Homeರಾಜ್ಯಅಳತೆಮೀರಿ ಎಥೆನಾಲ್‌ ಮಿಶ್ರಣದಿಂದ ವಾಹನಗಳ ಎಂಜಿನ್‌ ಹಾಳಾಗುತ್ತಿವೆ : ಸಚಿವ ರಿಜ್ವಾನ್‌ ಅರ್ಷದ್‌

ಅಳತೆಮೀರಿ ಎಥೆನಾಲ್‌ ಮಿಶ್ರಣದಿಂದ ವಾಹನಗಳ ಎಂಜಿನ್‌ ಹಾಳಾಗುತ್ತಿವೆ : ಸಚಿವ ರಿಜ್ವಾನ್‌ ಅರ್ಷದ್‌

ಬೆಂಗಳೂರು, ನ.9- ನಿಗದಿತ ಪ್ರಮಾಣ ಕ್ಕಿಂತಲೂ ಹೆಚ್ಚಿನದಾಗಿ ಎಥೆನಾಲ್‌ ಅನ್ನು ಪೆಟ್ರೋಲ್‌ ಮಿಶ್ರಣ ಮಾಡುತ್ತಿರುವುದರಿಂದಾಗಿ ವಾಹನಗಳ ಎಂಜಿನ್‌ಗಳು ಹಾಳಾಗುತ್ತಿವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಿಜ್ವಾನ್‌ ಅರ್ಷದ್‌ ಆರೋಪಿಸಿದ್ದು, ಎಥೆನಾಲ್‌ ಮಿಶ್ರಿತ ಇಂಧನ ಖರೀದಿ ಗ್ರಾಹಕರ ಆಯ್ಕೆಯಾಗಿರ ಬೇಕೆಂದು ಒತ್ತಾಯಿಸಿದ್ದಾರೆ.

ವಿಕಾಸಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆಟ್ರೋಲ್‌ ಬಂಕ್‌ಗಳಲ್ಲಿ ಸಂಗ್ರಹಿಸಲಾದ ಮಾದರಿಗಳ ಫಲಿತಾಂಶ ವರದಿಗಳ ಕುರಿತು ಈ ಹಿಂದೆ ತಾವು ನೀಡಿದ ಹೇಳಿಕೆಗೆ ಬದ್ಧರಾಗಿರುವುದಾಗಿ ಪುನರುಚ್ಚರಿಸಿದರು.

ರಾಜ್ಯದಲ್ಲಿ 63 ಕಡೆಗಳಲ್ಲಿ ಮಾದರಿಗಳನ್ನು ಸಂಗ್ರಹಿಸಿ, ಅದರಲ್ಲಿ ಒಂದನ್ನು ಆ ತೈಲ ಕಂಪನಿಗಳ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಮತ್ತೊಂದನ್ನು ಪೆಟ್ರೋಲ್‌ ಬಂಕ್‌ಗಳ ಮಾಲೀಕರಿಗೆ ನೀಡಲಾಗಿದ್ದು, ಮೂರನೇ ಮಾದರಿಯನ್ನು ಪರೀಕ್ಷೆಗಾಗಿ ಖಾಸಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ ಖಾಸಗಿ ಲ್ಯಾಬ್‌ನಿಂದ ಪಡೆದುಕೊಂಡ ವರದಿಯ ಪ್ರಕಾರ ಎಥೆನಾಲ್‌ನ ಮಿಶ್ರಣ ಶೇ. 21 ರಿಂದ 31ರವರೆಗೂ ಇದೆ. ಇದು ಕೇಂದ್ರ ಸರ್ಕಾರ ನಿರ್ಧರಿಸಿದ ಶೇ. 20ರ ಮಿತಿಯನ್ನು ದಾಟಿದೆ. ಆದರೆ ನಮ ವರದಿ ವೈಜ್ಞಾನಿಕವಲ್ಲ ಎಂಬ ಆಕ್ಷೇಪಣೆಗಳನ್ನು ತೈಲ ಕಂಪನಿಗಳು ಎತ್ತಿವೆ. ರಾಜ್ಯ ಸರ್ಕಾರ ನಿಯಮಾವಳಿಗಳ ಅನುಸಾರ ಬಂಕ್‌ಗಳು ಮತ್ತು ತೈಲ ಕಂಪನಿಗಳ ಪ್ರತಿನಿಧಿಗಳ ಸಮುಖದಲ್ಲೇ ಮಾದರಿ ಸಂಗ್ರಹಿಸಿದೆ. ಈ ಸಂದರ್ಭದಲ್ಲಿ ಎಲ್ಲಾ ಅಧಿಕಾರಿಗಳು ತಮ ಸಹಿ ಹಾಕಿದ್ದಾರೆ.

