Homeರಾಜ್ಯಟಿವಿ ಸೌಂಡ್‌ ಜೋರಾಗಿಟ್ಟು ಕೊಲೆ ಮಾಡ್ತಿದ್ದ ನರರಾಕ್ಷಸ ಇಂದುಶೇಖರ್‌

ಟಿವಿ ಸೌಂಡ್‌ ಜೋರಾಗಿಟ್ಟು ಕೊಲೆ ಮಾಡ್ತಿದ್ದ ನರರಾಕ್ಷಸ ಇಂದುಶೇಖರ್‌

ಬೆಂಗಳೂರು,ನ.7-ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡುವಾಗಲೆಲ್ಲಾ ಟಿವಿ ಸೌಂಡ್‌ ಜೋರಾಗಿ ಇಟ್ಟು ಹೊರಗೆ ಯಾವುದೇ ಶಬ್ದ ಕೇಳದಂತೆ ಬರ್ಬರವಾಗಿ ಕೊಲೆ ಮಾಡಿರುವ ಅಚ್ಚರಿ ಅಂಶ ಬೆಳಕಿಗೆ ಬಂದಿದೆ.ಆರೋಪಿ ಇಂದುಶೇಖರ್‌ ತನ್ನ ಸಂಬಂಧಿಕರನ್ನು ಒಬ್ಬೊಬ್ಬರನ್ನೇ ರಾಜಾಜಿನಗರದ ಬಾಡಿಗೆ ಮನೆಗೆ ಬಾಡೂಟಕ್ಕೆಂದು ಕರೆಸಿಕೊಂಡು ಆಹಾರದಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿ ನೀಡುತ್ತಿದ್ದನು.

ಸಂಬಂಧಿಕರು ಊಟ ಮಾಡಿದ ಬಳಿಕ ನಿದ್ರೆಗೆ ಜಾರಿದಾಗ ಈತ ತನ್ನ ಕೃತ್ಯ ಆರಂಭಿಸುತ್ತಿದ್ದನು. ಒಂದು ವೇಳೆ ಎಚ್ಚರಗೊಂಡು ಕಿರುಚಾಡಿದರೆ ಅಕ್ಕಪಕ್ಕದ ಮನೆಯವರಿಗೆ ಕೇಳಿಸಬಾರದೆಂದು ಟಿವಿ ಸೌಂಡನ್ನು ಜೋರಾಗಿ ಇಡುತ್ತಿದ್ದನು. ಈ ಎಲ್ಲಾ ಕೃತ್ಯಗಳಿಗೆ ಮೊದಲೇ ಮಾಡಿಕೊಂಡಿದ್ದ ವ್ಯವಸ್ಥಿತ ಸಂಚಿನಂತೆ ನಿದ್ರೆ ಮಾತ್ರೆಗಳು, ಪ್ಲಾಸ್ಟಿಕ್‌ ಚೀಲಗಳು ಹಾಗೂ ಹಗ್ಗಗಳನ್ನು ಖರೀದಿಸಿಟ್ಟುಕೊಂಡಿದ್ದನು.

ಅ.14 ರಂದು ಮೊದಲು ಪತ್ನಿಯನ್ನು ಕೊಲೆ ಮಾಡಲು ಸ್ಕೆಚ್‌ ಹಾಕಿದ್ದಾನೆ.ಅದರಂತೆ ಅ.16 ರಂದು ಮಾಂಸಹಾರದ ಅಡುಗೆ ಮಾಡಿ ಆರೋಪಿ ಇಂದುಶೇಖರ್‌ ಮದ್ಯ ಸೇವಿಸಿದ್ದ. ಪತ್ನಿ ಸುನಿತಾಗೆ ಮದ್ಯದಲ್ಲಿ ಮತ್ತೇರಿಸುವ ಮಾತ್ರೆ ಬೆರೆಸಿ ನೀಡಿದ್ದನು.ಅದನ್ನು ಸೇವಿಸಿದ ಸುನಿತಾ ಕೆಲವೇ ನಿಮಿಷಗಳಲ್ಲಿ ಪ್ರಜ್ಞೆ ಕಳೆದುಕೊಂಡಿದ್ದಾರೆ. ಅದೇ ಸಮಯಕ್ಕಾಗಿ ಕಾದಿದ್ದ ಕ್ರೂರಿ ರುಬ್ಬುವ ಕಲ್ಲಿನಿಂದ ಸುನಿತಾ ತಲೆಗೆ ಬಲವಾಗಿ ಹೊಡೆದು ಹತ್ಯೆ ಮಾಡಿದ್ದಾನೆ.

