ನವದೆಹಲಿ,ಏ.14- ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿ, ಒಂದು ರಾಷ್ಟ್ರ ಒಂದು ಚುನಾವಣೆ, ಬಡವರಿಗೆ 5 ವರ್ಷ ಉಚಿತ ಅಕ್ಕಿ ವಿತರಣೆ, ಮುದ್ರಾಂಕ ಸಾಲ ಹೆಚ್ಚಳ, ವಿಶ್ವದಲ್ಲಿ ಭಾರತ 3ನೇ ಬೃಹತ್ ಆರ್ಥಿಕ ರಾಷ್ಟ್ರದ ಗುರಿ, 3 ಕೋಟಿ ಮಹಿಳೆಯರಿಗೆ ಲಕ್‍ಪತಿ ದೀದಿ ಸೇರಿದಂತೆ ಮಹಿಳೆಯರು, ಯುವಕರು, ಹಿರಿಯ ನಾಗರಿಕರು, ರೈತರು ಸೇರಿದಂತೆ ಎಲ್ಲಾ ಸಮುದಾಯಕ್ಕೂ ಮೋದಿ ಗ್ಯಾರಂಟಿ ಹೆಸರಿನಲ್ಲಿ ಬಿಜೆಪಿ ಭರವಸೆಗಳ ಮಹಾಪೂರವನ್ನೇ ಹರಿಸಿದೆ.
ಕೇಂದ್ರದಲ್ಲಿ ಮತ್ತೆ ಮೂರನೇ ಬಾರಿಗೆ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವ ಹೆಗ್ಗುರಿಯೊಂದಿಗೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವ ಬಿಜೆಪಿ, ಕಾಲಮಿತಿಯೊಳಗೆ ಅನುಷ್ಠಾನಗೊಳಿಸುವ ಭರವಸೆಯನ್ನು ಕೊಟ್ಟಿದೆ. ಮೋದಿ ಕಿ ಗ್ಯಾರಂಟಿ ಎಂಬ ಅಡಿಬರಹದೊಂದಿಗೆ ದೇಶದ ಅಭಿವೃದ್ಧಿ, ಮಹಿಳಾ ಕಲ್ಯಾಣ ಮತ್ತು ವಿಕ್ಷಿತ್ ಭಾರತ್ (ಅಭಿವೃದ್ಧಿ ಹೊಂದಿದ ಭಾರತ)ದ ಮಾರ್ಗಸೂಚಿಗಳೊಂದಿಗೆ ಜನತೆಯ ಮುಂದೆ ನೀಡಿದೆ.
ನವದೆಹಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರಮೋದಿ, ಪ್ರಣಾಳಿಕೆ ಸಮಿತಿ ಅಧ್ಯಕ್ಷ ರಾಜನಾಥ್‍ಸಿಂಗ್, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಅಮಿತ್ ಷಾ ಪ್ರಣಾಳಿಕೆ ಬಿಡುಗಡೆ ಮಾಡಿದರು. ಪ್ರತಿ ಕ್ಷಣವೂ ದೇಶಕ್ಕಾಗಿ ಎಂಬ ಚುನಾವಣಾ ಘೋಷವಾಕ್ಯದೊಂದಿಗೆ ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಇದೇ ವೇಳೆ ಪ್ರಧಾನಿ ಮೋದಿ ಅವರ 10 ವರ್ಷಗಳ ಸಾಧನೆ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಯಿತು.
ಪ್ರಣಾಳಿಕೆಯಲ್ಲಿ 70 ವರ್ಷ ಮೇಲ್ಪಟ್ಟ ಎಲ್ಲರನ್ನೂ ಹಾಗೂ ತೃತೀಯ ಲಿಂಗಿಗಳನ್ನು ಆಯುಷ್ಮಾನ್ ಭಾರತ್ ವ್ಯಾಪ್ತಿಗೆ ಸೇರ್ಪಡೆ ಮಾಡುವ ಭರವಸೆ ನೀಡಲಾಗಿದ್ದು, ಆ ಮೂಲಕ ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ ಸೌಲಭ್ಯ, 3 ಕೋಟಿ ಮನೆ ನಿರ್ಮಾಣ, ಪೈಪ್ ಮೂಲಕ ಮನೆಗೆ ಅಡುಗೆ ಅನಿಲ, 3 ಕೋಟಿ ಗ್ರಾಮೀಣ ಮಹಿಳೆಯರು ಲಖ್‍ಪತಿ ದೀದಿ ಯೋಜನೆ ಫಲಾನುಭವಿಗಳಾಗಲಿದ್ದಾರೆ ಎಂಬ ಭರವಸೆಯನ್ನು ಬಿಜೆಪಿ ನೀಡಿದೆ.
