ಬೆಂಗಳೂರು, ನ.7- ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಮತ್ತು ಜನರ ಸಮಸ್ಯೆ ಆಲಿಸಲು ಜಿಬಿಎ ಸಚಿವ ಕೃಷ್ಣಬೈರೇಗೌಡ ನೇತೃತ್ವದಲ್ಲಿ ನಡೆದ ವಾರ್ಡ್ ಒನ್ ಅಭಿಯಾನದಲ್ಲಿ ಶಾಸಕ ಬೈರತಿ ಬಸವರಾಜು ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸ್ವಾಮಿ ಅವರ ನಡುವೆ ಮಾತಿನಚಕಮಕಿ ನಡೆದಿದ್ದು, ಕಾವೇರಿದ ವಾತಾವರಣ ನಿಮಾಣವಾಗಿತ್ತು.
ಕೆ.ಆರ್.ಪುರಂನ ಬಯ್ಯಪ್ಪನಹಳ್ಳಿ, ಟಿನ್ ಫ್ಯಾಕ್ಟರಿ ಹಾಗೂ ಇತರ ಕಡೆಗಳಲ್ಲಿ ಸಚಿವ ಕೃಷ್ಣ ಬೈರೇಗೌಡ ಪರಿಶೀಲನೆ ನಡೆಸಿ ಅಭಿವೃದ್ಧಿ ಯೋಜನೆಗಳ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರಾದ ಬೈರತಿ ಬಸವರಾಜು ಹಾಜರಿದ್ದರು.
ಸ್ಥಳೀಯ ಬಿಜೆಪಿ ಕಾರ್ಯಕರ್ತರೊಬ್ಬರು, ಜಿಬಿಎ ಅಧಿಕಾರಿಗಳು ಯಾವುದಕ್ಕೂ ಸ್ಪಂದಿಸುತ್ತಿಲ್ಲ.
ಎಲ್ಲದಕ್ಕೂ ಶಾಸಕರನ್ನೇ ಕರೆದು ಕೆಲಸ ಮಾಡಿಸಿಕೊಳ್ಳಬೇಕಿದೆ ಎಂದು ದೂರು ಹೇಳಲಾರಂಭಿಸಿದರು. ಪದೇ ಪದೇ ಈ ರೀತಿಯ ಮಾತುಗಳು ಕೇಳಿ ಬಂದಾದ ಸಿಟ್ಟಾದ ಸಚಿವ ಕೃಷ್ಣ ಬೈರೇಗೌಡ, ನಮಗೆಲ್ಲಾ ಗೊತ್ತಿದೆ. ಇಲ್ಲಿ ರಾಜಕೀಯ ಮಾಡಲು ಬರಬೇಡಿ, ನಡಿಯಿರಿ ಎಂದು ಗದರಿದರು. ಸಚಿವರ ಜೊತೆ ಬಿಜೆಪಿ ಕಾರ್ಯಕರ್ತರು ಪ್ರತಿವಾದಕ್ಕಿಳಿದಾಗ ಮಧ್ಯ ಪ್ರವೇಶಿಸಿದ ಮಾಜಿ ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಶಾಸಕರಿಗೆ ಬಕೆಟ್ ಹಿಡಿಯಲು ಬರಬೇಡ ಎಂದು ಏರಿದಧ್ವನಿಯಲ್ಲಿ ಮಾತನಾಡುತ್ತಾ ಕಾರ್ಯಕರ್ತನಿಗೆ ಅಡ್ಡ ಹೋದರು.
ತಕ್ಷಣವೇ ಪೊಲೀಸ್ ಅಧಿಕಾರಿಗಳು ಮಧ್ಯ ಪ್ರವೇಶಿಸಿ ನಾರಾಯಣಸ್ವಾಮಿಯವರನ್ನು ಸಮಾಧಾನಪಡಿಸಲೆತ್ನಿಸಿದರು. ಶಾಸಕ ಬೈರತಿ ಬಸವರಾಜು, ಸ್ಥಳೀಯರು ಸಮಸ್ಯೆಗಳನ್ನು ಹೇಳಬಾರದೇ, ಇದೇನು ದೌರ್ಜನ್ಯ, ದಬ್ಬಾಳಿಕೆ? ಎಂದು ತಾವು ಕೂಡ ಏರಿದ ಧ್ವನಿಯಲ್ಲಿ ಕಾರ್ಯಕರ್ತನ ಸಮರ್ಥನೆಗೆ ಇಳಿದರು.
