ಬೆಂಗಳೂರು, ಏ.17- ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದ ಕರಡಿ ಸಂಗಣ್ಣ ಇಂದು ಬಿಜೆಪಿ ತೊರೆದು ಕಾಂಗ್ರೆಸ್ಗೆ ಸೇರ್ಪಡೆಯಾದರು. ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಕಾರ್ಯಕ್ರಮ ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕರಡಿ ಸಂಗಣ್ಣ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡರು. ಇದೇ ವೇಳೆ ಬೆಳಗಾವಿ ಗ್ರಾಮಾಂತರದಲ್ಲಿ ಮೂರು ಬಾರಿ ಮಾಜಿ ಶಾಸಕರಾಗಿದ್ದ ಎಸ್.ಸಿ. ಮಾಳಗಿ, ಮಾಜಿ ಐಎಎಸ್ ಅಧಿಕಾರಿ ಅರಕಲಗೂಡು ಪುಟ್ಟಸ್ವಾಮಿ, ಅಂಬರೀಶ್ ಕರಡಿ, ರಾಜಾಜಿನಗರ ಕ್ಷೇತ್ರ ಹಾಗೂ ದಾಸರಹಳ್ಳಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಪಿ.ಎನ್.ಕೃಷ್ಣ ಮೂರ್ತಿ, ಪತ್ರಕರ್ತೆ ಸ್ವಾತಿ ಚಂದ್ರಶೇಖರ್ ಅವರು ಕಾಂಗ್ರೆಸ್ಗೆ ಸೇರ್ಪಡೆಯಾದರು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಯವರು ಕರಡಿ ಸಂಗಣ್ಣವರಿಗೆ ಯಾಕೆ ಟಿಕೆಟ್ ನಿರಾಕರಿಸಿದರು ಎಂದು ಈವರೆಗೂ ನನಗೆ ಅರ್ಥವಾಗಿಲ್ಲ. ಅವರು ಒಳ್ಳೆಯ ಕೆಲಸ ಮಾಡಿ ಹೆಸರು ಗಳಿಸಿದ್ದರು, ಜನಾನುರಾಗಿಯಾಗಿದ್ದರು. ಯಡಿಯೂರಪ್ಪ ತಮ್ಮ ಮಗನನ್ನು ಮುಖ್ಯಮಂತ್ರಿ ಮಾಡಬೇಕು. ಅದಕ್ಕಾಗಿ ಬಿಜೆಪಿಯಲ್ಲಿ ಯಾರು ವಿಜಯೇಂದ್ರನನ್ನು ಒಪ್ಪಿಕೊಳ್ಳುವುದಿಲ್ಲ, ಅವರಿಗೆಲ್ಲಾ ಈ ಬಾರಿ ಯಡಿಯೂರಪ್ಪ ಟಿಕೆಟ್ ತಪ್ಪಿಸಿದ್ದಾರೆ. ಅಲ್ಲಿ ಎರಡು ಪ್ರಬಲ ಗುಂಪುಗಳಿವೆ, ಒಂದು ಯಡಿಯೂರಪ್ಪನ ಗುಂಪು, ಮತ್ತೊಂದು ಸಂತೋಷ್ ಗುಂಪು ಎಂದು ಹೇಳಿದರು.
ಕಳೆದ ಬಾರಿ 25 ಸ್ಥಾನ ಗೆದ್ದಿದ್ದ ಬಿಜೆಪಿಗೆ ಈ ಬಾರಿ ಸೋಲುವ ಆತಂಕ ಇದೆ. ಅದಕ್ಕಾಗಿ ಅನೇಕ ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲಾವಣೆ ಮಾಡಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರಕ್ಕೆ ದೇಶಾದ್ಯಂತ ಆಡಳಿತ ವಿರೋಧಿ ಅಲೆ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ. ನಮ್ಮ ಐದು ಗ್ಯಾರಂಟಿಗಳ ಅಲೆ ರಾಜ್ಯದಲ್ಲಿ ಜೋರಾಗಿದೆ ಎಂದರು.