ತೈಲ ಕಂಪನಿಗಳಿಗೆ ಕಳುಹಿಸಲಾದ ಮಾದರಿಗಳ ಫಲಿತಾಂಶವನ್ನು ನಮಗೆ ನೀಡಲಾಗಿಲ್ಲ. ಪರ್ಯಾಯವಾಗಿ ರಾಜ್ಯ ಸರ್ಕಾರ ನ್ಯಾಷನಲ್‌ ಅಕಾಡೇಷನ್‌ ಬೋರ್ಡ್‌ ಆಫ್‌ ಟೆಸ್ಟಿಂಗ್‌ ಆ್ಯಂಡ್‌ ಲ್ಯಾಬೊರೇಟರಿ (ಎನ್‌ಎಬಿಎಲ್‌)ಯಿಂದ ಮಾನ್ಯತೆ ಪಡೆದ ಖಾಸಗಿ ಪ್ರಯೋಗಾಲಯಗಳಿಗೆ ಮಾದರಿ ಕಳುಹಿಸಿ ವರದಿ ಪಡೆದುಕೊಂಡಿದ್ದೇವೆ.

ಎಥೆನಾಲ್‌ ಮಿಶ್ರಣ ಪತ್ತೆ ಹಚ್ಚಲು ಸಾಮಾನ್ಯ ಜ್ಞಾನ ಸಾಲುವುದಿಲ್ಲ. ಅದೊಂದು ರಾಕೆಟ್‌ ಸೈನ್‌್ಸ. ನಿಮಿಂದ ಸಾಧ್ಯವಿಲ್ಲ ಎಂದು ಹೇಳುತ್ತಿರುವ ತೈಲ ಕಂಪನಿಗಳು, ನಮ ವರದಿ ಪ್ರಕಟಗೊಂಡ ಬಳಿಕ ಆನ್‌ಲೈನ್‌ನಲ್ಲಿ ಸಿಗುವ 600 ರೂ. ಬೆಲೆಯ ಹೈಡ್ರೋ ಮೀಟರ್‌ ಅನ್ನು ಬಳಸಿ ಕೆಲವು ಬಂಕ್‌ಗಳಲ್ಲಿ ಸ್ಥಳದಲ್ಲೇ ತಪಾಸಣೆ ನಡೆಸುತ್ತಿದ್ದು, ಎಥೆನಾಲ್‌ ಮಿಶ್ರಣ ಎಷ್ಟು ಎಂದು ಘೋಷಣೆ ಮಾಡುತ್ತಿವೆ. ತೈಲ ಕಂಪನಿಗಳ ಪರವಾಗಿ ಬಂಕ್‌ ಮಾಲೀಕರಿಂದಲೂ ಹೇಳಿಕೆ ಕೊಡಿಸಲಾಗುತ್ತಿದೆ ಎಂದು ದೂರಿದರು.

ನಮ ಮಾದರಿಯ ಪರೀಕ್ಷಾ ವರದಿ ಸರಿಯಿಲ್ಲ ಎಂದು ಹೇಳುವ ತೈಲ ಕಂಪನಿಗಳು ಸಾಮಾನ್ಯ ಮಾಪನದ ಮೂಲಕವೇ ಫಲಿತಾಂಶ ಘೋಷಿಸುವಂತಹ ದ್ವಂದ್ವ ಅನುಸರಿಸುತ್ತಿವೆ. ಎಷ್ಟು ಪ್ರಮಾಣದಲ್ಲಿ ಎಥೆನಾಲ್‌ ಮಿಶ್ರಣವಾಗುತ್ತಿದೆ ಎಂಬುದನ್ನಾದರೂ ಅಧಿಕೃತವಾಗಿ ಘೋಷಿಸಲು ಹಿಂದೇಟು ಹಾಕುತ್ತಿವೆ ಎಂದು ಟೀಕಿಸಿದರು.

ಎಥೆನಾಲ್‌ ಮಿಶ್ರಣ ಸಾಮಾನ್ಯ ಕಲಬೆರೆಕೆ ಪ್ರಕರಣ ಎಂದು ಪರಿಗಣಿಸಲಾಗುವುದಿಲ್ಲ. ಪೆಟ್ರೋಲ್‌ ಬಂಕ್‌ ಮಾಲೀಕರು ಎಥೆನಾಲ್‌ ಅನ್ನು ಸ್ಥಳೀಯವಾಗಿ ಮಿಶ್ರಣ ಮಾಡಲಾಗುವುದಿಲ್ಲ. ರಾಜ್ಯದಲ್ಲಿ 6 ಕಡೆ ಇಂಧನ ಪೂರೈಸುವ ಅಧಿಕೃತವಾದ ಟರ್ಮಿನಲ್‌ಗಳಿದ್ದು, ಅವು ತೈಲ ಕಂಪನಿಗಳ ಹಿಡಿತಲ್ಲಿದೆ. ಅಲ್ಲಿಂದಲೇ ಎಥೆನಾಲ್‌ ಮಿಶ್ರಣವಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಹೊಣೆ ಎಂದು ಆರೋಪಿಸಿದರು.

