Wednesday, May 1, 2024
Homeರಾಜ್ಯಲೋಕಸಭೆ ಚುನಾವಣೆ ಬಳಿಕ 'ಗ್ಯಾರಂಟಿ' ಸರ್ಕಾರದ ಪತನದ ಸುಳಿವು ನೀಡಿದ ರಮೇಶ್ ಜಾರಕಿಹೊಳಿ

ಲೋಕಸಭೆ ಚುನಾವಣೆ ಬಳಿಕ ‘ಗ್ಯಾರಂಟಿ’ ಸರ್ಕಾರದ ಪತನದ ಸುಳಿವು ನೀಡಿದ ರಮೇಶ್ ಜಾರಕಿಹೊಳಿ

ಬೆಂಗಳೂರು,ಏ.14- ಲೋಕಸಭಾ ಚುನಾವಣೆ ಬಳಿಕ ಡಬ್ಬಲ್ ಇಂಜಿನ್ ಸರ್ಕಾರ ಬರಲಿದೆ ಎಂದು ಹೇಳುವ ಮೂಲಕ ಬಿಜೆಪಿಯ ಶಾಸಕ ರಮೇಶ್ ಜಾರಕಿಹೊಳಿ, ರಾಜ್ಯ ಕಾಂಗ್ರೆಸ್ ಸರ್ಕಾರದ ಪತನದ ಎಚ್ಚರಿಕೆ ನೀಡಿರುವುದು ರಾಜಕೀಯವಾಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಶಾಸಕರನ್ನು ಖರೀದಿಸಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರಗಳನ್ನು ಪತನಗೊಳಿಸುವುದನ್ನು ಮುಂದುವರೆಸಲಿದೆ ಎಂದು ಬಿಜೆಪಿಯೇತರ ಪಕ್ಷಗಳು ಮೊದಲಿನಿಂದಲೂ ಆರೋಪಿಸುತ್ತಲೇ ಇವೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 135 ಸ್ವಂತ ಶಾಸಕರು ಹಾಗೂ ಮೂವರು ಪಕ್ಷೇತರರು ಸೇರಿ 138 ಸಂಖ್ಯಾಬಲವನ್ನು ಹೊಂದಿದೆ. ಬಹುಮತಕ್ಕೆ ಸಾಮಾನ್ಯ ಸಂಖ್ಯೆಗಿಂತಲೂ ಹೆಚ್ಚು ಶಾಸಕರನ್ನು ಹೊಂದಿರುವ ಸರ್ಕಾರವನ್ನು ಪತನಗೊಳಿಸುವುದು ಪ್ರಜಾಪ್ರಭುತ್ವದ ವಿರೋಧಿ ಕೃತ್ಯವಾಗಲಿದೆ ಎಂದು ಕಾಂಗ್ರೆಸ್ ನಾಯಕರು ಟೀಕಿಸುತ್ತಲೇ ಇದ್ದಾರೆ.

ಅದನ್ನು ಮೀರಿ ಪದೇಪದೇ ರಾಜ್ಯಸರ್ಕಾರದ ಪತನದ ಬಗ್ಗೆ ಚರ್ಚೆಗಳಾಗುತ್ತಿವೆ. ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿ.ಕೆ.ಸುರೇಶ್ ಪರವಾಗಿ ಮತಯಾಚನೆ ಮಾಡಿದ್ದ ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ರವರು ಮುಂದಿನ 5 ವರ್ಷ ನಿಮ್ಮ ಸೇವೆಗೆ ನಾವು ಲಭ್ಯವಿದ್ದೇವೆ. ದೆಹಲಿಯ ನಾಯಕರು ಬಂದು ನಿಮ್ಮ ಕೆಲಸ ಮಾಡಿಕೊಡುವುದಿಲ್ಲ. ನಾವೇ ನಿಮ್ಮ ಕೆಲಸ ಮಾಡಿಕೊಡಬೇಕು ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ಒತ್ತಡ ಹೇರಿದ್ದರು.