ಅದನ್ನು ಕಣ್ಣಾರೆ ಕಂಡ ಮಗಳು ಅಘಾತಕ್ಕೊಳಗಾಗಿದ್ದಳು. ಆದರೆ ತಂದೆ ಮಗಳನ್ನು ಮನವೊಲಿಸಿ ತನ್ನ ಕೃತ್ಯಕ್ಕೆ ಸಹಕರಿಸುವಂತೆ ಆಕೆಯನ್ನು ಪರಿವರ್ತಿಸಿದ್ದ. ತಂದೆ ಹೇಳಿದಂತೆ ಆಕೆ ಕೇಳುತ್ತಿದ್ದಳು.ನಂತರ ತಂದೆ ಮಗಳು ಸೇರಿಕೊಂಡು ಸುನಿತಾ ಮೃತದೇಹವನ್ನು ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿ ಪ್ಯಾಕ್‌ ಮಾಡಿ ಮನೆಯಲ್ಲಿಯೇ ಇಟ್ಟಿದ್ದರು.

ಅ.17 ರಂದು ಅತ್ತೆ ರೂಪವತಿ ಮಗಳ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್‌ ಆಫ್‌ ಆಗಿತ್ತು. ಹಾಗಾಗಿ ಅಳಿಯನ ಮೊಬೈಲ್‌ಗೆ ಕರೆ ಮಾಡಿದ್ದಾಗ ಸುನಿತಾ ಮನೆಯಲ್ಲಿದ್ದಾಳೆ. ನೀವೇ ಮನೆಗೆ ಬನ್ನಿ ಎಂದು ಹೇಳಿದ್ದಾನೆ. ಹಾಗಾಗಿ ಅ.18 ರಂದು ಬೆಳಗ್ಗೆ ಬಾಷ್ಯಂ ಸರ್ಕಲ್‌ ಬಳಿಯ ಅಳಿಯನ ಮನೆಗೆ ರೂಪವತಿ ಹೋಗಿದ್ದು, ಸುನಿತಾ ಬಗ್ಗೆ ಪ್ರಶ್ನಿಸಿದ್ದಾಗ ತಡವರಿಸಿದ್ದಾನೆ.

ನಂತರ ಊಟ ಮಾಡುವಂತೆ ಮೊಮಗಳು ಅಜ್ಜಿಗೆ ಮಾಂಸಹಾರದ ಊಟ ಬಡಿಸಿ ಮದ್ಯವನ್ನು ನೀಡಿದ್ದಾಳೆ. ಊಟ ಮಾಡುತ್ತಿದ್ದಾಗ ಟಿವಿ ಸೌಂಡ್‌ ಜೋರಾಗಿ ಇಟ್ಟು ಹಿಂದಿನಿಂದ ತಲೆಗೆ ರುಬ್ಬುವ ಕಲ್ಲಿನಿಂದ ಹೊಡೆದು ಆರೋಪಿ ಸಾಯಿಸಿ ಪ್ಯಾಕ್‌ ಮಾಡಿದ್ದಾನೆ.ಮಾರನೇ ದಿನ ಪತ್ನಿ,ಅತ್ತೆಯ ಮೃತದೇಹಗಳನ್ನು ಕಾರಿನಲ್ಲಿ ಸಾಗಿಸಿ ತಮಿಳುನಾಡಿನ ಸೇಲಂ ಮತ್ತು ಧರ್ಮಪುರಿ ನಡುವಿನ ಘಾಟ್‌ ಪ್ರದೇಶದಲ್ಲಿ ಎಸೆದು ಬಂದಿದ್ದಾನೆ.

