ಬೆಂಗಳೂರು,ಏ.15- ದಾರಿ ತಪ್ಪಿದ ಹೇಳಿಕೆಗೆ ಕ್ಷಮೆ ಕೇಳಿದ ಬಳಿಕವೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮುಂದುವರೆಸಿದ್ದಾರೆ.ಲೋಕಸಭಾ ಚುನಾವಣೆಯ ಅಖಾಡದಲ್ಲಿ ಕುಮಾರಸ್ವಾಮಿಯವರ ಹೇಳಿಕೆ ಕಾಂಗ್ರೆಸ್‍ಗೆ ಅಸ್ತ್ರವಾಗಿ ಪರಿಣಮಿಸಿದೆ. ಇದನ್ನೇ ಮುಂದಿಟ್ಟುಕೊಂಡು ರಾಜ್ಯಾದ್ಯಂತ ತಾಲ್ಲೂಕು ಮಟ್ಟದಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ.
ಜಿಲ್ಲಾಮಟ್ಟದಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿ ಜಿಲ್ಲಾಕಾರಿಗಳ ಮೂಲಕ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.ತಮ್ಮ ಹೇಳಿಕೆಯಿಂದಾದ ಅಚಾತುರ್ಯವನ್ನು ಸರಿಪಡಿಸಲು ನಿನ್ನೆಯಿಂದಲೂ ಎಚ್.ಡಿ.ಕುಮಾರಸ್ವಾಮಿ ಪದೇಪದೇ ಸ್ಪಷ್ಟ ನಿಲುವನ್ನು ನೀಡುತ್ತಿದ್ದಾರೆ. ಇಂದು ಬೆಳಿಗ್ಗೆ ತುರ್ತು ಪತ್ರಿಕಾಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೂ ಕಾಂಗ್ರೆಸ್ ಪ್ರತಿಭಟನೆ ಮುಂದುವರೆಸಿದೆ.
ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಆನ್‍ಲೈನ್‍ನಲ್ಲಿ ಸಭೆ ನಡೆಸಿ ಪಂಚಖಾತ್ರಿ ಯೋಜನೆಗಳ ಮಹಿಳಾ ಫಲಾನುಭವಿಗಳು ಪ್ರತಿಭಟನೆ ನಡೆಸುವಂತೆ ಕರೆ ನೀಡಿದ್ದಾರೆ.ಕ್ಷಮಾಪಣೆ, ವಿಷಾದದಂತಹ ನಾಟಕಗಳನ್ನು ನಾವು ಒಪ್ಪಲು ಸಾಧ್ಯವಿಲ್ಲ. ಹೀಗಾಗಿ ಮಹಿಳೆಯರು ಪ್ರತಿಭಟನೆ ಮುಂದುವರೆಸಲಿದ್ದಾರೆ. ಶ್ರೀಸಾಮಾನ್ಯರಿಗೆ ಕುಮಾರಸ್ವಾಮಿಯವರ ಮನೋಭಾವವನ್ನು ಅರ್ಥ ಮಾಡಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಬೆಳಗಾವಿಯಲ್ಲಿಂದು ಹೇಳಿದ್ದಾರೆ.
ದಾರಿ ತಪ್ಪಿದ ಹೇಳಿಕೆ ರಾಜಕೀಯ ಅಖಾಡದಲ್ಲಿ ಭಾರೀ ಸದ್ದು ಮಾಡುತ್ತಿದೆ. ಪಂಚಖಾತ್ರಿ ಯೋಜನೆಗಳ ಮಹತ್ವವನ್ನು ತಗ್ಗಿಸಲು ಕುಮಾರಸ್ವಾಮಿ ನೀಡಿದ್ದ ಹೇಳಿಕೆ ತಿರುಗುಬಾಣವಾಗಿ ಪರಿಣಮಿಸಿದೆ.ಕುಮಾರಸ್ವಾಮಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಮಹಿಳೆಯರ ವಿಷಯವಾಗಿ ಉಗ್ರವಾಗಿ ಮಾತನಾಡಿದ್ದಾರೆ ಎಂಬ ಅಭಿಪ್ರಾಯವನ್ನು ದೃಢವಾಗಿ ಶ್ರೀಸಾಮಾನ್ಯರಿಗೆ ಅರ್ಥೈಸಲು ಕಾಂಗ್ರೆಸ್ ನಿರ್ಧರಿಸಿದೆ.
ಲೋಕಸಭಾ ಚುನಾವಣಾ ಅಖಾಡದಲ್ಲಿ ಬಿಜೆಪಿಯ ಎಲ್ಲಾ ನಾಯಕರನ್ನೂ ಓವರ್‍ಟೇಕ್ ಮಾಡಿ ಅತ್ಯಂತ ಪ್ರಭಾವಿಯಾಗಿ ಹೊರಹೊಮ್ಮಿದ್ದ ಕುಮಾರಸ್ವಾಮಿ ಶಕ್ತಿ ಕೇಂದ್ರವಾಗಿ ಬಿಂಬಿತವಾಗಿದ್ದರು. ಹಳೆಯ ಮೈಸೂರು ಭಾಗದಲ್ಲಿ ಓಟ್ ಬ್ಯಾಂಕ್ ಗಿಟ್ಟಿಸುವಲ್ಲಿ ಕುಮಾರಸ್ವಾಮಿ ಪಾತ್ರ ಮಹತ್ವದ್ದು ಎಂದು ವಿಶ್ಲೇಷಣೆ ನಡೆದಿತ್ತು.
ಆದರೆ ಬಾಯಿ ತಪ್ಪಿದ ಮಾತುಗಳು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ. ಕಾಂಗ್ರೆಸ್ ಪಕ್ಷ ಹೆಜ್ಜೆಹೆಜ್ಜೆಗೂ ಬಳಸಿಕೊಂಡು ತೀವ್ರ ವಾಗ್ದಾಳಿಗಿಳಿದಿದೆ. ರಾಜ್ಯದಲ್ಲಿ ಮಹಿಳಾ ಮತದಾರರ ಪ್ರಮಾಣ ಶೇ.50 ರಷ್ಟಿದ್ದು, ನಿರ್ಣಾಯಕರಾಗಿದ್ದಾರೆ. ಈಗಾಗಲೇ ಪಂಚಖಾತ್ರಿ ಯೋಜನೆಗಳಿಂದ ಕಾಂಗ್ರೆಸ್ ಪಕ್ಷ ಮಹಿಳಾ ಮತದಾರರ ಬೆಂಬಲವನ್ನು ಗಿಟ್ಟಿಸುವಲ್ಲಿ ಯಶಸ್ವಿಯಾಗಿತ್ತು. ಅದರ ನಡುವೆ ಮಹಿಳಾ ಮತದಾರರನ್ನು ಸೆಳೆಯಲು ಜೆಡಿಎಸ್ ಮತ್ತು ಬಿಜೆಪಿಯವರು ನಾನಾ ರೀತಿಯ ಸರ್ಕಸ್ ನಡೆಸುತ್ತಿದ್ದರು. ಈಗ ಕುಮಾರಸ್ವಾಮಿಯವರ ಹೇಳಿಕೆ ಸಾಕಷ್ಟು ಮುಜುಗರ ಉಂಟುಮಾಡಿದ್ದು, ಪರಿಸ್ಥಿತಿಯನ್ನು ಸರಿದೂಗಿಸಲು ಪರದಾಡುವಂತಹ ಸನ್ನಿವೇಶ ನಿರ್ಮಾಣವಾಗಿದೆ.