ಈ ಸಂದರ್ಭದಲ್ಲಿ ಬಸವರಾಜು ಮತ್ತು ನಾರಾಯಣಸ್ವಾಮಿ ಅವರ ನಡುವೆ ಏಕವಚನದಲ್ಲಿ ವಾಗ್ದಾಳಿ ನಡೆದಿದ್ದಲ್ಲದೆ, ಅವಾಚ್ಯ ಶಬ್ದಗಳ ಬಳಕೆಯೂ ನಡೆಯಿತು. ಸರ್ಕಾರ ತಮದಿದೆ ಎಂದು ದೌರ್ಜನ್ಯ ನಡೆಸುತ್ತೀರಾ. ಸಮಸ್ಯೆ ಹೇಳುವವರನ್ನು ಹೊಡೆಯಲು ಹೋದರೆ ಹೇಗೆ? ನೀವೇನು ದಾದಾನಾ ಎಂದು ಖಾರವಾಗಿ ಪ್ರಶ್ನಿಸಿದರು.ನಾರಾಯಣಸ್ವಾಮಿಯವರು, ನಾನು ಯಾರನ್ನೂ ಹೊಡೆಯಲು ಹೋಗಿರಲಿಲ್ಲ. ನನ್ನ ಹತ್ತಿರ ಇದೆಲ್ಲಾ ಬೇಡ, ನೀನು ಏನು ಅಂತಾ ನನಗೆ ಗೊತ್ತು ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ನಿನ್ನನ್ನು ಎಂಎಲ್ಸಿ ಮಾಡಿದ್ದು ನಾನು ಎಂದು ಬೈರತಿ ಬಸವರಾಜು ಏರಿದ ಧ್ವನಿಯಲ್ಲಿ ಹೇಳಿದರೆ, ನಿನ್ನನ್ನು ಎಂಎಲ್ಎ ಮಾಡಿದ್ದು ನಾವು ಎಂದು ನಾರಾಯಣಸ್ವಾಮಿ ತಿರುಗೇಟು ನೀಡಿದರು.
ಯಾರೋ ಹುಡುಗರು ಸಮಸ್ಯೆ ಹೇಳಿಕೊಂಡರೆ, ಹೊಡೀಲಿಕ್ಕೆ ಹೋಗುತ್ತಿದ್ದಾರೆ. ಹಾಗಿದ್ದ ಮೇಲೆ ನಮನ್ನು ಏಕೆ ಕರೆಯುತ್ತಾರೆ, ಅವರೇ ಏನು ಬೇಕಾದರೂ ಮಾಡಿಕೊಂಡು ಹೋಗಲಿ ಎಂದು ಬಸವರಾಜು ಕಿಡಿಕಾರಿದರು. ಇದು ಕೆಲ ಕಾಲ ಮಾತಿನ ಚಕಮಕಿಗೆ ಕಾರಣವಾಗಿ ಕಾವೇರಿದ ವಾತಾವರಣ ನಿರ್ಮಾಣವಾಯಿತು. ಸಚಿವ ಕೃಷ್ಣ ಬೈರೇಗೌಡ, ಇಬ್ಬರನ್ನು ಸಮಾಧಾನ ಪಡಿಸಲು ಯತ್ನಿಸಿದರು.
ಬಸವರಾಜು ವಾಗ್ದಾಳಿಗಳ ಕುರಿತು ಪ್ರತಿಕ್ರಿಯಿಸಿದ ಸಚಿವರು, ಈಗ ಆ ಮಾತುಗಳೆಲ್ಲಾ ಬೇಡ. ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡೋಣ. ರಸ್ತೆ ಅಗಲೀಕರಣದ ಬಗ್ಗೆ ಹೇಳಿ. ರಾಜಕಾರಣ ಬೇಡ ಎಂದು ಬಗೆ ಬಗೆಯಾಗಿ ಕೇಳಿಕೊಂಡರು.
ಶಾಸಕರಿಗೆ ಹೇಳಿಯೇ ನಾವಿಲ್ಲಿ ಕೆಲಸ ಮಾಡಿಸಿಕೊಳ್ಳಬೇಕು ಎಂದು ಜನ ಹೇಳುತ್ತಿದ್ದಾರೆ, ಅದರಲ್ಲಿ ತಪ್ಪೇನು ? ಅದಕ್ಕೆ ಸಮಸ್ಯೆ ಹೇಳುವವರ ಮೇಲೆ ದಬ್ಬಾಳಿಕೆ ಮಾಡುವುದಾ ಎಂದು ಬಸವರಾಜ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡು ವಾಗಲೂ ಬಸವರಾಜು ಅವರು, ಗಲಾಟೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
