Homeರಾಜ್ಯಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ಆಯೋಗ ಸಿದ್ಧತೆ

ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ಆಯೋಗ ಸಿದ್ಧತೆ

ಬೆಂಗಳೂರು,ನ.9- ಕರ್ನಾಟಕದಲ್ಲಿ 2027ರ ಜನವರಿಯಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಚುನಾವಣಾ ಸಿದ್ಧತೆಗಳನ್ನು ಚುರುಕುಗೊಳಿಸಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಗಳಿಗೆ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಆಯೋಗ ನಿರ್ದೇಶನ ನೀಡಿದೆ. ರಾಜ್ಯ ಚುನಾವಣಾ ಆಯೋಗ ಶನಿವಾರ ಹೊರಡಿಸಿರುವ ನಿರ್ದೇಶನದಂತೆ, ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ಸಹಾಯಕ ಆಯುಕ್ತರ ಹುದ್ದೆಯ ಅಥವಾ ಅದಕ್ಕೆ ಸಮಾನ ಶ್ರೇಣಿಯ ಅಧಿಕಾರಿಗಳನ್ನು ಚುನಾವಣಾಧಿಕಾರಿಗಳಾಗಿ ನೇಮಿಸಬೇಕು. ತಾಲೂಕು ಪಂಚಾಯಿತಿ ಕ್ಷೇತ್ರಗಳಿಗೆ ತಹಸೀಲ್ದಾರ್‌ ಅಥವಾ ಸಮಾನ ಶ್ರೇಣಿಯ ಅಧಿಕಾರಿಗಳನ್ನು ಚುನಾವಣಾಧಿಕಾರಿಗಳಾಗಿ ನೇಮಿಸಲು ಸೂಚಿಸಲಾಗಿದೆ.

ನವೆಂಬರ್‌ 16ರೊಳಗೆ ಪಟ್ಟಿ ಸಲ್ಲಿಕೆ
ಜಿಲ್ಲಾಧಿಕಾರಿಗಳು ಪ್ರಾಥಮಿಕ ಸಭೆಗಳನ್ನು ನಡೆಸಿ, ನೇಮಕಗೊಳ್ಳುವ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳಿಗೆ ಅಗತ್ಯ ತರಬೇತಿ ನೀಡಬೇಕು. ನೇಮಕಾತಿಗೆ ಸಂಬಂಧಿಸಿದ ಪ್ರಸ್ತಾವನೆ ಹಾಗೂ ಆರ್‌ಒ-ಎಆರ್‌ಒ ಪಟ್ಟಿಯನ್ನು ನವೆಂಬರ್‌ 16ರೊಳಗೆ ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.ಕರ್ನಾಟಕ ಪಂಚಾಯತ್‌ ರಾಜ್‌ (ಚುನಾವಣೆಗಳ ನಡವಳಿಕೆ) ನಿಯಮಗಳು, 1993ರ ನಿಯಮ 6ರನ್ವಯ ಸೂಕ್ತ ಅಧಿಕಾರಿಗಳನ್ನು ಗುರುತಿಸಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಕ್ಷೇತ್ರಗಳ ಸಂಖ್ಯೆಗೆ ಅನುಗುಣವಾಗಿ ಅಧಿಕಾರಿಗಳ ನೇಮಕ
ಜಿಲ್ಲಾ ಪಂಚಾಯಿತಿ ಚುನಾವಣೆಗೆ ಪ್ರತಿ ತಾಲೂಕಿಗೆ ಒಬ್ಬ ಸಹಾಯಕ ಆಯುಕ್ತರ ಶ್ರೇಣಿಯ ಅಧಿಕಾರಿಯನ್ನು ಆರ್‌ಒಗಳನ್ನಾಗಿ ನೇಮಿಸಬೇಕು. 10ಕ್ಕಿಂತ ಹೆಚ್ಚು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿರುವ ತಾಲೂಕುಗಳಲ್ಲಿ ಅಗತ್ಯವಿದ್ದರೆ ಇಬ್ಬರು ಆರ್‌ಒಗಳನ್ನು ನೇಮಿಸಬಹುದಾಗಿದೆ. ಸಂಬಂಧಪಟ್ಟ ತಾಲೂಕಿನ ತಹಸೀಲ್ದಾರ್‌ ಹೊರತುಪಡಿಸಿ, ತಹಸೀಲ್ದಾರ್‌ ಶ್ರೇಣಿಯ ಅಧಿಕಾರಿಗಳನ್ನು ಎಆರ್‌ಒಗಳಾಗಿ ನೇಮಿಸಲು ಸೂಚಿಸಲಾಗಿದೆ.

ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಪ್ರತಿ 15 ಕ್ಷೇತ್ರಗಳಿಗೆ ಒಬ್ಬ ತಹಸೀಲ್ದಾರ್‌ ಅಥವಾ ಸಮಾನ ಶ್ರೇಣಿಯ ಅಧಿಕಾರಿಯನ್ನು ಆರ್‌ಒಗಳಾಗಿ ನೇಮಿಸಬೇಕು. ಉಪ ತಹಸೀಲ್ದಾರ್‌ ಅಥವಾ ಸಮಾನ ಶ್ರೇಣಿಯ ಅಧಿಕಾರಿಗಳನ್ನು ಎಆರ್‌ಒಗಳಾಗಿ ನಿಯೋಜಿಸಬೇಕು.