ಕಾಂಗ್ರೆಸ್ ಸರ್ಕಾರ ಹೆಚ್ಚು ದಿನ ಇರುವುದಿಲ್ಲ, ಕೇಂದ್ರದಲ್ಲೂ ಬಿಜೆಪಿ, ರಾಜ್ಯದಲ್ಲೂ ಬಿಜೆಪಿ ಸರ್ಕಾರಗಳು ಅಧಿಕಾರಕ್ಕೆ ಬರಲಿದೆ ಎಂದು ಪ್ರತಿಪಾದಿಸುವ ಮೂಲಕ ಬಿಜೆಪಿ ನಾಯಕರು ಕಾಂಗ್ರೆಸ್ಸಿಗರಿಗೆ ತಿರುಗೇಟು ನೀಡುತ್ತಿದ್ದಾರೆ. ಪರಸ್ಪರ ಸರ್ಕಾರದ ಅಸ್ತಿತ್ವದ ಬಗ್ಗೆ ಅನುಮಾನ ಹುಟ್ಟುವಂತಹ ಚರ್ಚೆಗಳು ಜನರಲ್ಲಿ ಗೊಂದಲ ಮೂಡಿಸುತ್ತಿವೆ.

ಬಿಜೆಪಿ ಕೇಂದ್ರದಲ್ಲಿ ಮರಳಿ ಅಧಿಕಾರ ಹಿಡಿದಿದ್ದೇ ಆದರೆ ಬಿಜೆಪಿಯೇತರ ಆಡಳಿತ ಇರುವ ರಾಜ್ಯಗಳಲ್ಲಿ ಆಪರೇಷನ್ ಕಮಲ ಜೋರಾಗಲಿದೆ. ಕಾಂಗ್ರೆಸ್ ಶಾಸಕರನ್ನು ಸೆಳೆದು ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂಬ ಚರ್ಚೆಗಳು ಚಾಲ್ತಿಯಲ್ಲಿವೆ.

ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶ ಸೇರಿದಂತೆ ಮೂರು ರಾಜ್ಯಗಳಲ್ಲಿ ಮಾತ್ರ ಸ್ವಂತಬಲದ ಮೇಲೆ ಅಧಿಕಾರದಲ್ಲಿದೆ. ಉಳಿದಂತೆ ತಮಿಳುನಾಡು, ಜಾರ್ಖಾಂಡ್ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಪಾಲುದಾರ ಪಕ್ಷವಾಗಿದೆ.

ಬಿಜೆಪಿ ಈ ಮೊದಲು ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಸದೃಢ ಸರ್ಕಾರಗಳನ್ನೇ ಆಪರೇಷನ್ ಕಮಲದ ಮೂಲಕ ಪತನಗೊಳಿಸಿತ್ತು. ಮುಂದುವರೆದು ಮತ್ತೆ ಅಧಿಕಾರಕ್ಕೆ ಬಂದರೆ ಅದೇ ಮಾದರಿಯ ಕಾರ್ಯಾಚರಣೆ ನಡೆಯಬಹುದು. ಬಿಜೆಪಿಯೇತರ ಸರ್ಕಾರಗಳು ಪತನಗೊಳ್ಳಬಹುದು ಎಂಬ ಆತಂಕ ಒಳಗೊಳಗೆ ಇದ್ದೇ ಇದೆ.

ಅದಕ್ಕೆ ಪೂರಕವಾಗಿ ಬಿಜೆಪಿ ನಾಯಕರು ಡಬ್ಬಲ್ ಇಂಜಿನ್ ಸರ್ಕಾರದ ಪ್ರಸ್ತಾಪ ಮಾಡುತ್ತಾ ಆಪರೇಷನ್ ಕಮಲವನ್ನು ಮತ್ತಷ್ಟು ವೈಭವೀಕರಿಸುತ್ತಿದ್ದಾರೆ. ಅದರಲ್ಲೂ 2019 ರಲ್ಲಿ ಕರ್ನಾಟಕದಲ್ಲಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿದ ಆಪರೇಷನ್ ಕಮಲದ ರೂವಾರಿ ರಮೇಶ್ ಜಾರಕಿಹೊಳಿ ಡಬ್ಬಲ್ ಇಂಜಿನ್ ಸರ್ಕಾರದ ಪ್ರಸ್ತಾಪ ಮಾಡಿರುವುದು ಕುತೂಹಲ ಕೆರಳಿಸಿದೆ.

RELATED ARTICLES

Latest News