Tuesday, April 30, 2024
Homeರಾಜಕೀಯಜಯನಗರದಲ್ಲಿ ಜಪ್ತಿಯಾಗಿದ್ದು ಬಿಜೆಪಿ ಪಾಪದ ಹಣ : ಸಚಿವ ರಾಮಲಿಂಗಾರೆಡ್ಡಿ

ಜಯನಗರದಲ್ಲಿ ಜಪ್ತಿಯಾಗಿದ್ದು ಬಿಜೆಪಿ ಪಾಪದ ಹಣ : ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು,ಏ.14- ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜಯನಗರದಲ್ಲಿ ಬಿಜೆಪಿಯ ದಾಖಲೆಯಿಲ್ಲದ ಕೋಟ್ಯಂತರ ರೂಪಾಯಿ ಹಣವನ್ನು ಚುನಾವಣೆ ಆಯೋಗ ಜಪ್ತಿ ಮಾಡಿದ್ದು, ಇದು ಬಿಜೆಪಿ ಎಲೆಕ್ಟ್ರೋಲ್ ಬಾಂಡ್ ರೂಪದಲ್ಲಿ ಕೊಳ್ಳೆ ಹೊಡೆದ ಪಾಪದ ಹಣವಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ದೂರಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಐಶಾರಾಮಿ ಕಾರಿನಲ್ಲಿ ಸಿಕ್ಕ ಕೋಟ್ಯಂತರ ರೂಪಾಯಿ ಹಣವನ್ನು ಪ್ರಧಾನಿಯ ಬೆಂಗಳೂರು ಕಾರ್ಯಕ್ರಮಕ್ಕೆ ಜನ ಸೇರಿಸಲು ಬಳಸುವ ಉದ್ದೇಶದಿಂದ ಸಾಗಿಸುತ್ತಿದ್ದರೆ ಎಂದು ಪ್ರಶ್ನಿಸಿದ್ದಾರೆ.

ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಚುನಾವಣೆ ನಡೆಸುವುದು, ಬಹುಮತ ಬರದಿದ್ದಾಗ ನೂರಾರು ಕೋಟಿ ಹಣ ಹಾಕಿ ಶಾಸಕರು, ಸಂಸದರನ್ನು ಖರೀದಿಸುವುದು ಬಿಜೆಪಿಯ ಜಾಯಮಾನ. ಈಗ ಅವರ ಹಣವಂತೂ ಹೋಗಿದೆ, ಮಾನವನ್ನಾದರೂ ಉಳಿಸಿಕೊಳ್ಳಬೇಕು ಎನ್ನುವ ಕಾರಣದಿಂದ ಕಾಂಗ್ರೆಸ್ ಮೇಲೆ ಆಧಾರ ರಹಿತ ಆರೋಪವನ್ನು ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಈ ಬಾರಿಯ ಬೆಂಗಳೂರು ದಕ್ಷಿಣ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲುವ ಭಯ ಉಂಟಾಗಿದ್ದು, ಲೂಟಿ ಮಾಡಿದ ಹಣವನ್ನೆಲ್ಲ ಖರ್ಚು ಮಾಡಿಯಾದರೂ ಶತಾಯಗತಾಯ ಗೆಲ್ಲಲೇಬೇಕು ಎಂದು ಅವರ ತಂಡ ಹೊರಟಿರುವಂತಿದೆ. ನಾವು ಜನ ಬಲವನ್ನು ನಂಬಿದವರು, ಬಿಜೆಪಿಯಂತೆ ಹಣ ಬಲವನ್ನಲ್ಲ ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಹಣ ಜಪ್ತಿ ಮಾಡಲಾಗಿರುವ ಕಾರು ಮತ್ತು ಅದರ ನೋಂದಣಿ ಸಂಖ್ಯೆ ಕಣ್ಣೆದುರಿಗೇ ಇದೆ. ಅದರ ಆಧಾರದ ಮೇಲೆ ತನಿಖೆ ಮಾಡಿದರೆ ಕಾರಿನ ಮಾಲೀಕರು ಯಾರು ಎಂಬುದು ಗೊತ್ತಾಗಲಿದೆ. ನಿನ್ನೆ ಹಣ ಸಿಕ್ಕ ವೇಲೆ ಕಾರಿನ ಬಳಿ ಬಿಜೆಪಿಯ ಬಿಬಿಎಂಪಿ ಸದಸ್ಯರೊಬ್ಬರು ಇರುವುದು ಖಚಿತವಾಗಿದೆ. ಹಾಗಿದ್ದ ಮೇಲೆ ಹಣ ಯಾರದು ಎಂಬುದು ಮೇಲ್ನೋಟಕ್ಕೆ ತಿಳಿಯಲಿದೆ ಎಂದು ಹೇಳಿದರು.

RELATED ARTICLES

Latest News