Thursday, May 2, 2024
Homeರಾಜ್ಯತಾಯಂದಿರಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ : ಎಚ್.ಡಿ.ಕುಮಾರಸ್ವಾಮಿ

ತಾಯಂದಿರಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ : ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು,ಏ.15- ತುರುವೇಕೆರೆಯಲ್ಲಿನ ಚುನಾವಣಾ ಪ್ರಚಾರ ಸಭೆಯಲ್ಲಿ ನೀಡಿದ ಹೇಳಿಕೆಯಿಂದ ರಾಜ್ಯದ ಯಾವುದೇ ತಾಯಂದಿರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು. ಜೆಡಿಎಸ್ ಮಹಿಳಾ ಮುಖಂಡರೊಂದಿಗೆ ತುರ್ತು ಸುದ್ದಿಗೋಷ್ಠಿಯನ್ನು ನಡೆಸಿದ ಅವರು, ಮಹಿಳೆಯರಿಗೆ ಅಗೌರವ ತರುವಂಥ ಮಾತನ್ನು ಆಡಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಾಲ ಮಾಡುತ್ತಿದ್ದಾರೆ. ಸಾಲದ ಹೊರೆ ನಾಡಿನ ಜನರ ಮೇಲೆ ಹೊರಿಸುತ್ತಿದ್ದಾರೆ. ತಾಯಂದಿರಿಗೆ 2 ಸಾವಿರ ರೂ. ನೀಡಿ ಅವರ ಯಜಮಾನರ ಜೇಬಿನಿಂದ ಪಿಕ್‍ಪ್ಯಾಕೇಟ್ ಮಾಡಿ ಐದಾರು ಸಾವಿರ ವಸೂಲಿ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ತಾಯಂದಿರು ಎಚ್ಚರಿಕೆಯಿಂದಿರಬೇಕು. ಗ್ಯಾರಂಟಿಗೆ ಮರುಳಾಗಿ ದಾರಿ ತಪ್ಪಬಾರದು ಎಂದು ಹೇಳಿದ್ದೇನೆಯೇ ಹೊರತು, ಅಗೌರವದಿಂದಲ್ಲ. ನಾನು ಬಳಸಿರುವ ಶಬ್ದದಲ್ಲಿ ಯಾವುದೇ ಅಶ್ಲೀಲತೆ ಇಲ್ಲ ಎಂದು ಸಮರ್ಥಿಸಿಕೊಂಡರು.

ಕಾಂಗ್ರೆಸ್ ಅಧ್ಯಕ್ಷರು, ಹಿರಿಯ ಪದಾಧಿಕಾರಿಗಳು, ಮಹಿಳಾ ಘಟಕದ ಪದಾಕಾರಿಗಳು ನನ್ನ ಈ ಹೇಳಿಕೆ ವಿರುದ್ಧ ಪ್ರತಿಭಟನೆ ಮಾಡಿ ಮಹಿಳೆಯರ ಪರವಾಗಿ ಕಂಬನಿ ಮಿಡಿದಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದವರು ಮಹಿಳೆಯರ ಬಗ್ಗೆ ನೀಡಿರುವ ಅಗೌರವ ತರುವಂಥ ಹಲವು ಹೇಳಿಕೆಗಳ ನಿದರ್ಶನವನ್ನು ನೀಡಬಹುದು ಎಂದರು.

ಹೆಣ್ಣು ಮಕ್ಕಳನ್ನು ಬೆದರಿಸಿ, ಜಮೀನು ಬರೆಸಿಕೊಂಡಾಗ ದುಃಖ ಬರಲಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷರ ಹೆಸರನ್ನು ಉಲ್ಲೇಖಿಸದೇ ವಾಗ್ದಾಳಿ ನಡೆಸಿದರು.ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ರವರು ನಟಿ ಹೇಮಾಮಾಲಿನಿಯವರನ್ನು ಕುರಿತು ನೀಡಿರುವ ಹೇಳಿಕೆ ಮಹಿಳೆಯರಿಗೆ ಗೌರವ ತರುವಂಥದ್ದೇ ಎಂದು ಪ್ರಶ್ನಿಸಿದರು.

