರಂದು ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಬಿವಾಲ ಅವರನ್ನೊಳಗೊಂಡ ಸುಪ್ರೀಂಕೋರ್ಟ್‍ನ ಪೀಠ 2013 ರ ಸುಪ್ರೀಂಕೋರ್ಟ್ ನಿಯಮಾವಳಿಗಳ ಅನುಸಾರ ತೀರ್ಪನ್ನು ಮರು ಪರಿಷ್ಕರಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಅರ್ಜಿಯಲ್ಲಿ ಸಕಾರಣಗಳಿಲ್ಲ. ಅದರ ಹೊರತಾಗಿಯೂ ಅರ್ಜಿದಾರರು 15 ದಿನದೊಳಗಾಗಿ ಬೇರೆ ರೂಪದಲ್ಲಿ ನ್ಯಾಯಾಲಯದ ಪರಿಷ್ಕರಣೆಗೆ ಮನವಿ ಮಾಡಬಹುದು ಎಂದು ಸಲಹೆ ನೀಡಿದೆ. 12 ವರ್ಷಗಳ ಬಳಿಕ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಕೇಂದ್ರ ಸರ್ಕಾರ ಅರ್ಜಿಯ ತುರ್ತು ವಿಚಾರಣೆಗೆ ಮನವಿ ಮಾಡಿತ್ತು. ವಾಣಿಜ್ಯೇತರ ಉದ್ದೇಶಗಳಿಗೆ 2ಜಿ ಸ್ಪೆಕ್ಟ್ರಮ್ ಅನ್ನು ಹರಾಜು ಹೊರತಾದ ಪ್ರಕ್ರಿಯೆಗಳ ಮೂಲಕ ಹಂಚಿಕೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿತ್ತು. ಆದರೆ ಇದನ್ನು ಒಪ್ಪದ ಸುಪ್ರೀಂಕೋರ್ಟ್ ಸ್ಪೆಕ್ಟ್ರಮ್ ಸೇರಿದಂತೆ ನೈಸರ್ಗಿಕ ಸಂಪನ್ಮೂಲವನ್ನು ಹಂಚಿಕೆ ಮಾಡುವಾಗ ಹರಾಜು ಪ್ರಕ್ರಿಯೆಗಳ ನಿಯಮಾವಳಿಗಳನ್ನು ಪಾಲನೆ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದೆ.

ಪ್ರಕರಣದಲ್ಲಿ ವಾದ ಮಂಡಿಸಿದ ಅಟಾರ್ನಿ ಜನರಲ್ ಅವರು ಆಡಳಿತಾತ್ಮಕ ಪ್ರಕ್ರಿಯೆಗಳಡಿ ಸರ್ಕಾರ ಸ್ಪೆಕ್ಟ್ರಮ್‍ನ ಹಂಚಿಕೆಗೆ ಅವಕಾಶ ಮಾಡಿಕೊಡಬೇಕು. ಇದರಿಂದ ಸರ್ಕಾರ ಕಾರ್ಯ ನಿರ್ವಹಣೆಗೆ ಸಹಾಯವಾಗಲಿದೆ. ಸಾರ್ವಜನಿಕ ಹಿತಾಸಕ್ತಿ ಅಡಗಿದೆ. ಹರಾಜು ಪ್ರಕ್ರಿಯೆ ತಾಂತ್ರಿಕ ಮತ್ತು ಆರ್ಥಿಕ ಕಾರಣಗಳಿಗಾಗಿ ಪರಿಗಣನೆಗೆ ಸೂಕ್ತವಲ್ಲ ಎಂದು ಹೇಳಿದರು.

ಸ್ವಯಂ ಸೇವಾ ಸಂಸ್ಥೆಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಪರವಾಗಿ ವಾದಿಸಿದ್ದ ವಕೀಲ ಪ್ರಶಾಂತ್ ಭೂಷಣ್ ಕೇಂದ್ರ ಸರ್ಕಾರದ ಅರ್ಜಿಯನ್ನು ವಿರೋಸಿದ್ದರು. 2012 ರ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಅತ್ಯುತ್ತಮ ಇತ್ಯರ್ಥವಾಗಿದೆ. ಸ್ಪೆಕ್ಟ್ರಮ್ ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳ ಹಂಚಿಕೆಗೆ ಹರಾಜು ಪ್ರಕ್ರಿಯೆಯೇ ಸೂಕ್ತ ಎಂದು ಹೇಳಿದರು.

ಅಟಾರ್ನಿ ಜನರಲ್ ಅವರಿಗೆ ಮುಖ್ಯ ನ್ಯಾಯಮೂರ್ತಿಗಳು ನಿಮ್ಮ ಮನವಿಯನ್ನು ಇ-ಮೇಲ್ ಮೂಲಕ ಕಳುಹಿಸಿ ನಾವು ಪರಿಶೀಲಿಸುತ್ತೇವೆ ಎಂದು ಹೇಳಿದ್ದರು. ಈ ನಡುವೆ ಮಾ.22 ರಂದು ದೆಹಲಿಯ ಹೈಕೋರ್ಟ್ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸಿದೆ. 2 ಜಿ ಸ್ಪೆಕ್ಟ್ರಮ್ ಪ್ರಕರಣದಲ್ಲಿ ಎ.ರಾಜ ಮತ್ತು 16 ಮಂದಿಯ ವಿರುದ್ಧ ಇದ್ದ ಆರೋಪಗಳನ್ನು ಸಿಬಿಐ ವಿಶೇಷ ನ್ಯಾಯಾಲಯ 2017ರ ಡಿಸೆಂಬರ್ 21 ರಂದು ವಜಾಗೊಳಿಸಿತ್ತು.

ಈ ಮೂಲಕ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಮಾಡಿದ್ದ ಆರೋಪಗಳು ಖುಲಾಸೆಗೊಂಡಿದ್ದವು. ಅದನ್ನು ಪ್ರಶ್ನಿಸಿ ಸಿಬಿಐ 2018ರ ಮಾ.22 ರಂದು ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದೆ. 2014 ರ ಲೋಕಸಭಾ ಚುನಾವಣೆಯಲ್ಲಿ ಭಾರೀ ಸದ್ದು ಮಾಡಿದ್ದ 2ಜಿ ಸ್ಪೆಕ್ಟ್ರಮ್ ಹಗರಣದ ತನಿಖೆ ನಡೆಸಿದ್ದ ಸಿಬಿಐ ಪರವಾನಗಿ ಹಂಚಿಕೆಯಲ್ಲಿ 30,984 ಕೋಟಿ ರೂ.ಗಳು ನಷ್ಟವಾಗಿದೆ ಎಂದು ಆರೋಪಿಸಿತ್ತು.

RELATED ARTICLES

Latest News