Thursday, May 2, 2024
Homeರಾಜಕೀಯಆಸ್ತಿ ಗಳಿಕೆ ವಿಚಾರ : ಕುಮಾರಸ್ವಾಮಿ ಅವರಿಗೆ ಡಿಕೆಶಿ ಓಪನ್ ಚಾಲೆಂಜ್

ಆಸ್ತಿ ಗಳಿಕೆ ವಿಚಾರ : ಕುಮಾರಸ್ವಾಮಿ ಅವರಿಗೆ ಡಿಕೆಶಿ ಓಪನ್ ಚಾಲೆಂಜ್

ಬೆಳಗಾವಿ,ಏ.15- ಆಸ್ತಿ ಗಳಿಕೆ ವಿಚಾರವಾಗಿ ಹಿಟ್ ಅಂಡ್ ರನ್ ಹೇಳಿಕೆ ನೀಡುವುದರ ಬದಲಾಗಿ ದಾಖಲೆಗಳ ಸಹಿತ ವಿಧಾನಸಭೆಯಲ್ಲಿ ಬಹಿರಂಗ ಚರ್ಚೆಗೆ ಬರಲಿ, ನಾನು ಸಿದ್ದನಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ರವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಸವಾಲು ಹಾಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪದೇಪದೇ ನನ್ನ ಆಸ್ತಿಯ ಬಗ್ಗೆ ಚರ್ಚೆ ಮಾಡುತ್ತಾರೆ. ಬಿಜೆಪಿಯವರು ಹೇಳಿಕೆಗಳನ್ನು ನೀಡಿದ್ದಾರೆ, ಸಿಬಿಐ, ಇಡಿಯವರು ತನಿಖೆ ಮಾಡಿದ್ದಾರೆ. ಕುಮಾರಸ್ವಾಮಿಯವರು ಹಲವಾರು ಬಾರಿ ಆಸ್ತಿಯ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

ನನ್ನ ಆಸ್ತಿಯ ಬಗ್ಗೆಯೂ ದಾಖಲೆಗಳೊಂದಿಗೆ ಬರಲಿ, ನಾನೂ ಅವರು ಮತ್ತು ಅವರ ಕುಟುಂಬದ ಆಸ್ತಿಗಳ ಕುರಿತು ದಾಖಲೆಗಳೊಂದಿಗೆ ಬರುತ್ತೇನೆ. ಕುಮಾರಸ್ವಾಮಿ, ಅವರ ಅಣ್ಣ ಮತ್ತು ಸರ್ಕಾರಿ ಸೇವೆಯಲ್ಲಿದ್ದ ಮತ್ತೊಬ್ಬರು ಸೇರಿದಂತೆ ಎಲ್ಲರ ಬಳಿ ಎಷ್ಟು ಆಸ್ತಿ ಇತ್ತು, ಎಷ್ಟು ಹೆಚ್ಚಾಗಿದೆ ಎಂಬ ವಿವರಗಳು ಅಧಿಕೃತವಾಗಿ ದಾಖಲೆಯಾಗುವಂತೆ ವಿಧಾನಸಭೆಯಲ್ಲಿಯೇ ಚರ್ಚೆಯಾಗಲಿ.ಮಾದ್ಯಮಗಳ ಮುಂದೆ ಹೇಳಿಕೆ ನೀಡಿ ಓಡಿಹೋಗುವುದು ಬೇಡ ಎಂದು ಹೇಳಿದರು.

ಕುಮಾರಸ್ವಾಮಿಯವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿ, ಸ್ವಾಭಿಮಾನವನ್ನು ಕೆಣಕಿದ್ದಾರೆ. ಮಹಿಳೆಯರ ಘನತೆಗೆ ಕುಂದುಂಟು ಮಾಡಿದ್ದಾರೆ. ಅವರ ಕ್ಷಮಾಪಣೆ ವಿಷಾದದ ನಾಟಕವನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದರು.

ಪಂಚಖಾತ್ರಿಗಳ ಬಗ್ಗೆ ಟೀಕೆ ಮಾಡುವ ಕುಮಾರಸ್ವಾಮಿಯವರು ಅವರ ಮತ್ತು ಬಿಜೆಪಿಯಲ್ಲಿರುವ ಫಲಾನುಭವಿಗಳು ಯೋಜನೆಗಳನ್ನು ಬಳಸಿಕೊಳ್ಳದಂತೆ ಕರೆ ನೀಡಲಿ. ಕನಿಷ್ಟ 5 ಮಂದಿ ಅವರ ಪಕ್ಷದ ಕಾರ್ಯಕರ್ತರು ಯೋಜನೆಗಳನ್ನು ಬಿಟ್ಟುಬಿಡಲಿ. ಆನಂತರ ಅವರು ಟೀಕೆ ಮಾಡಲಿ.ಈ ಹಿಂದೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂದು ಕುಮಾರಸ್ವಾಮಿಯವರ ಜೊತೆ ಮೈತ್ರಿ ಮಾಡಿಕೊಂಡಿದ್ದು ನಿಜ. ಅವರ ಸರ್ಕಾರವನ್ನು ತೆಗೆದವರ ಜೊತೆಯಲ್ಲಿಯೇ ಈಗ ಗಳಸ್ಯಕಂಠಸ್ಯರಾಗಿದ್ದಾರೆ.