ಗರ್ಭಕಂಠ ಕ್ಯಾನ್ಸರ್ ತಡೆಗೆ ವಿಶೇಷ ಯೋಜನೆ, ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್ ತಡೆಯಲು ಕಠಿಣ ಕಾನೂನು, ಹಿರಿಯ ನಾಗರಿಕರಿಗೆ ಜ್ಞಾನ ಹಂಚಿಕೆ ಪೋರ್ಟಲ್ ಹಾಗೂ ಬಡವರಿಗೆ ಉಚಿತ ಪಡಿತರ, ನೀರು ಮತ್ತು ಗ್ಯಾಸ್ ಸಂಪರ್ಕ ಕಲ್ಪಿಸಲಾಗುವುದು ಎಂದು ತಿಳಿಸಿದೆ.
ಮನೆ ಬಾಗಿಲಿಗೆ ಸರ್ಕಾರಿ ಸೇವೆ ಒದಗಿಸುವುದು, ಅಂಚೆ ಮತ್ತು ಡಿಜಿಟಲ್ ನೆಟ್ವರ್ಕ್ ಸಹಯೋಗ, ಹಿರಿಯ ನಾಗರಿಕರಿಗೆ ಯುಪಿಐ ಬಗ್ಗೆ ತರಬೇತಿ, ಮೋಸ-ವಂಚನೆಗಳಿಂದ ತಪ್ಪಿಸಲು ಕ್ರಮಕೈಗೊಳ್ಳುವುದು, ಹಿರಿಯ ನಾಗರಿಕರಿಗೆ ಆಯುಷ್ ಕ್ಯಾಂಪ್ ಆಯೋಜನೆ, ರಾಜ್ಯ ಸರ್ಕಾರಗಳ ಜೊತೆ ಸೇರಿ ಹಿರಿಯ ನಾಗರಿಕರಿಗೆ ಸುಗಮ ತೀರ್ಥಯಾತ್ರೆ ವ್ಯವಸ್ಥೆ, ಕಾಲಕ್ಕೆ ತಕ್ಕಂತೆ ಎಂಎಸ್ಪಿ ಜಾರಿ, ಭಾರತವನ್ನು ಅಂತಾರಾಷ್ಟ್ರೀಯ ನ್ಯೂಟ್ರಿ ಹಬ್ ಮಾಡುವುದು, ಕೃಷಿಗಾಗಿ ಪ್ರತ್ಯೇಕ ಸ್ಯಾಟಲೈಟ್ ಮೊದಲಾದ ಭರವಸೆಗಳನ್ನು ಜನರಿಗೆ ನೀಡಿದೆ.
ಒಂದು ರಾಷ್ಟ್ರ, ಒಂದು ಚುನಾವಣೆ ಮತ್ತು ಸಾಮಾನ್ಯ ಮತದಾರರ ಪಟ್ಟಿಯನ್ನು ತರುವುದು, ಏಕರೂಪ ನಾಗರಿಕ ಸಂಹಿತೆ ಜಾರಿ, ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯಡಿ ಶೂನ್ಯ ವಿದ್ಯುತ್ ಬಿಲ್, ಮಹಿಳೆಯರಿಗಾಗಿ ಶೌಚಾಲಯಗಳ ಸಂಖ್ಯೆ ಹೆಚ್ಚಳ ಮತ್ತು ಮಹಿಳಾ ಶಕ್ತಿ ವಂದನ್ ಕಾಯ್ದೆಯ ಅನುಷ್ಠಾನ, ವಂದೇ ಭಾರತ್ ರೈಲು ಜಾಲದ ವಿಸ್ತರಣೆ, ಅಮೃತ್ ಭಾರತ್ ಮತ್ತು ನಮೋ ಭಾರತ್ ರೈಲುಗಳು ಬರಲಿವೆ ಎಂದು ತಿಳಿಸಲಾಗಿದೆ.
ಹೊಸ ವಿಮಾನ ನಿಲ್ದಾಣ, ಹೆದ್ದಾರಿಗಳು, ಮೆಟ್ರೋ ಮತ್ತು ನೀರಿನ ಮೆಟ್ರೋಗಳು ಬರಲಿವೆ. ಹೆದ್ದಾರಿಗಳಲ್ಲಿ ಟ್ರಕ್ ಚಾಲಕರಿಗೆ ಆಧುನಿಕ ಸೌಲಭ್ಯಗಳು, ವಿಶ್ವಾದ್ಯಂತ ರಾಮಾಯಣ ಉತ್ಸವ ಆಚರಿಸಲಾಗುವುದು ಎಂದು ಉಲ್ಲೇಖಿಸಲಾಗಿದೆ.