ಜನರಿಗೆ ಕಾಂಗ್ರೆಸ್ ಬಗ್ಗೆ ವಿಶ್ವಾಸ ಮೂಡಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂಬ ಭಾವನೆ ಇದೆ. ದೇಶದಲ್ಲಿ ಸುಳ್ಳು ಮತ್ತು ಸತ್ಯದ ನಡುವೆ ಸಂಘರ್ಷ ನಡೆಯುತ್ತಿದೆ. ಕಾಂಗ್ರೆಸ್ ಯಾವತ್ತೂ ಸುಳ್ಳು ಹೇಳುವುದಿಲ್ಲ ಎಂಬ ನಂಬಿಕೆಯಿದ್ದರೆ, ಬಿಜೆಪಿ ಎಂದರೆ ನರೇಂದ್ರ ಮೋದಿಯಾದಿಯಾಗಿ ಎಲ್ಲರೂ ಸುಳ್ಳು ಹೇಳುತ್ತಾರೆ ಎಂಬ ಭಾವನೆ ದೃಢವಾಗಿದೆ.
ಮೋದಿ 2014ರ ಲೋಕಸಭೆ ಚುನಾವಣೆಯಲ್ಲಿ ನೀಡಿದ್ದ ಯಾವ ಭರವಸೆಗಳನ್ನೂ ಈಡೇರಿಸಲಿಲ್ಲ. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ತಂದುಕೊಡುತ್ತೇವೆ ಎಂದಿದ್ದರು ಅದು ಈಡೇರಲಿಲ್ಲ, 2 ಕೋಟಿ ಉದ್ಯೋಗ ಸೃಷ್ಟಿ, ರೈತರ ಆದಾಯ ದುಪ್ಪಟ್ಟು ಮಾಡುವುದು ಈಡೇರಿಲ್ಲ. ಒಳ್ಳೆಯ ದಿನ ಬರಲಿಲ್ಲ. ನಿರುದ್ಯೋಗ ಗಗನ ಮುಟ್ಟಿದೆ, ಬೆಲೆ ಏರಿಕೆ ತೀವ್ರವಾಗಿದೆ. ಹೀಗೆ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಬಗ್ಗೆ ನರೇಂದ್ರ ಮೋದಿ ಪ್ರಸ್ತಾಪಿಸುವುದಿಲ್ಲ.
ಧಾರ್ಮಿಕ ಹಾಗೂ ಭಾವನಾತ್ಮಕ ವಿಚಾರಗಳನ್ನು ಹೇಳಿ ಈವರೆಗೂ ಜನರನ್ನು ದಾರಿ ತಪ್ಪಿಸಿದ್ದಾರೆ. ಈ ಬಾರಿ ಅದರಲ್ಲಿ ಅವರಿಗೆ ಯಶಸ್ಸು ಸಿಗುವುದಿಲ್ಲ ಎಂದರು. ಸೋಲಿನ ಅರಿವಾಗುತ್ತಿದ್ದಂತೆ ಬಿಜೆಪಿಯವರು ಉದ್ದೇಶ ಪೂರ್ವಕವಾಗಿ ನಾಲ್ಕು ನೂರು ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. 200 ಸ್ಥಾನಗಳನ್ನೂ ಗೆಲ್ಲುವುದಿಲ್ಲ, ಅವರೇ ನಡೆಸಿರುವ ಆಂತರಿಕ ಸಮೀಕ್ಷೆಯಲ್ಲೂ ಹಿನ್ನಡೆ ಸ್ಪಷ್ಟವಾಗಿದೆ. ಈ ಬಾರಿ ಬಿಜೆಪಿ ಗೆಲ್ಲಲ್ಲ, ನರೇಂದ್ರ ಮೋದಿ ಪ್ರಧಾನಿಯಾಗಲ್ಲ. ದೇಶಾದ್ಯಂತ ಈ ರೀತಿಯ ಅಂಡರ್ ಕರೆಂಟ್ ಇದೆ ಎಂದರು.