ಯಾವುದೇ ಆಮಿಷಕ್ಕೆ ಒಳಗಾಗದೇ ತಾಯಂದಿರ ಪರವಾಗಿ ಸಾರಾಯಿ ನಿಷೇಧವನ್ನು ನಾನು ಮುಖ್ಯಮಂತ್ರಿಯಾಗಿ ಮಾಡಿದ್ದೆ. ಕಾಂಗ್ರೆಸ್‍ನವರಿಗೆ ಟೀಕಿಸಲು ವಿಷಯವಿಲ್ಲದೆ ಈ ವಿಚಾರವನ್ನು ಪ್ರಸ್ತಾಪ ಮಾಡುತ್ತಿದ್ದಾರೆ. ಕಾಂಗ್ರೆಸ್ ವಕ್ತಾರರು ದೆಹಲಿಯಲ್ಲಿ ಹೆಣ್ಣು ಮಕ್ಕಳ ಬಗ್ಗೆ ನೀಡಿರುವ ಹೇಳಿಕೆ ಕುರಿತು ಕಾಂಗ್ರೆಸ್ ನಾಯಕರಾದ ಸೋನಿಯಾಗಾಂಧಿ, ರಾಹುಲ್‍ಗಾಂಧಿ ಏನು ಹೇಳುತ್ತಾರೆ, ಅವರ ಹೇಳಿಕೆ ಹೆಣ್ಣು ಮಕ್ಕಳಿಗೆ ಗೌರವ ತರುವಂಥದ್ದೇ? ಎಂದು ವಾಗ್ದಾಳಿ ನಡೆಸಿದರು.

ವಿಧಾನಸಭೆಯ ಮಾಜಿ ಸ್ಪೀಕರ್ ರಮೇಶ್‍ಕುಮಾರ್‍ರವರು ವಿಧಾನಸಭೆಯಲ್ಲಿ ಏನು ಹೇಳಿದ್ದರು ಎಂಬುದನ್ನು ನೆನಪು ಮಾಡಿಕೊಳ್ಳಲಿ, ಮದ್ದೂರಿನಲ್ಲಿ ಮಾಜಿ ಶಾಸಕರ ಬಗ್ಗೆ ಆ ಪಕ್ಷದ ಶಾಸಕರು ನೀಡಿರುವ ಹೇಳಿಕೆಗೆ ಸನ್ಮಾನ ಮಾಡಬೇಕೇ?, ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪನವರ ಹೇಳಿಕೆಗೆ ಕಾಂಗ್ರೆಸ್ ಅಧ್ಯಕ್ಷರು ಕ್ಷಮೆ ಕೋರಿದ್ದಾರೆ. ಹೀಗೆ ಹಲವು ನಿದರ್ಶನವನ್ನು ಕಾಂಗ್ರೆಸ್‍ನವರು ಮಹಿಳೆಯ ಬಗ್ಗೆ ತೋರಿರುವ ಅಗೌರವದ ಬಗ್ಗೆ ನಿದರ್ಶನವಾಗಿ ನೀಡಬಹುದು ಎಂದರು.

ಈ ವಿಚಾರವನ್ನು ಮುಂದಿಟ್ಟುಕೊಂಡು ಜನರ ಮನಸ್ಸನ್ನು ಪರಿವರ್ತನೆ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್‍ನ ಮಹಿಳಾ ಪ್ರಾಧಧಿಕಾರಿಗಳಿಗೆ ಈ ವಿಚಾರದಲ್ಲಿ ನೋವುಂಟಾಗಿದೆ. ಅವರದೇ ಪಕ್ಷದವರು ನೀಡಿರುವ ಹೇಳಿಕೆಗಳ ಬಗ್ಗೆ ನೋವಾಗಲಿಲ್ಲವೇ ಎಂದು ಪ್ರಶ್ನಿಸಿದರು.ನಾನು ಕೂಡ ದಾರಿ ತಪ್ಪಿದಾಗ ನನ್ನ ಹೆಂಡತಿ ತಿದ್ದಿ ಸರಿದಾರಿಗೆ ತಂದಿರುವುದನ್ನು ವಿಧಾನಸಭೆಯಲ್ಲಿಯೇ ಪ್ರಸ್ತಾಪಿಸಿದ್ದೇನೆ. ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳಿಗೆ ನೋವು ಕೊಡಲು ಹೋಗಿಲ್ಲ ಎಂದರು.

ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗ ನೋಟೀಸ್ ಕೊಟ್ಟರೆ ಸೂಕ್ತ ಉತ್ತರ ಕೊಡುತ್ತೇನೆ, ನಾನು ತಪ್ಪು ಮಾಡಿಲ್ಲ ಎಂದ ಮೇಲೆ ಹೆದರುವ ಅವಶ್ಯಕತೆಯೇ ಇಲ್ಲ ಎಂದು ಹೇಳಿದರು. ರಾಜಕೀಯಕ್ಕೆ ಬರುವ 10 ವರ್ಷ ಮುನ್ನವೇ ಆಸ್ತಿ ಮಾಡಿದ್ದೆ. ಆ ಆಸ್ತಿಯಲ್ಲಿ 20 ಟನ್ ಕೊಬ್ಬರಿ, 50 ಟನ್ ಕಲ್ಲಂಗಡಿ ಹಣ್ಣು, 50 ಲಕ್ಷ ಬಾಳೆ ಬೆಳೆದಿದ್ದೇನೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

RELATED ARTICLES

Latest News