ಬೆಂಗಳೂರು,ಏ. 8- ಸಾಮಾನ್ಯವಾಗಿ ಹಬ್ಬಗಳ ಸಂದರ್ಭದಲ್ಲಿ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿರುತ್ತದೆ. ಆದರೆ ಈ ಯುಗಾದಿಗೆ ಮಾರುಕಟ್ಟೆಗಳಲ್ಲಿ ಹೇಳಿಕೊಳ್ಳುವಷ್ಟು ಜನರಿಲ್ಲ. ರಾಜ್ಯಾದ್ಯಂತ ಬರಗಾಲ ಆವರಿಸಿದ್ದು, ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚಾಗಿದೆ. ಕುಡಿಯಲು ನೀರಿಲ್ಲದೆ ಹಬ್ಬದ ಸಂಭ್ರಮ ಕಳೆಗುಂದಿದೆ. ಹಿಂದೂ ಪಂಚಾಂಗದ ಪ್ರಕಾರ, ಯುಗಾದಿ ಹೊಸವರ್ಷವನ್ನು ಎಲ್ಲರೂ ಸಂಭ್ರಮದಿಂದ ಆಚರಿಸುತ್ತಾರೆ. ಈ ಬಾರಿ ಬರಗಾಲ ಹಬ್ಬದ ಸಂಭ್ರಮ ಕಸಿದುಕೊಂಡಿದೆ.
ಒಂದು ಕಡೆ ಬಿಸಿಲಿಗೆ ಹೆದರಿ ಜನರು ಮಾರುಕಟ್ಟೆಗೆ ಬರಲು ಹಿಂದೇಟು ಹಾಕುತ್ತಿದ್ದರೆ, ಮತ್ತೊಂದೆಡೆ ನೀರಿಲ್ಲದೆ ಹೂವು, ಹಣ್ಣು, ತರಕಾರಿ ಬೆಳೆ ಕಡಿಮೆಯಾಗಿದ್ದು, ಇವುಗಳ ಬೆಲೆ ಗಗನಕ್ಕೇರಿರುವುದರಿಂದ ಜನರು ಮಾರುಕಟ್ಟೆಯತ್ತ ಮುಖ ಮಾಡುತ್ತಿಲ್ಲ.
ನಗರದಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದ್ದು, ಶಾಲಾ-ಕಾಲೇಜು ಗಳಿಗೆ ರಜೆ ಕೂಡ ಬಂದಿದೆ. ಇದರ ಜತೆಗೆ ಸಾಲುಸಾಲು ರಜೆ ಬಂದಿರುವ ಹಿನ್ನೆಲೆಯಲ್ಲಿ ಜನರು ಊರುಗಳತ್ತ ತೆರಳಿದ್ದು, ನಗರದಲ್ಲಿ ಜನರ ಸಂಖ್ಯೆ ಕಡಿಮೆಯಾಗಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಜನರು ಖರೀದಿಗೆ ಬರುತ್ತಿಲ್ಲ.
ನೀರಿನ ಸಮಸ್ಯೆ ಹಾಗೂ ಬಿಸಿಲಿನ ತಾಪಕ್ಕೆ ಹೂವುಗಳ ಬೆಳೆ ಅಷ್ಟಾಗಿ ಚೆನ್ನಾಗಿ ಬಂದಿಲ್ಲ. ಜತೆಗೆ ಬಿಸಿಲಿನ ತಾಪಕ್ಕೆ ಹೂವುಗಳು ಬೇಗ ಬಾಡುತ್ತಿದ್ದು, ಮಾರುಕಟ್ಟೆಗೆ ಗುಣಮಟ್ಟದ ಹೂವುಗಳು ಸರಬರಾಜಾಗುತ್ತಿಲ್ಲ. ಆದರೂ ಸಹ ಬೆಲೆ ಮಾತ್ರ ಗಗನಕ್ಕೇರಿದೆ. ಮಲ್ಲಿಗೆ ಕೆಜಿಗೆ 500 ರಿಂದ 600ರೂ., ಸೇವಂತಿಗೆ 300 ರಿಂದ 350ರೂ., ಕನಕಾಂಬರ 900 ರಿಂದ 1000ರೂ., ತುಳಸಿ ಒಂದು ಮಾರಿಗೆ 100ರೂ., ಬೇವಿನ ಸೊಪ್ಪು ಒಂದು ಕಟ್ಟಿಗೆ 30ರೂ.ಗೆ ಮಾರಾಟವಾಗುತ್ತಿದೆ.
ಕೆಲವು ದಿನಗಳ ಹಿಂದೆ 100ರೂ. ಗಡಿ ದಾಟಿದ್ದ ಏಲಕ್ಕಿ ಬಾಳೆ 50ರೂ.ಗೆ ಮಾರಾಟವಾಗುತ್ತಿದೆ. ಏಕೆಂದರೆ ಬಿಸಿಲಿಗೆ ಹಣ್ಣುಗಳು ಕಪ್ಪಾಗುತ್ತಿದ್ದು, ಕೇಳುವವರಿಲ್ಲದಂತಾಗಿದೆ.ತರಕಾರಿ ಬೆಲೆಯಲ್ಲೂ ಸಹ ಏರಿಕೆಯಾಗಿದ್ದು, ನಾಟಿ ಬೀನ್ಸ್ ಕೆಜಿ 80ರೂ., ಮೂಲಂಗಿ 40ರೂ., ಬೆಂಡೆಕಾಯಿ 50ರೂ., ಹಾಗಲಕಾಯಿ 60ರೂ., ಹೀರೇಕಾಯಿ 50ರೂ.ಗೆ ಮಾರಾಟವಾಗುತ್ತಿದೆ.
ಬೆಲೆ ಹೆಚ್ಚಾದರೂ ಸರಿಯೇ ನಮ್ಮ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗಬೇಕಲ್ಲ ಎಂದು ಬೆಲೆ ಏರಿಕೆ ನಡುವೆಯೂ ಹಬ್ಬವನ್ನು ಆಚರಿಸುತ್ತಿದ್ದಾರೆ.