ಗೆಲ್ಲುವ ವಾತಾವರಣ:
ಡಿ.ಕೆ.ಶಿವಕುಮಾರ್ ಮಾತನಾಡಿ, ರಾಜ್ಯದಲ್ಲಿ ದೊಡ್ಡ ರಾಜಕೀಯ ಅಲೆ ಶುರುವಾಗಿದೆ. ಐದು ಗ್ಯಾರಂಟಿ ಜಾರಿಯ ಬಳಿಕ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದುಕೊಳ್ಳಲಿದೆ ಎಂಬ ವಿಶ್ವಾಸ ಜನರಲ್ಲಿ ಹೆಚ್ಚಾಗಿದೆ. ತಾವು ನಿನ್ನೆ ಕೇರಳದಲ್ಲಿ ಪ್ರವಾಸ ಕೈಗೊಂಡಿದ್ದು, ಅಲ್ಲಿ 20ಕ್ಕೆ 20 ಸ್ಥಾನಗಳನ್ನೂ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಗೆಲ್ಲುವ ವಾತಾರಣ ಇದೆ ಎಂದರು.
ಬಿಜೆಪಿಯಲ್ಲಿ 16 ಮಂದಿ ಬಿಜೆಪಿ ಸಂಸದರಿಗೆ ಟಿಕೆಟ್ ನಿರಾಕರಿಸಲಾಗಿದೆ, ದೇಶದಲ್ಲಿ ನೂರಕ್ಕೂ ಹೆಚ್ಚು ಮಂದಿಯ ಮರು ಸ್ಪರ್ಧೆಗೆ ಟಿಕೆಟ್ ನೀಡಿಲ್ಲ. ಅವರು ಮತ್ತೆ ಗೆಲ್ಲುವುದಿಲ್ಲ ಎಂಬ ಕಾರಣಕ್ಕೆ ಟಿಕೆಟ್ ನಿರಾಕರಿಸಲಾಗಿದೆ. ಬಿಜೆಪಿ ನೇತೃತ್ವದ ಎನ್ಡಿಎಗೆ ಸೋಲಿನ ಭಯ ಕಾಡುತ್ತಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದ ಏಕತೆ ಜನರಲ್ಲಿ ವಿಶ್ವಾಸ ಹೆಚ್ಚಿಸಿದೆ. ಬೆಲೆ ಏರಿಕೆ, ಜಾತಿ- ಧರ್ಮದ ಮೇಲಿನ ದಾಳಿ ಕುರಿತು ಚುನಾವಣೆ ಸಂದರ್ಭದಲ್ಲಿ ಚರ್ಚೆ ನಡೆಯುತ್ತಿದೆ.
ಸಂವಿಧಾನ ಬದಲಾವಣೆ ಮಾಡುವುದಿಲ್ಲಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ನೀಡಿದ್ದಾರೆ. ಹಾಲಿ ಸಂಸದರು ಬಿಜೆಪಿಗೆ ನಾಲ್ಕು ನೂರು ಸ್ಥಾನ ಗೆಲ್ಲಿಸಿ ಕೊಡಿ, ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದಿದ್ದಾರೆ. ಈವರೆಗೂ ಅಂತಹ ಸಂಸದರ ವಿರುದ್ಧ ಕ್ರಮ ಕೈಗೊಂಡಿಲ್ಲ. ಉತ್ತರ ಭಾರತದಲ್ಲಿ ಜನ ದಂಗೆ ಏಳುತ್ತಾರೆ ಎಂದು ಮೋದಿ ಸ್ಪಷ್ಟನೆ ನೀಡಿದ್ದಾರೆ ಎಂದರು.
ಕಾಂಗ್ರೆಸ್ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನು ಕರ್ನಾಟಕ ಮತ್ತು ತೆಲಂಗಾಣದಲ್ಲಿ ಸಂಪೂರ್ಣವಾಗಿ ಜಾರಿಗೆ ತಂದಿದ್ದೇವೆ. ನಮ್ಮ ಗ್ಯಾರಂಟಿಗಳನ್ನು ಟೀಕೆ ಮಾಡುತ್ತಿದ್ದವರು ಈಗ ಮೋದಿ ಗ್ಯಾರಂಟಿ ಎಂದು ಜಾಹೀರಾತು ನೀಡಲಾರಂಭಿಸಿದ್ದಾರೆ. ಬಿಜೆಪಿ ಹಿಂದೆ ನೀಡಿದ್ದ ಭರವಸೆಗಳನ್ನು ಎಷ್ಟು ಈಡೇರಿಸಿದ್ದಾರೆ ಎಂದು ಚರ್ಚಿಸಬೇಕಿದೆ. ಮೋದಿ ಗ್ಯಾರಂಟಿ ಎಷ್ಟು ತಲುಪಿದೆ ಎಂಬುದು ಜನರೇ ಹೇಳಬೇಕಿದೆ ಎಂದರು.
