ನವದೆಹಲಿ,ಏ.15- ದೇಶದ ಇತಿಹಾಸದಲ್ಲೇ ಪ್ರಸ್ತುತ ನಡೆಯುತ್ತಿರುವ 18ನೇ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅತಿಹೆಚ್ಚು ನಗದು, ಮದ್ಯ, ಮಾದಕವಸ್ತುಗಳು, ಚಿನ್ನಾಭರಣಗಳು, ಉಚಿತ ಉಡುಗೊರೆಗಳು ಸೇರಿದಂತೆ ಈವರೆಗೂ ಬರೋಬ್ಬರಿ 4,658.16 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈವರೆಗೂ ನಡೆದಿರುವ 17 ಲೋಕಸಭಾ ಚುನಾವಣಾ ಇತಿಹಾಸದಲ್ಲೇ ಇಷ್ಟು ದೊಡ್ಡ ಪ್ರಮಾಣದ ನಗದು, ಮದ್ಯ, ಡ್ರಗ್ಸ್ ಪತ್ತೆಯಾಗಿರಲಿಲ್ಲ ಎಂದು ಭಾರತ ಚುನಾವಣಾ ಆಯೋಗ ತಿಳಿಸಿದೆ. ಕಳೆದ ಮಾ.1ರಿಂದ ಏ.13ರವರೆಗೆ ದೇಶದ ವಿವಿಧ ಭಾಗಗಳಲ್ಲಿ 395.39 ಕೋಟಿ ನಗದು, 489.31 ಕೋಟಿ ರೂ. ಮೌಲ್ಯದ ಮದ್ಯ, 2068.85 ಕೋಟಿ ಡ್ರಗ್ಸ್, 562.10 ಕೋಟಿ ಮೌಲ್ಯದ ಬೆಲೆಬಾಳುವ ವಸ್ತುಗಳು ಹಾಗೂ 1042.49 ಕೋಟಿ ಮೌಲ್ಯದ ಉಚಿತ ಉಡುಗೊರೆ ಸೇರಿದಂತೆ ಒಟ್ಟು 4,658.16 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದು ಚುನಾವಣಾ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ.
2019ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮೊದಲ ಹಂತದ ಮತದಾನ ನಡೆಯುವ ಮೊದಲೇ ಜಪ್ತಿಯಾದ ಹಣ, ವಸ್ತುಗಳ ಮೌಲ್ಯ ಶೇ.45ರಷ್ಟು ಏರಿಕೆಯಾಗಿದೆ. ಚುನಾವಣಾ ಆಯೋಗ ಅತ್ಯಂತ ಬಿಗಿಯಾದ ಕ್ರಮಗಳನ್ನು ತೆಗೆದುಕೊಂಡು ದೇಶದೆಲ್ಲೆಡೆ ಚೆಕ್ ಪೋಸ್ಟ್, ಸಿಸಿಕ್ಯಾಮೆರಾ ಅಳವಡಿಕೆ, ಡ್ರೋಣ್ ಕ್ಯಾಮೆರಾಗಳ ಬಳಕೆ ಹೊರತಾಗಿಯೂ ಕಣದಲ್ಲಿರುವ ಅಭ್ಯರ್ಥಿಗಳು ಮತದಾರರಿಗೆ ಈ ಬಾರಿ ವ್ಯಾಪಕ ಪ್ರಮಾಣದಲ್ಲಿ ಹಣ, ಬೆಲೆ ಬಾಳುವ ವಸ್ತುಗಳು, ಮದ್ಯ ಮತ್ತಿತರ ವಸ್ತುಗಳನ್ನು ಹಂಚಿಕೆ ಮಾಡಲು ಮುಂದಾಗಿರುವುದು ಜಪ್ತಿಯಾಗಿರುವ ಅಂಕಿಅಂಶಗಳಿಂದಲೇ ಗೊತ್ತಾಗುತ್ತದೆ.
ಆದಾಯ ತೆರಿಗೆ, ರಾಜ್ಯ ಪೊಲೀಸ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಎಸ್ಎಲ್ಬಿಸಿ, ಎಎಐ, ಬಿಸಿಎಎಸ್, ಜಾರಿ ನಿರ್ದೇಶನಾಲಯ, ಸಿಐಎಸ್ಎಫ್ ಸೇರಿದಂತೆ ಮತ್ತಿತರ ಸಂಸ್ಥೆಗಳು ನಗದು ಮತ್ತು ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿವೆ.
ರಾಜ್ಯ ಪೊಲೀಸರು, ಅಬಕಾರಿ ಇಲಾಖೆ, ಆರ್ಪಿಎಫ್ ಸಿಬ್ಬಂದಿಯವರು ಮದ್ಯ ಹಾಗೂ ರಾಜ್ಯ ಪೊಲೀಸರು, ಎನ್ಸಿಬಿ, ಐಸಿಜಿ, ಡಿಆರ್ಐ ಸಂಸ್ಥೆಯವರು ಮಾದಕದ್ರವ್ಯ, ಸಿಜಿಎಸ್ಟಿ, ಎಸ್ಜಿಎಸ್ಟಿ, ರಾಜ್ಯ ಸಾರಿಗೆ, ಸುಂಕ, ರಾಜ್ಯ ಪೊಲೀಸರು ಉಚಿತ ಉಡುಗೊರೆಗಳು, ಅಸ್ಸಾಂ ರೈಫೆಲ್ಸ್, ಬಿಎಸ್ಎಫ್, ಎಸ್ಎಸ್ಬಿ, ಐಟಿಬಿಟಿ, ಸಿಆರ್ಪಿಎಫ್, ಅರಣ್ಯ ಇಲಾಖೆ ಮತ್ತು ರಾಜ್ಯ ಪೊಲೀಸರು ಗಡಿ ಭಾಗದಲ್ಲಿ ತಪಾಸಣೆ ನಡೆಸಿದ್ದಾರೆ.
