ಬೆಂಗಳೂರು, ನ.7- ಕಾರ್ಯಕರ್ತರಿಂದ ಹಿಡಿದು ಉನ್ನತ ಮಟ್ಟದ ನಾಯಕರವರೆಗೂ ಎಲ್ಲರೂ ಪಕ್ಷಕ್ಕೆ ನಿಷ್ಠರಾಗಿರಬೇಕು, ಪಕ್ಷಕ್ಕಾಗಿ ಕೆಲಸ ಮಾಡಬೇಕು ಎಂಬ ಸಂದೇಶವನ್ನು ಹೈಕಮಾಂಡ್ ನೀಡಿದೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ನಿಂದ ಒಂದು ಕಾಲು ಹೊರಗಿಟ್ಟವರಿಗೆ ಖಡಕ್ ಸಂದೇಶ ನೀಡಿದ್ದಾರೆ.
ನಿನ್ನೆ ದೆಹಲಿಯಲ್ಲಿ ನಡೆದ ದೀಪಾವಳಿ ಸಮಿಲನ ಕಾರ್ಯಕ್ರಮದಲ್ಲಿ ಲೋ ಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಲ್ಲಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರ ಜೊತೆಗೆ ಸಮಾಲೋಚನೆ ನಡೆಸಿದರು.
ಈ ವೇಳೆ ಎಸ್ಐಆರ್ ಕುರಿತ ಹೋರಾಟವನ್ನು ಮುಂದೆ ತೆಗೆದುಕೊಂಡು ಹೋಗುವ ಬಗ್ಗೆ ಚರ್ಚೆಗಳಾಗಿವೆ. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆಯಲ್ಲಿ ಡಿ.ಕೆ.ಶಿವಕುಮಾರ್ ಎಲ್ಲಾ ಹಂತದ ನಾಯಕರು, ಕಾರ್ಯಕರ್ತರು ಪಕ್ಷಕ್ಕಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಬಳಿಕ ರಾಜಕೀಯವಾಗಿ ಮಹತ್ವದ ಬೆಳವಣಿಗೆಗಳಾಗಿವೆ. ಸಿದ್ದರಾಮಯ್ಯ ಅವರ ಬೆಂಬಲಿಗರು ಎಂದು ಹೇಳಲಾದ ಕೆ.ಎನ್.ರಾಜಣ್ಣ ಸೇರಿದಂತೆ ಹಲವಾರು ಮಂದಿ ಬೇರೆ ಪಕ್ಷಗಳ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ. ರಾಜ್ಯ ಗುಪ್ತದಳ ಈ ಬಗ್ಗೆ ಮುಖ್ಯಮಂತ್ರಿಯವರಿಗೆ ವರದಿ ನೀಡಿದ್ದು ಸುಮಾರು 50ಕ್ಕೂ ಹೆಚ್ಚು ಶಾಸಕರು ಪಕ್ಷಾಂತರಕ್ಕೆ ಸಿದ್ಧವಾಗಿದ್ದಾರೆ ಎಂಬ ಮಾಹಿತಿ ನೀಡಿದೆ. ಕೆಲ ಪ್ರಮುಖ ನಾಯಕರು ಕೂಡ ಕಾಂಗ್ರೆಸ್ ತೊರೆಯಲು ವೇದಿಕೆ ಸಿದ್ಧ ಮಾಡಿಕೊಳ್ಳುತ್ತಿದ್ದಾರೆ ಎಂದು ಮುನ್ಸೂಚನೆ ನೀಡಿದೆ.