ಚುನಾವಣೆ ಬಳಿಕ ಗ್ಯಾರಂಟಿ ಮುಂದುವರೆಯುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. ಅಂದರೆ ಎನ್ಡಿಎ ಅಧಿಕಾರಕ್ಕೆ ಬಂದರೆ ಅವರು ಗ್ಯಾರಂಟಿಯನ್ನು ಮುಂದುವರೆಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಬಿಜೆಪಿಯ ನಾಯಕರಿಗೆ ಅವರ ಹಣೆಯ ಬರಹದಲ್ಲಿ ಗ್ಯಾರಂಟಿ ಮುಟ್ಟಲು ಸಾಧ್ಯವಿಲ್ಲ, ಅದಕ್ಕೆ ರಾಜ್ಯದ ಜನ ಮತ್ತು ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ 20ಕ್ಕೂ ಹೆಚ್ಚು ಸ್ಥಾನಗಳನ್ನು ನಾವು ಗೆಲ್ಲುತ್ತೇವೆ. ಇದು ಖಚಿತವಾಗುತ್ತಿದ್ದಂತೆ ಹತಾಶರಾಗಿ ಕುಮಾರಸ್ವಾಮಿ ಗ್ಯಾರಂಟಿಗಳಿಂದ ಹಳ್ಳಿಯಲ್ಲಿ ತಾಯಂದಿರು ದಾರಿ ತಪ್ಪಿದರು ಎಂದು ಹೇಳಿಕೆ ನೀಡಿದ್ದಾರೆ ಎಂದು ಲೇವಡಿ ಮಾಡಿದರು.
ರಾಜ್ಯದಲ್ಲಿ ಎಲ್ಲ ಕಡೆ ಕಾಂಗ್ರೆಸ್ ಗೆಲ್ಲಲಿದೆ. ಶಿವಮೊಗ್ಗದಲ್ಲಿ ಪಕ್ಷ ಭೇದ ಮರೆತು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ರನ್ನು ಬೆಂಬಲಿಸುತ್ತಿದ್ದಾರೆ. ಯಡಿಯೂರಪ್ಪನವರ ಮಗ ಈ ಬಾರಿ ಅಲ್ಲಿ ಗೆಲ್ಲುವುದಿಲ್ಲ . ವಿಧಾನಸಭಾ ಚುನಾವಣೆಯಲ್ಲಿ ಗಾಂಬಾವಿಯಿಂದ ನೀರು ತೆಗೆದು ರಸ್ತೆ ತೊಳೆದೆವು, ಅದೇ ರೀತಿ ಬಿಜೆಪಿಯನ್ನು ತೊಳೆಯುತ್ತೇವೆ, ಜನ ಬಿಜೆಪಿಯನ್ನು ನಿರಾಕರಿಸುತ್ತಾರೆ ಎಂದರು.
