Homeರಾಜ್ಯಕೆಪಿಎಸ್‌‍ಸಿಯ ಎಲ್ಲಾ ಪರೀಕ್ಷೆಗಳನ್ನು ಮುಂದೂಡುವಂತೆ ಎಚ್‌ಡಿಕೆ ಆಗ್ರಹ

ಕೆಪಿಎಸ್‌‍ಸಿಯ ಎಲ್ಲಾ ಪರೀಕ್ಷೆಗಳನ್ನು ಮುಂದೂಡುವಂತೆ ಎಚ್‌ಡಿಕೆ ಆಗ್ರಹ

ಬೆಂಗಳೂರು,ನ.7- ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನಡೆಸುತ್ತಿರುವ ಎಲ್ಲಾ ನೇಮಕಾತಿ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ನವೆಂಬರ್‌ 15ರಂದು ಕೆಪಿಎಸ್ಸಿ ವತಿಯಿಂದ ನಡೆಯಲಿರುವ 319 ಗೆಜೆಟೆಡ್‌ ಪೊಬೇಷನರಿ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಮುಂದೂಡುವಂತೆ ಒತ್ತಾಯಿಸಿದರು.

ಕೆಪಿಎಸ್ಸಿಯಲ್ಲಿ ಕಳೆದ 3-4 ವರ್ಷಗಳಿಂದ ನಡೆದಿರುವ ಪರೀಕ್ಷೆ, ನೇಮಕಾತಿ ಅಕ್ರಮಗಳ ಬಗ್ಗೆ ಇಡಿ, ಸಿಐಡಿ ತನಿಖೆಗಳು ನಡೆಯುತ್ತಿವೆ ಹಾಗೂ ಹೈಕೋರ್ಟ್‌ ಸೂಚನೆಯಂತೆ ಎಸ್‌‍ಐಟಿ ಕೂಡ ತನಿಖೆ ನಡೆಸುತ್ತಿದ್ದು, ಹಣದ ವಹಿವಾಟು ನಡೆದಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಆ ಸಂಸ್ಥೆ ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ಪರೀಕ್ಷೆ ನಡೆಸಿ ನೇಮಕಾತಿ ಮಾಡುತ್ತದೆ ಎಂಬ ನಂಬಿಕೆ ನನಗಿಲ್ಲ. ಅನೇಕ ಉದ್ಯೋಗಾಂಕ್ಷಿಗಳು ಕೂಡ ಇದೇ ದೂರನ್ನು ಮಾಡುತ್ತಿದ್ದಾರೆ ಎಂದರು.

ಸಂಸ್ಥೆಯನ್ನು ಸುಧಾರಿಸಲು ಮಾಜಿ ಮಂತ್ರಿಗಳಾದ ಆರ್‌.ವಿ.ದೇಶಪಾಂಡೆ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿಯು ಇನ್ನೂ ವರದಿ ನೀಡಿಲ್ಲ. ಫ್ರೀಡಂಪಾರ್ಕ್‌ನಲ್ಲಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಇಂತಹ ಗೊಂದಲದ ವಾತಾವರಣದಲ್ಲಿ ಪರೀಕ್ಷೆ ನಡೆಸುವುದರಿಂದ ಪ್ರಾಮಾಣಿಕ, ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ. ಹೀಗಾಗಿ ಸಂಸ್ಥೆಯನ್ನು ಸಂಪೂರ್ಣವಾಗಿ ಶುದ್ಧೀಕರಿಸಿ, ಅಲ್ಲಿ ಪಾರದರ್ಶಕತೆ ತಂದ ನಂತರವೇ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.

ಬರಗಾಲದಿಂದ ರೈತರು ಕಂಗಾಲಾಗಿದ್ದರೂ, ಬೆಳೆ ವಿಮೆ ವಿಚಾರದಲ್ಲಿ ರೈತರಿಗೆ ದೊಡ್ಡ ಮೋಸವಾಗುತ್ತಿದೆ. ರೈತರು ವಂತಿಗೆ ಕಟ್ಟಿದ್ದರೂ ವಿಮಾ ಕಂಪನಿಗಳು ಅವರಿಗೆ ವಂಚಿಸುತ್ತಿವೆ ಹಾಗೂ ರಾಜ್ಯ ಸರ್ಕಾರವು ತನ್ನ ಪಾಲಿನ ವಂತಿಗೆ ಹಣವನ್ನು ಪಾವತಿಸದೆ ಸಂಪೂರ್ಣ ನಿಷ್ಕ್ರಿಯವಾಗಿದೆ. ಬರೀ ಘೋಷಣೆಗಳನ್ನು ಮಾಡುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.

ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದ್ದು, ಬಸ್‌‍ ದರ ಏರಿಕೆ ಖಂಡಿಸಿ ಜನರ ಆಕ್ರೋಶ ಭುಗಿಲೆದ್ದಾಗ ಗಮನ ಬೇರೆಡೆ ಸೆಳೆಯಲು ಮುಖ್ಯಮಂತ್ರಿಗಳು ರೈತರಿಗೆ ಹೆಚ್ಚುವರಿಯಾಗಿ 2,500 ಪರಿಹಾರ ಘೋಷಿಸಿದರು. ಸಚಿವ ಸಂಪುಟ ಸಭೆಯಲ್ಲಿ 26,000 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ, ಆದರೆ ಈಗಾಗಲೇ ಕಾಮಗಾರಿ ಮುಗಿಸಿರುವ ಗುತ್ತಿಗೆದಾರರಿಗೆ 39,000 ಕೋಟಿ ಬಾಕಿ ಉಳಿಸಿಕೊಳ್ಳಲಾಗಿದೆ. ಹಳೆಯ ಬಾಕಿ ನೀಡದೆ ಹೊಸ ಯೋಜನೆಗಳನ್ನು ಘೋಷಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಅವರು ಹೇಳಿದರು.

ರಾಜ್ಯ ಸರ್ಕಾರವು ಪ್ಯಾಕೇಜ್‌ ಸಿಸ್ಟಮ್‌ ಜಾರಿಗೆ ತಂದು ಸ್ಥಳೀಯ ಗುತ್ತಿಗೆದಾರರನ್ನು ಕಡೆಗಣಿಸಿ ಆಂಧ್ರಪ್ರದೇಶ, ಉತ್ತರಪ್ರದೇಶದವರಿಗೆ ಗುತ್ತಿಗೆ ನೀಡುತ್ತಿದೆ. ಇದರಿಂದ ರಾಜ್ಯದ ಗುತ್ತಿಗೆದಾರರ ಖಾತೆಗಳು ಎನ್‌ ಪಿಎ ಆಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ರಾಮನಗರಕ್ಕೆ ರಾಜೀವ್‌ ಗಾಂಧಿ ವಿವಿ ಸ್ಥಳಾಂತರ ಹಾಗೂ ಕನಕಪುರ ಸೇರಿದಂತೆ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ನಿರ್ಧಾರ ಕೈಗೊಂಡಿದ್ದು ತಾವು ಮುಖ್ಯಮಂತ್ರಿಯಾಗಿದ್ದಾಗ ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿಗೆ ಸನಾನ:
ದ್ವೇಷದ ರಾಜಕಾರಣ, ಜಾತಿ ರಾಜಕಾರಣ ಮತ್ತು ಎಸ್‌‍ಐಟಿ ಮುಂತಾದವುಗಳ ದುರ್ಬಳಕೆಯ ಮೂಲಕ ಸೇಡಿನ ರಾಜಕಾರಣ ಮಾಡುವುದನ್ನು ಬಿಟ್ಟು, ರಾಜ್ಯದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಸಲಹೆ ನೀಡಿದರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಹಳೆಯ ಅಕ್ರಮ ಚಾಳಿ ಬಿಟ್ಟು ರಾಜ್ಯದ ಅಭಿವೃದ್ದಿಗೆ ಪೂರಕವಾಗಿ ಪಾರದರ್ಶಕ ಕೆಲಸ ಮಾಡಿದರೆ ಸನಾನಿಸುವುದಾಗಿ ಹೇಳಿದ ಕುಮಾರಸ್ವಾಮಿ, ಕಾನೂನು ಬಾಹಿರ ಅಕ್ರಮಗಳಿಗೆ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್‌‍ ಸೇರ್ಪಡೆ:
ಕುಣಿಗಲ್‌ ವಿಧಾನಸಭಾ ಕ್ಷೇತ್ರದ 20ಕ್ಕೂ ಹೆಚ್ಚು ಪ್ರಮುಖ ಕಾಂಗ್ರೆಸ್‌‍ ಮುಖಂಡರು ಹೆಚ್‌.ಡಿ. ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಡಿ ನಾಗರಾಜಯ್ಯ ಅವರ ಸಮುಖದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಕೆಂಪಿರೇಗೌಡ, ಶಿವಶಂಕರ, ನಾರಾಯಣಪ್ಪ, ಕೆಂಪಹನಮಯ್ಯ, ಸುರೇಶ್‌, ಜೆಸಿಬಿ ಗಿರೀಶ್‌, ಲಕ್ಷ್ಮಣ, ರೇಣುಕಯ್ಯ , ನಂಜೇಶ್‌, ರಾಮಕೃಷ್ಣಪ್ಪ, ವಸಂತರಾಜು, ಸುರೇಶ್‌, ಮನು, ಶಿವಕುಮಾರ್‌, ನಾಗಣ್ಣ, ಗಂಗಣ್ಣ, ರಮೇಶ್‌, ಶಿವಣ್ಣ ಮುಂತಾದವರು ಕಾಂಗ್ರೆಸ್‌‍ ತೊರೆದು ಜೆಡಿಎಸ್‌‍ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಕುಣಿಗಲ್‌ ಕ್ಷೇತ್ರದ ಹಿರಿಯ ಮುಖಂಡರಾದ ರವಿ, ಜಗದೀಶ್‌ ಹಾಗೂ ಗ್ರೇಟರ್‌ ಬೆಂಗಳೂರು ಜೆಡಿಎಸ್‌‍ ಅಧ್ಯಕ್ಷರಾದ ಹೆಚ್‌.ಎಂ. ರಮೇಶ್‌ ಗೌಡ ಮುಂತಾದವರು ಉಪಸ್ಥಿತರಿದ್ದರು.

RELATED ARTICLES

Latest News