ಇ-20ಯಲ್ಲಿ ಬಳಸಲಾಗುವ ಎಥೆನಾಲ್‌ ನಲ್ಲಿ ಕ್ಲೋರೈಡ್‌ ಮತ್ತು ಸಲ್ಪೇಟ್‌ ಪ್ರಮಾಣ ಜಾಸ್ತಿ ಇದೆ. ಇಂಜಿನ್‌ ಹಾಳಾಗುತ್ತದೆ ಎಂದು ಜುಲೈ 28ರಂದು ಸೊಸೈಟಿ ಆಫ್‌ ಇಂಡಿಯನ್‌ ಆಟೋ ಮೊಬೈಲ್‌ ಮ್ಯಾನುಪ್ಯಾಕ್ಚರ್‌ ವತಿಯಿಂದ ಪತ್ರ ಬರೆಯಲಾಗಿತ್ತು. ಒತ್ತಡ ಹೇರಿ ವಾರದಲ್ಲೇ ಅದನ್ನು ಹಿಂಪಡೆಯುವಂತೆ ಮಾಡಿದ್ದಾರೆ. ಆಕೋ ವಿಮಾ ಕಂಪನಿ ಇ-20 ಇಂಧನದಿಂದ ಹಾಳಾಗುವ ಇಂಜಿನ್‌ಗಳಿಗೆ ನಾವು ಪರಿಹಾರ ನೀಡುವುದಿಲ್ಲ ಎಂದಿತ್ತು. ಹುಂಡೈ, ಟೊಯೋಟಾದಂತಹ ಪ್ರತಿಷ್ಠಿತ ಉತ್ಪಾದನ ಸಂಸ್ಥೆಗಳು ಎಥೆನಾಲ್‌ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದವು. ಬಿಎಂಡಬ್ಲ್ಯೂ ಎಥೆನಾಲ್‌ ಅನ್ನು ಶೇ.30 ರಷ್ಟು ಮಿಶ್ರಣ ಮಾಡಿದರೆ ನಮ ಕಾರಿನ ಇಂಜಿನ್‌ಗಳು ಸಹಿಸುವುದಿಲ್ಲ ಎಂದು ಹೇಳಿತ್ತು.

ಕೇಂದ್ರ ಸರ್ಕಾರದ ಅಟಾರ್ನಿ ಜನರಲ್‌ ಇ-20 ಪ್ರಯೋಗಾರ್ಥ ಮಾತ್ರ ಎಂದು ಸುಪ್ರೀಂಕೋರ್ಟ್‌ ವಿಚಾರಣೆಯಲ್ಲಿ ಪ್ರಮಾಣ ಪತ್ರ ಸಲ್ಲಿಸಿದರು. ಕೇಂದ್ರ ಸಚಿವ ಕುಮಾರಸ್ವಾಮಿ ಕೂಡ ಕೆಲವು ಉತ್ಪಾದಕ ಸಂಸ್ಥೆಗಳು ತಮ ಬಳಿ ಎಥೆನಾಲ್‌ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದನ್ನು ತಿಳಿಸಿದರು. ಈ ಎಲ್ಲಾ ಹೇಳಿಕೆಗಳನ್ನು ಕೆಲವೇ ದಿನಗಳಲ್ಲಿ ಹಿಂಪಡೆಯುವಂತೆ ಮಾಡಲಾಗಿದೆ ಎಂದು ರಿಜ್ವಾನ್‌ ಆರೋಪಿಸಿದರು.

ಇ-20, ಇ-30 ಸೇರಿದಂತೆ ಯಾವುದೇ ಪ್ರಮಾಣದ ಎಥೆನಾಲ್‌ ಮಿಶ್ರಣವಾಗಿದ್ದರೂ ಅದನ್ನು ಖರೀದಿಸುವ ಆಯ್ಕೆ ಗ್ರಾಹಕರಿಗಿರಬೇಕು. ಮತ್ತು ಎಥೆನಾಲ್‌ ಮಿಶ್ರಿತ ಇಂಧನ ಖರೀದಿಸುವ ಗ್ರಾಹಕರಿಗೆ ಬೆಲೆಯಲ್ಲಿ ರಿಯಾಯಿತಿ ನೀಡಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಮೈಲೇಜ್‌ ಕಡಿಮೆಯಾಗುವುದು ಸೇರಿದಂತೆ ಹಲವು ಸಮಸ್ಯೆಗಳಿವೆ. ಪೆಟ್ರೋಲ್‌ನಲ್ಲಿ 34 ಮೆಗಾ ಜ್ಯುವೆಲ್‌್ಸ ಅಂಶಗಳಿರುತ್ತವೆ. ಎಥೆನಾಲ್‌ ಮಿಶ್ರಣ ಮಾಡಿದರೆ ಅದು 30 ಮೆಗಾ ಜ್ಯುವೆಲ್‌್ಸಗೆ ಇಳಿಯುತ್ತದೆ. ಹೀಗಾಗಿ ಮೈಲೇಜ್‌ ಕಡಿಮೆಯಾಗುತ್ತದೆ ಎಂದು ವಿವರಿಸಿದರು.

RELATED ARTICLES

Latest News