ಬಿಜೆಪಿಯ ಸಂಸದ ಕರಡಿ ಸಂಗಣ್ಣ ಸಜ್ಜನ ರಾಜಕಾರಣಿ, ಅವರನ್ನು ಆ ಪಕ್ಷದಲ್ಲಿ ಅಪಮಾನಿಸಲಾಗಿದೆ, ಹಾಲಿ ಸಂಸದರಾಗಿರುವ ಅವರು ನಿನ್ನೆ ತಮ್ಮ ಸ್ಥಾನಕ್ಕೆ ಫ್ಯಾಕ್ಸ್ ಮೂಲಕ ರಾಜೀನಾಮೆ ನೀಡಿ, ಇಂದು ಕಾಂಗ್ರೆಸ್ ಸೇರಿದ್ದಾರೆ. ಈ ಬೆಳವಣಿಗೆಗಳು ಜನರಿಗೆ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸ ಹೆಚ್ಚಿರುವುದನ್ನು ಸ್ಪಷ್ಟ ಪಡಿಸಿವೆ. ಕರಡಿ ಸಂಗಣ್ಣ, ಪರಿಶುದ್ಧ ವ್ಯಕ್ತಿತ್ವ ಹಾಗೂ ದೊಡ್ಡ ಪ್ರಮಾಣದ ಬೆಂಬಲಿಗರನ್ನು ಹೊಂದಿರುವವರು, ಕೊಪ್ಪಳ ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಪ್ರಭಾವಿಯಾಗಿದ್ದಾರೆ ಎಂದರು.
ಸಂಸದ ಕರಡಿ ಸಂಗಣ್ಣ ಮಾತನಾಡಿ, 14 ವರ್ಷಗಳ ಹಿಂದೆ ಲಕ್ಷ್ಮಣ್ ಸವದಿ ಸಚಿವರಾಗಿದ್ದರು, ಆ ವೇಳೆ ನಾನು ಹೋರಾಟ ನಡೆಸುತ್ತಿದ್ದೆ, ನನ್ನನ್ನು ಭೇಟಿ ಮಾಡಿದ ಸವದಿ ನಿನಗೆ ಹೋರಾಟ ಬೇಕೋ, ಅಭಿವೃದ್ಧಿ ಬೇಕೋ ಎಂದರು. ಅಭಿವೃದ್ಧಿ ಬೇಕು ಎಂದಾಗ ನನ್ನ ಜೊತೆ ಬಾ ಎಂದು ಬಿಜೆಪಿಗೆ ಕರೆದುಕೊಂಡು ಹೋದರು. ಕಾಕತಾಳೀಯ ಎಂಬಂತೆ ಇಂದು ಕಾಂಗ್ರೆಸ್ಗೆ ಬರಲು ಸವದಿ ಅವರೇ ಪ್ರಮುಖ ಕಾರಣ. ಕಾಂಗ್ರೆಸ್ನ ಹೆಚ್.ಜಿ.ರಾಮುಲು ನನಗೆ ರಾಜಕೀಯ ಗುರು,1978ರಲ್ಲಿ ತಾಲ್ಲೂಕು ಬೋರ್ಡ್ ಸದಸ್ಯರಾಗಲು ಬಿ-ಫಾರಂ ಕೊಟ್ಟಿದ್ದರು. ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತ ಮೆಚ್ಚಿ ಇಂದು ಪಕ್ಷ ಸೇರಿದ್ದೇನೆ. ನನ್ನೊಂದಿಗೆ ಅನೇಕರು ಪಕ್ಷ ಸೇರಿದ್ದಾರೆ. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ರನ್ನು ಗೆಲ್ಲಿಸುವ ಸವಾಲನ್ನು ನಾವು ತೆಗೆದುಕೊಂಡಿದ್ದೇವೆ ಎಂದರು.
ನನಗೆ ವೈಯಕ್ತಿಕ ಲಾಭದ ಆಸೆ ಇಲ್ಲ, ಎರಡು ಜಿಲ್ಲೆಗಳ ಅಭಿವೃದ್ಧಿಗೆ ಸಹಕಾರ ನೀಡಿ. ತಾಲ್ಲೂಕು ಬೋರ್ಡ್ ಸದಸ್ಯತ್ವದಿಂದ, ನಾಲ್ಕು ಬಾರಿ ಶಾಸಕನಾಗಿ, ಸಂಸದನಾಗಿ ಹಲವಾರು ಜವಾಬ್ದಾರಿಗಳನ್ನು ನಿರ್ವಹಣೆ ಮಾಡಿದ್ದೇನೆ ಎಂದು ಹೇಳಿದರು.ಸಚಿವ ಶಿವರಾಜ ತಂಗಡಗಿ, ಶಾಸಕರಾದ ಬಸವರಾಜ ರಾಯರೆಡ್ಡಿ, ಲಕ್ಷ್ಮಣ ಸವದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.