ಇವರಿಬ್ಬರ ಮೊಬೈಲ್‌ಗಳನ್ನು ತನ್ನ ಬಳಿಯೇ ಇಟ್ಟುಕೊಂಡು ಯಾರಿಗೂ ಅನುಮಾನ ಬಾರದಂತೆ ಈತನೇ ಮೆಸೇಜ್‌ ಮಾಡುತ್ತಿದ್ದನು. ಅ.23 ರಂದು ಶಿವಕುಮಾರ್‌ ತನ್ನ ಅಕ್ಕ ಹಾಗೂ ತಾಯಿಗೆ ಕರೆ ಮಾಡಿದಾಗ ಯಾರಿಂದಲೂ ಪ್ರತಿಕ್ರಿಯೆ ಬಾರದಿದ್ದಾಗ ಭಾವ ಇಂದುಶೇಖರ್‌ ಮೊಬೈಲ್‌ಗೆ ಕರೆ ಮಾಡಿದ್ದಾನೆ. ಆ ವೇಳೆ ಅವರಿಬ್ಬರು ಪ್ರವಾಸಕ್ಕೆ ಹೋಗಿದ್ದಾರೆಂದು ಸುಳ್ಳು ಹೇಳಿದನಲ್ಲದೇ ಮನೆಗೆ ಬಂದು ಊಟ ಮಾಡಿಕೊಂಡು ಹೋಗುವಂತೆ ಕರೆದಿದ್ದಾನೆ.
ಭಾವನ ಮಾತನ್ನು ನಂಬಿದ ಶಿವಕುಮಾರ್‌ ಪತ್ನಿ ದಿವ್ಯಾ ಹಾಗೂ ಮಗ ಪುನೀತ್‌ ಜೊತೆ ಅ.24 ರಂದು ರಾತ್ರಿ ಭಾವನ ಮನೆಗೆ ಬಂದಾಗ ಚೆನ್ನಾಗಿ ಮಾತನಾಡಿಸಿ ಅವರಿಗೆ ಮಾಂಸಹಾರ ಊಟದ ಜೊತೆಗೆ ಮದ್ಯದಲ್ಲಿ ನಿದ್ರೆ ಮಾತ್ರೆ ಬೆರೆಸಿ ನೀಡಿದ್ದಾನೆ.

ಬಳಿಕ ದಿವ್ಯಾ ಅವರು ಮಗ ಪುನೀತ್‌ ಜೊತೆ ರೂಂ ನಲ್ಲಿ ಮಲಗಿಕೊಂಡಿದ್ದಾರೆ. ಶಿವಕುಮಾರ್‌ ಹಾಲ್‌ನಲ್ಲಿ ಮಲಗಿದ್ದಾಗ ಆತನಿಗೂ ರುಬ್ಬುವ ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿ ಮಗಳ ಸಹಾಯದಿಂದ ಮೃತದೇಹವನ್ನು ಪ್ಯಾಕ್‌ ಮಾಡಿ ಅಡಿಗೆ ಮನೆಯಲ್ಲಿಟ್ಟಿದ್ದಾನೆ.

ದಿವ್ಯಾ ಅವರು ಮಾರನೇ ದಿನ ಬೆಳಗ್ಗೆ ಎದ್ದು ಶಿವಕುಮಾರ್‌ ಬಗ್ಗೆ ವಿಚಾರಿಸುತ್ತಿದ್ದಂತೆ ಆಕೆಯನ್ನೂ ಸಹ ಕೊಲೆ ಮಾಡಿದ್ದಾನೆ. ಕಿರುಚಾಟದ ಶಬ್ದ ಕೇಳಿ ಎದ್ದು ಬಂದ ಬಾಲಕ ಪುನೀತ್‌ನನ್ನು ಹತ್ಯೆಗೈದಿದ್ದಾನೆ. ನಂತರ ಮೂವರ ಮೃತದೇಹಗಳನ್ನು ಕಾರಿನ ಡಿಕ್ಕಿಯಲ್ಲಿಟ್ಟುಕೊಂಡು ಮಗಳನ್ನು ತನ್ನ ಜೊತೆಯಲ್ಲಿ ಕರೆದುಕೊಂಡು ಆರೋಪಿ ಮೈಸೂರಿನತ್ತ ಹೋಗಿದ್ದು, ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಶಿವಕುಮಾರ್‌ , ದಿವ್ಯಾ ಶವಗಳನ್ನು ಎಸೆದು ಬಾಲಕನ ಶವದೊಂದಿಗೆ ನಗರಕ್ಕೆ ವಾಪಸ್ಸಾಗಿದ್ದಾರೆ.