ಹಿಂದೆ 2023ರ ವಿಧಾನಸಭೆ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ.ಶಿವಕುಮಾರ್, ಪಕ್ಷ ಬಲವರ್ಧನೆಗಾಗಿ ಬಿಜೆಪಿ ಸೇರಿದಂತೆ ಅನ್ಯ ಪಕ್ಷಗಳಲ್ಲಿದ್ದ ಪ್ರಬಲ ಅಭ್ಯರ್ಥಿಗಳನ್ನು ಕಾಂಗ್ರೆಸ್ ಗೆ ಸೆಳೆದಿದ್ದರು. ಈಗ ಜೆಡಿಎಸ್ ನಾಯಕತ್ವ, ಬಿಜೆಪಿ ಜೊತೆ ಸೇರಿ ಅಂತಹದ್ದೇ ಕಾರ್ಯಾಚರಣೆಗೆ ಇಳಿದಿದೆ.ಇದರ ಮುನ್ಸೂಚನೆ ಅರಿತ ಮುಖ್ಯಮಂತ್ರಿಯವರು ವಲಸೆಗೆ ಸಿದ್ಧವಾಗಿರುವ ಶಾಸಕರು ಹಾಗೂ ಪ್ರಮುಖ ನಾಯಕರಿಗೆ ಯಾವುದೇ ಅಧಿಕಾರ ನೀಡಬಾರದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಶಾಸಕರ ಪೂರ್ವಾಪರ ಹಾಗೂ ಅವರು ಯಾರ ಸಂಪರ್ಕದಲ್ಲಿದ್ದಾರೆ, ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಅವರಿಗಿರುವ ಸಂಬಂಧ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಒಂದು ವೇಳೆ ಪಕ್ಷ ತೊರೆಯುವುದು ಖಚಿತ ಎಂದಾದರೆ ಅವರನ್ನು ಸರ್ಕಾರ ಹಾಗೂ ಪಕ್ಷದ ಎಲ್ಲಾ ಹುದ್ದೆಗಳಿಂದಲೂ ದೂರ ಇಡಲು ತಂತ್ರಗಾರಿಕೆ ರೂಪಿಸಲಾಗುತ್ತಿದೆ.
ಎರಡನೇ ಅವಧಿಗೆ ನಿಗಮ-ಮಂಡಲಿಗಳ ನೇಮಕಾತಿ ನನೆಗುದಿಗೆ ಬೀಳಲು ಇದೂ ಕೂಡ ಕಾರಣ ಎಂದು ಹೇಳಲಾಗಿದೆ. ನಾಯಕರ ಹಿಂಬಾಲಕರ ಬದಲಿಗೆ, ಪಕ್ಷ ನಿಷ್ಠರನ್ನು ಮಾತ್ರ ಪರಿಗಣಿಸಿ, ನಿಗಮ ಮಂಡಲಿಗಳು ಹಾಗೂ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಲು ಚರ್ಚೆಗಳಾಗಿವೆ.
ಜಿಲ್ಲೆ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನೇಮಕಾತಿಗಾಗಿ ನಡೆಯುತ್ತಿರುವ ಸಂಘಟನ್ ಸೃಜನ್ ಅಭಿಯಾನ-2ರಲ್ಲಿ ಪ್ರಮುಖ ನಾಯಕರು ಮತ್ತು ಕಾರ್ಯಕರ್ತರ ಪಕ್ಷ ನಿಷ್ಠೆಯನ್ನು ಒರೆಗೆ ಹಚ್ಚಲಾಗುತ್ತಿದೆ ಎನ್ನಲಾಗಿದೆ.
ಪಕ್ಷದಿಂದ ವಲಸೆ ಹೊರಟಿರುವ ಮುಖಂಡರ ಬಗ್ಗೆ ನಿನ್ನೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಹೈಕಮಾಂಡ್ ನಾಯಕರ ಗಮನಕ್ಕೆ ತಂದಿದ್ದಾರೆ. ಅಂತಹವರನ್ನು ಈಗಿನಿಂದಲೇ ದೂರವಿಟ್ಟು ಪರ್ಯಾಯ ನಾಯಕತ್ವ ಬೆಳೆಸುವಂತೆ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ. ಅದಕ್ಕನುಗುಣವಾಗಿ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿ, ಪರೋಕ್ಷ ಸಂದೇಶ ರವಾನಿಸಿದ್ದಾರೆ. ಎಲ್ಲರೂ ಪಕ್ಷಕ್ಕಾಗಿ ಕೆಲಸ ಮಾಡಬೇಕು, ಇಲ್ಲವಾದರೆ ಕಾಂಗ್ರೆಸ್ನಲ್ಲಿ ಸ್ಥಳವಿಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ.ಈ ಮೂಲಕ ಪಕ್ಷದಿಂದ ಒಂದು ಕಾಲ ಹೊರಗಿಟ್ಟವರಿಗೆ ಕಟಕ್ ಸಂದೇಶ ರವಾನೆಯಾಗಿದೆ.