ಅನುಭವ ಇರುವ ಸಿಬ್ಬಂದಿಗೆ ಆದ್ಯತೆ
ಚುನಾವಣಾ ಕಾರ್ಯಕ್ಕೆ ನಿಯೋಜಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಹಿಂದಿನ ಚುನಾವಣಾ ಅನುಭವ ಇರುವಂತೆ ನೋಡಿಕೊಳ್ಳಬೇಕು ಎಂದು ಆಯೋಗ ಸೂಚಿಸಿದೆ. ಚುನಾವಣಾ ಸಿದ್ಧತೆಯ ಆರಂಭದಿಂದ ಮತದಾನ ಮತ್ತು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿಗೂ ತರಬೇತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಅಲ್ಲದೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳನ್ನು ರಾಜ್ಯ ಚುನಾವಣಾ ಆಯೋಗದ ಪೂರ್ವಾನುಮತಿ ಇಲ್ಲದೆ ಬದಲಾಯಿಸಬಾರದು. ಅನಿವಾರ್ಯ ಸಂದರ್ಭದಲ್ಲಿ ಆಯೋಗದ ಅನುಮತಿ ಪಡೆದ ಬಳಿಕವೇ ಬದಲಾವಣೆ ಮಾಡಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಡಿಸೆಂಬರ್‌ನಲ್ಲಿ ವೇಳಾಪಟ್ಟಿ ಸಾಧ್ಯತೆ
ಇತ್ತೀಚೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಈಶ್ವರ ಬಿ. ಖಂಡ್ರೆ ಅವರು, ಜನವರಿಯಲ್ಲಿ ಚುನಾವಣೆ ನಡೆಸುವ ಉದ್ದೇಶವಿದ್ದರೆ ಡಿಸೆಂಬರ್‌ ಮಧ್ಯಭಾಗದಲ್ಲಿ ರಾಜ್ಯ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ಸೂಚಿಸಿದ್ದರು.

ಇದೀಗ ಆರ್‌ಒ ಮತ್ತು ಎಆರ್‌ಒಗಳ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಯೋಗ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿರುವುದು ಚುನಾವಣಾ ಸಿದ್ಧತೆಗಳು ಮುಂದುವರಿದಿರುವುದಕ್ಕೆ ಮತ್ತಷ್ಟು ಸೂಚನೆಯಾಗಿದೆ.

ಮತಪೆಟ್ಟಿಗೆಗಳ ಸಿದ್ಧತೆ
ಮೂಲಗಳ ಪ್ರಕಾರ, ರಾಜ್ಯ ಚುನಾವಣಾ ಆಯೋಗ ರಾಜ್ಯಾದ್ಯಂತ ಲಭ್ಯವಿರುವ ಮತಪೆಟ್ಟಿಗೆಗಳ ಪರಿಶೀಲನೆ ಮತ್ತು ಆಡಿಟ್‌ ಪೂರ್ಣಗೊಳಿಸಿದೆ. ಸುಮಾರು 80 ಕೋಟಿಗೂ ಅಧಿಕ ಮೌಲ್ಯದ ಮತಪೆಟ್ಟಿಗೆಗಳು ಮರುಬಳಕೆಗೆ ಯೋಗ್ಯ ಸ್ಥಿತಿಯಲ್ಲಿವೆ ಎಂದು ತಿಳಿದುಬಂದಿದೆ. ಇದರ ಜೊತೆಗೆ, ಬ್ಯಾಲೆಟ್‌ ಪೇಪರ್‌ ಮೂಲಕ ಚುನಾವಣೆ ನಡೆಸಲು ಅಗತ್ಯವಿರುವ ಹೆಚ್ಚುವರಿ ಮತಪೆಟ್ಟಿಗೆಗಳು ಹಾಗೂ ಇತರ ಚುನಾವಣಾ ಸಾಮಗ್ರಿಗಳ ಖರೀದಿಗಾಗಿ ರಾಜ್ಯ ಸರ್ಕಾರ ಇತ್ತೀಚೆಗೆ ರಾಜ್ಯ ಚುನಾವಣಾ ಆಯೋಗಕ್ಕೆ 125 ಕೋಟಿ ಬಿಡುಗಡೆ ಮಾಡಿದೆ ಎನ್ನಲಾಗಿದೆ.

ಒಟ್ಟಿನಲ್ಲಿ, ಜನವರಿ 2027ರ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳ ನೇಮಕ, ತರಬೇತಿ, ಮತಪೆಟ್ಟಿಗೆಗಳ ಸಿದ್ಧತೆ ಹಾಗೂ ಚುನಾವಣಾ ಸಾಮಗ್ರಿಗಳ ವ್ಯವಸ್ಥೆ ಸೇರಿದಂತೆ ಹಲವು ಹಂತಗಳಲ್ಲಿ ರಾಜ್ಯ ಚುನಾವಣಾ ಆಯೋಗ ಸಿದ್ಧತೆ ಆರಂಭಿಸಿದೆ.

RELATED ARTICLES

Latest News