ಅ.31ರಂದು ಶಂಕರ್‌ ತನ್ನ ಅಕ್ಕ ಸುನಿತಾಗೆ ಕರೆ ಮಾಡಿದಾಗ ಅವರು ಪ್ರವಾಸದಲ್ಲಿದ್ದಾರೆ. ನೀವು ಮನೆಗೆ ಬಂದು ಊಟ ಮಾಡಿಕೊಂಡು ಹೋಗುವಂತೆ ಆರೋಪಿ ಕರೆದಿದ್ದಾನೆ. ನ.1 ರಂದು ಪತ್ನಿ ನಳಿನಿ, ಮಗ ಯತೀನ್‌ನನ್ನು ಕರೆದುಕೊಂಡು ಶಂಕರ್‌ ಭಾವನ ಮನೆಗೆ ಬಂದಾಗ ರಾತ್ರಿ ಆರೋಪಿ ಇವರಿಗೆ ಮಾಂಸಹಾರದ ಊಟ ಮತ್ತು ಮದ್ಯ ನೀಡಿದ್ದಾನೆ.

ನಳಿನಿ ಅವರಿಗೆ ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿದ್ದನು. ಇದ್ಯಾವುದರ ಅರಿವಿಲ್ಲದೇ ಊಟ ಮಾಡಿದ ದಂಪತಿ ಅವರ ಮಗ ನಿದ್ರೆಗೆ ಜಾರಿದಾಗ ಶಂಕರ್‌ ಮತ್ತು ನಳಿನಿ ಕೊಲೆಗೆ ರುಬ್ಬುವ ಕಲ್ಲಿನಿಂದ ಹೊಡೆದು ಕೊಲೆ ಮಾಡಿ ನಂತರ ತಂದೆ ಮಗಳು ಸೇರಿ ಇಬ್ಬರ ಮೃತದೇಹಗಳನ್ನು ಪ್ಲಾಸ್ಟಿಕ್‌ ಚೀಲಗಳಲ್ಲಿ ತುಂಬಿ ಪ್ಯಾಕ್‌ ಮಾಡಿದ್ದಾರೆ.ಅದೃಷ್ಟವಶಾತ್‌ ಯತೀನ್‌ ಬದುಕುಳಿದಿದ್ದು, ಈತನನ್ನು ಬೇರೊಂದು ದಿನ ಕೊಲೆ ಮಾಡಲು ಯೋಚಿಸಿದ್ದನು.

ರಾತ್ರಿ ಈ ಇಬ್ಬರ ಮೃತದೇಹ ಹಾಗೂ ಕಾರಿನಲ್ಲಿಟ್ಟಿದ್ದ ಪುನೀತ್‌ ಮೃತದೇಹವನ್ನು ವಿಲೇವಾರಿ ಮಾಡಲು ನ.2 ರಂದು ಬೆಳಗಿನ ಜಾವ ಶಿರಾಡಿ ಘಾಟ್‌ ಬಳಿ ಹೋಗಿ ಬಿಸಾಡಿದ್ದಾನೆ. ಬಳಿಕ ಯಾರಿಗೂ ಸುಳಿವು ಸಿಗಬಾರದೆಂಬ ಉದ್ದೇಶದಿಂದ ಪುನೀತ್‌ ಮೃತದೇಹವನ್ನು ವಾಪಸ್‌‍ ಬರುವ ಮಾರ್ಗಮಧ್ಯೆ ನಂದಿ ಬೆಟ್ಟದ ಬಳಿ ಎಸೆದಿದ್ದಾರೆ.

ಮೂವರ ಮೃತದೇಹಗಳನ್ನು ಎಸೆಯುವಾಗ ಯತೀನ್‌ ಜೊತೆಯಲ್ಲಿಯೇ ಇದ್ದನು. ಮೂಟೆ ಬಗ್ಗೆ ಆತ ಕೇಳಿದಾಗ ಕಸ ಎಂದು ಹೇಳಿ ಆತನನ್ನು ಆರೋಪಿ ನಂಬಿಸಿದ್ದನು. ಹೀಗೆ ಒಟ್ಟು ಏಳು ಮಂದಿಯ ಕೊಲೆ ಮಾಡಿ ಅಮಾಯಕನಂತೆ ವರ್ತಿಸಿದ್ದ ಆರೋಪಿ ಇಂದುಶೇಖರ್‌ನ ಜನವನ್ನು ಪೊಲೀಸರು ಜಾಲಾಡುತ್ತಿದ್ದಾರೆ.

RELATED ARTICLES

Latest News