ರಾಜಸ್ಥಾನ ರಾಜ್ಯವೊಂದರಲ್ಲೇ ಈವರೆಗೂ 778, 52,65,100 ರೂ. ಮೌಲ್ಯದ ಅತಿ ಹೆಚ್ಚು ನಗದು, ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಾಗಿದೆ. ಪ್ರಧಾನಿ ನರೇಂದ್ರಮೋದಿ ಅವರ ತವರು ಜಿಲ್ಲೆ ಗುಜರಾತ್ನಲ್ಲಿ ಚುನಾವಣಾ ಆಯೋಗ 605,33,55,170 ನಗದು, ಮಾದಕವಸ್ತುಗಳೂ, ಮದ್ಯ, ಉಡುಗೊರೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ತಮಿಳುನಾಡು- 460,84,94,280 ರೂ. ಮಹಾರಾಷ್ಟ್ರ- 431,34,77,720 ರೂ. ಪಂಜಾಬ್-311,84,49,060 ರೂ. ಕರ್ನಾಟಕ 281,43,28,440 ಹಾಗೂ ನವದೆಹಲಿಯಲ್ಲಿ 236,06,96,950 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಒಟ್ಟು 36 ರಾಜ್ಯಗಳಲ್ಲಿ ಆಯೋಗವು 446,58,16,74,510 ರೂ. ಮೊತ್ತದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಅಮಾನತ್ತು: ಕೆಲವು ಕಡೆ ಕರ್ತವ್ಯ ನಿರ್ಲಕ್ಷ್ಯ ಆರೋಪದ ಹಿನ್ನಲೆಯಲ್ಲಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಸೂಚನೆ: ದಿನದಿಂದ ದಿನಕ್ಕೆ ದೇಶದೆಲ್ಲೆಡೆ ಮತದಾರರಿಗೆ ಹಂಚಲು ಹಣ, ಮದ್ಯ, ಮಾದಕವಸ್ತುಗಳು, ಬೆಲೆ ಬಾಳುವ ಉಡುಗೊರೆಗಳು ಸಿಕ್ಕಿಬೀಳುತ್ತಿರುವ ಹಿನ್ನಲೆಯಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಕೇಂದ್ರ ಚುನಾವಣಾ ಆಯೋಗ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ಕೊಟ್ಟಿದೆ.
ಆಯೋಗದ ಕೆಲವು ಬಿಗಿಯಾದ ಕ್ರಮದ ಹೊರತಾಗಿಯೂ ಇಷ್ಟು ದೊಡ್ಡ ಮೊತ್ತದ ನಗದು ಸೇರಿದಂತೆ ಇತರ ವಸ್ತುಗಳು ಸಿಕ್ಕಿರುವುದು ವಿಷಾದಕರ. ನಿಮ್ಮ ನಿಮ್ಮ ರಾಜ್ಯಗಳ ವ್ಯಾಪ್ತಿಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದಂತೆ ತುರ್ತು ಹಾಗೂ ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ಕುಮಾರ್ ಸೂಚಿಸಿದ್ದಾರೆ.
ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಬಿಗಿಗೊಳಿಸುವುದು, ಆಧುನಿಕ ತಂತ್ರಜ್ಞಾನವಿರುವ ಸಿಸಿಟಿವಿ, ಡ್ರೋಣ್ ಅಳವಡಿಕೆ, ಹೆಚ್ಚಿನ ಸಿಬ್ಬಂದಿ ನಿಯೋಜನೆ ಸೇರಿದಂತೆ ಹೀಗೆ ಹಲವು ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಯಾ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಲಾಗಿದೆ.
ಒಟ್ಟು ನಗದು – 395.39 ಕೋಟಿ ರೂ.
ಮದ್ಯ – 489.31 ಕೋಟಿ ರೂ.
ಮಾದಕವಸ್ತುಗಳು – 2,068.85 ಕೋಟಿ
ಬೆಲೆ ಬಾಳುವ ವಸ್ತುಗಳು – 562.10 ಕೋಟಿ
ಉಡುಗೊರೆ , ಮತ್ತಿತರವಸ್ತುಗಳು – 1,142.49 ಕೋಟಿ
ಒಟ್ಟು 4,658.16 ಕೋಟಿ ರೂ.
ಅತಿಹೆಚ್ಚು ಮೊತ್ತ ವಶಪಡಿಕೊಂಡಿರುವ ರಾಜ್ಯಗಳು
ರಾಜಸ್ಥಾನ -778, 52,65,100 ರೂ.
ಗುಜರಾತ್- 605,33,55,170 ರೂ.
ತಮಿಳುನಾಡು- 460,84,94,280 ರೂ.
ಮಹಾರಾಷ್ಟ್ರ- 431,34,77,720 ರೂ.
ಪಂಜಾಬ್-311,84,49,060 ರೂ.
ಕರ್ನಾಟಕ 281, 43,28,440
ನವದೆಹಲಿ- 236,06,96,950