ಒಂದು ವರ್ಷದ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಇದೇ ಪ್ರಧಾನಿ ನರೇಂದ್ರಮೋದಿಯವರು ಗೃಹ ಸಚಿವ ಅಮಿತ್ ಷಾ ಅವರು ದೇವೇಗೌಡರು ಹಾಗೂ ಅವರ ಕುಟುಂಬದವರ ಬಗ್ಗೆ ಏನೆಲ್ಲಾ ಹೇಳಿಕೆ ನೀಡಿದ್ದರು. ಜೆಡಿಎಸ್ ನಾಯಕರು ಮೋದಿ ಬಗ್ಗೆ ಏನೆಲ್ಲಾ ವ್ಯಾಖ್ಯಾನ ಮಾಡಿದ್ದರು ಎಂಬುದನ್ನು ಜನ ಮರೆತಿಲ್ಲ ಎಂದು ಹೇಳಿದರು.

ಕೋವಿಡ್ ಸಮಯದಲ್ಲಿ ಬೆಳಗಾವಿಯ ಸಂಸದರು ಹಾಗೂ ಕೇಂದ್ರ ಸಚಿವರೂ ಆಗಿದ್ದ ಸುರೇಶ್ ಅಂಗಡಿಯವರು ದೆಹಲಿಯಲ್ಲಿ ಮೃತಪಟ್ಟಾಗ ಅವರ ಪಾರ್ಥೀವ ಶರೀರವನ್ನು ತವರೂರಿಗೆ ತಂದು ಅಂತ್ಯಸಂಸ್ಕಾರ ಮಾಡಿಸಲು ಬಿಜೆಪಿ ಸರ್ಕಾರದಿಂದಾಗಲಿಲ್ಲ. ಜೆಸಿಬಿಯಿಂದ ಶವವನ್ನು ತಳ್ಳಿ ಸಂಸ್ಕಾರ ಮಾಡಿದ್ದರು. ಕನಿಷ್ಠ ಮಾನವೀಯತೆಯನ್ನೂ ಪ್ರದರ್ಶನ ಮಾಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿದ್ದ ಬಿಜೆಪಿ ಈ ಮೊದಲು ಚುನಾವಣೆಗಳಲ್ಲಿ ನೀಡಿದ್ದ ಎಷ್ಟು ಭರವಸೆಗಳನ್ನು ಈಡೇರಿಸಿದೆ ಎಂದು ಜನರಿಗೆ ವಿವರಿಸಬೇಕು. ನಂತರ ಹೊಸ ಪ್ರಣಾಳಿಕೆಯನ್ನು ಬಿಡುಗಡೆ ಮಾಡಬೇಕು. 15 ಲಕ್ಷ ರೂ. ಜನರ ಖಾತೆಗೆ ಹಾಕಿದ್ದಾರೆಯೇ?, ರೈತರ ಆದಾಯ ದ್ವಿಗುಣವಾಗಿದೆಯೇ?, ಉದ್ಯೋಗ ಸೃಷ್ಟಿಯಾಗಿದೆಯೇ?, ಕೋವಿಡ್ ಸಮಯದಲ್ಲಿ 20 ಲಕ್ಷ ಕೋಟಿ ಪ್ಯಾಕೇಜ್ ಅನ್ನು ಯಾರಿಗೆ ಕೊಟ್ಟಿದ್ದಾರೆ? ಎಂಬ ವಿಚಾರಗಳ ಬಗ್ಗೆ ಮಾಹಿತಿ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ರಾಜ್ಯದಲ್ಲಿನ 14 ಸಂಸದರಿಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡಿಲ್ಲ. ಗೆದ್ದೇ ಗೆಲ್ಲುವ ವಿಶ್ವಾಸವಿದ್ದರೆ ಅಥವಾ ಸಂಸದರು ಒಳ್ಳೆಯ ಕೆಲಸ ಮಾಡಿದ್ದಾರೆಯೇ ಎಂಬ ನಂಬಿಕೆ ಇದ್ದರೆ ಏಕೆ ಟಿಕೆಟ್ ನಿರಾಕರಿಸಲಾಯಿತು ಎಂದು ಜನರಿಗೆ ತಿಳಿಸಲಿ. ಹಾಲಿ ಸಂಸದರು ಅಸಮರ್ಥರು. ಅವರನ್ನು ಕಣಕ್ಕಿಳಿಸಿದರೆ ಗೆಲ್ಲುವುದಿಲ್ಲ ಎಂಬ ಆತಂಕದಲ್ಲಿ ಬೇರೆಯವರಿಗೆ ಟಿಕೆಟ್ ನೀಡಲಾಗಿದೆಯಲ್ಲವೇ? ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.

RELATED ARTICLES

Latest News