Homeರಾಜ್ಯದೀಪಾವಳಿ ನಂತರ ಕಾಡಲಿದೆ ಮಾಘಿ ಚಳಿ

ದೀಪಾವಳಿ ನಂತರ ಕಾಡಲಿದೆ ಮಾಘಿ ಚಳಿ

ಬೆಂಗಳೂರು, ನ.8-ದೀಪಾವಳಿ ಹಬ್ಬ ನಂತರ ಗರಿಷ್ಠ ಹಾಗೂ ಕನಿಷ್ಠ ತಾಪಮಾನದಲ್ಲಿ ಗಣನೀಯ ಇಳಿಕೆಯಾಗಲಿದ್ದು, ರಾಜ್ಯದಲ್ಲಿ ಮಾಘಿ ಚಳಿ ಆರಂಭವಾಗಲಿದೆ. ಹಿಂಗಾರು ಮಳೆ ಮತ್ತೆ ದುರ್ಬಲಗೊಂಡಿದ್ದು, ಚಳಿಯ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗಲಿದೆ. ಈಗಾಗಲೇ ಗರಿಷ್ಠ ತಾಪಮಾನ ಸು.30ಡಿ.ಸೆ.ನಷ್ಟಿದ್ದರೆ, ಕನಿಷ್ಠ ತಾಪಮಾನ 20 ಡಿ.ಸೆ.ಗಿಂತ ಕಡಿಮೆ ಇದೆ.

ಕರಾವಳಿ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾತ್ರ ಗರಿಷ್ಠ ತಾಪಮಾನ ತುಸು ಹೆಚ್ಚಾಗಿದೆ. ನ.10 ರ ನಂತರ ಗರಿಷ್ಠ ಹಾಗೂ ಕನಿಷ್ಠ ತಾಪಮಾನದಲ್ಲಿ 2ರಿಂದ 3 ಡಿ.ಸೆ. ಕಡಿಮೆಯಾಗಲಿದ್ದು, ಚಳಿ ಹೆಚ್ಚಾಗಲಿದೆ. ರಾತ್ರಿ ವೇಳೆ ಚಳಿಯ ಪ್ರಮಾಣ ಹೆಚ್ಚಾಗಿರುತ್ತದೆ. ಅಂದರೆ, ಮಳೆ ಕಡಿಮೆಯಾದಂತೆ ಚಳಿಯು ಹೆಚ್ಚಾಗುತ್ತಾ ಹೋಗಲಿದೆ. ಬಹಳಷ್ಟು ಕಡೆಗಳಲ್ಲಿ ಮುಂಜಾನೆ ಮಂಜು ಹಾಗೂ ದಟ್ಟವಾದ ಮಂಜು ಆವರಿಸುವ ಸಾಧ್ಯತೆಗಳು ಹೆಚ್ಚಾಗಿವೆ.

ಹವಾಮಾನ ಮುನ್ಸೂಚನೆ ಪ್ರಕಾರ ಇಂದು ಮತ್ತು ನಾಳೆ ಭಾಗಶಃ ಮೋಡ ಕವಿದ ವಾತಾವರಣ ಕಂಡು ಬರಲಿದ್ದು, ಆಗಾಗ್ಗೆ ತಂಪಾದ ಮೇಲೈ ಗಾಳಿಯು ಬೀಸಲಿದೆ. ಚದುರಿದಂತೆ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ. ಆದರೆ, ಸದ್ಯಕ್ಕೆ ಭಾರಿ ಮಳೆ ಮುನ್ಸೂಚನೆ ಇಲ್ಲ. ವಾಯುಭಾರ ಕುಸಿತ ಹಾಗೂ ಚಂಡ ಮಾರುತದಂತಹ ಪ್ರಕ್ರಿಯೆಗಳು ಕಂಡುಬರುತ್ತಿಲ್ಲ. ಹೀಗಾಗಿ ಮಳೆ ಬಿಡುವು ಕೊಡಲಿದ್ದು, ಮುಂಗಾರು ಹಂಗಾಮಿನ ವಿವಿಧ ಬೆಳೆಗಳ ಕೊಯ್ಲಿಗೆ ಅನುಕೂಲವಾಗಲಿದೆ.

ಕಳೆದ ಮೂರು ವಾರಗಳಿಂದ ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತಗಳು, ಚಂಡ ಮಾರುತಗಳ ಪ್ರಭಾವದಿಂದ ಕರಾವಳಿ, ಮಲೆನಾಡು, ಉತ್ತರ ಹಾಗೂ ದಕ್ಷಿಣ ಒಳನಾಡು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಮಳೆಯಾಗಿದೆ. ಬರದಿಂದ ತತ್ತರಿಸುತ್ತಿದ್ದ ರಾಜ್ಯದಲ್ಲಿ ಇತ್ತೀಚೆಗೆ ಬಿದ್ದ ಹಿಂಗಾರು ಮಳೆ ನಿಟ್ಟುಸಿರು ಬಿಡುವಂತೆ ಮಾಡಿತ್ತು.

ಮಳೆ ಬಿದ್ದ ಪ್ರದೇಶಗಳಲ್ಲಿ ಮುಂಗಾರು ಬೆಳೆಗಳಿಗೆ ಅನುಕೂಲವಾಗಿದೆ. ಆದರೆ, ಜಲಾಶಯಗಳು, ಕೆರೆ-ಕಟ್ಟೆಗಳು ತುಂಬುವಂತಹ ಮಳೆಯಾಗದೇ ಇರುವುದರಿಂದ ಬರದ ತೀವ್ರತೆ ಮುಂದುವರೆದಿದೆ. ಸದ್ಯಕ್ಕೆ ಜಾನುವಾರುಗಳ ಮೇವಿಗೆ ಮಾತ್ರ ಅನುಕೂಲವಾಗಿದೆ.

RELATED ARTICLES

Latest News