70 ವರ್ಷ ಮೇಲ್ಪಟ್ಟವರು ಕೂಡ ಆಯುಷ್ಮಾನ್ ಭಾರತ ಯೋಜನೆಗೆ ಒಳಪಡಲಿದ್ದು, 70 ವರ್ಷ ಮೇಲ್ಪಟ್ಟವರೂ ಕೂಡ ಇನ್ನು ಮುಂದೆ 5 ಲಕ್ಷದವರೆಗೆ ಉಚಿತ ಚಿಕಿತ್ಸೆ, ಜನೌಷ ಕೇಂದ್ರಗಳಲ್ಲಿ ಶೇ.80ರಷ್ಟು ರಿಯಾಯಿತಿಯೊಂದಿಗೆ ಔಷಧ ವಿತರಣೆ, ದೇಶದ 10 ಕೋಟಿ ರೈತರು ಭವಿಷ್ಯದಲ್ಲಿಯೂ ಪಿಎಂ-ಕಿಸಾನ್ ಸಮ್ಮಾನ್ ನಿಯ ಪ್ರಯೋಜನಗಳನ್ನು ಪಡೆಯಲಿದ್ದಾರೆ.
ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ನರೇಂದ್ರಮೋದಿ, ಸಹಕಾರದ ಮೂಲಕ ಸಮೃದ್ಧಿ ಎಂಬ ದೂರದೃಷ್ಟಿಯೊಂದಿಗೆ ಬಿಜೆಪಿ ರಾಷ್ಟ್ರೀಯ ಸಹಕಾರ ನೀತಿ ಯನ್ನು ಪರಿಚಯಿಸಲಿದೆ. ಈ ಮೂಲಕ ಕ್ರಾಂತಿಕಾರಿ ದಿಕ್ಕಿನಲ್ಲಿ ಮುನ್ನಡೆಯಲಿದ್ದೇವೆ. ದೇಶಾದ್ಯಂತ ಹೈನುಗಾರಿಕೆ ಮತ್ತು ಸಹಕಾರ ಸಂಘಗಳ ಸಂಖ್ಯೆಯನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲಾಗುವುದು ಎಂದರು.
ಪೈಪ್ ಮೂಲಕ ಗ್ಯಾಸ್ ತಲುಪಿಸುವ ಕೆಲಸ ಮಾಡಲಾಗುವುದು, ಬಿಜೆಪಿ ಸರ್ಕಾರ ಬಡವರಿಗಾಗಿ 4 ಕೋಟಿ ಪಕ್ಕಾ ಮನೆಗಳನ್ನು ನಿರ್ಮಿಸಿದೆ. ಈಗ ರಾಜ್ಯ ಸರ್ಕಾರದಿಂದ ಸಿಗುತ್ತಿರುವ ಹೆಚ್ಚುವರಿ ಮಾಹಿತಿಯನ್ನು ಪರಿಗಣಿಸಿ, ಆ ಕುಟುಂಬಗಳ ಬಗ್ಗೆ ಚಿಂತಿಸುವುದರೊಂದಿಗೆ ಇನ್ನೂ 3 ಕೋಟಿ ಮನೆಗಳನ್ನು ನಿರ್ಮಿಸುವ ಭರವಸೆಯೊಂದಿಗೆ ನಾವು ಮುಂದುವರಿಯುತ್ತೇವೆ.
ಇಲ್ಲಿಯವರೆಗೆ ನಾವು ಪ್ರತಿ ಮನೆಗೆ ಅಗ್ಗದ ಸಿಲಿಂಡರ್‍ಗಳನ್ನು ತಲುಪಿಸಿದ್ದೇವೆ, ಈಗ ನಾವು ಪ್ರತಿ ಮನೆಗೆ ಅಗ್ಗದ ಪೈಪ್ಡ್ ಅಡುಗೆ ಅನಿಲವನ್ನು ತಲುಪಿಸಲು ತ್ವರಿತವಾಗಿ ಕೆಲಸ ಮಾಡುತ್ತೇವೆ ಎಂದು ವಾಗ್ದನ ನೀಡಿದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಕೇಂದ್ರ ನಾಯಕರು ಅಂಬೇಡ್ಕರ್ ಪ್ರತಿಮೆಗೆ ಪುಷ್ಪನಮನವನ್ನು ಸಲ್ಲಿಸಿ ಪ್ರಣಾಳಿಕೆ ಪತ್ರ ಬಿಡುಗಡೆ ಮಾಡಿದರು.