Friday, May 24, 2024
Homeರಾಜಕೀಯಬಿಜೆಪಿ ಶ್ರೀಮಂತರ ಪಕ್ಷ, ಬಡವರ ಬಗ್ಗೆ ಕಾಳಜಿ ಇಲ್ಲ : ರಾಹುಲ್ ಗಾಂಧಿ

ಬಿಜೆಪಿ ಶ್ರೀಮಂತರ ಪಕ್ಷ, ಬಡವರ ಬಗ್ಗೆ ಕಾಳಜಿ ಇಲ್ಲ : ರಾಹುಲ್ ಗಾಂಧಿ

ಮಂಡ್ಯ, ಏ.17- ಬಿಜೆಪಿ ಶ್ರೀಮಂತರ ಪರವಾಗಿ ಮಾತ್ರ ಯೋಚಿಸುತ್ತಿದ್ದು, ಬಡವರ ಬದುಕಿನ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಜನ ಸಾಮಾನ್ಯರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಕಾಂಗ್ರೆಸ್‍ನ ವರಿಷ್ಠ ನಾಯಕ ರಾಹುಲ್‍ಗಾಂಧಿ ಭರವಸೆ ನೀಡಿದ್ದಾರೆ.

ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ 2 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಬಿಜೆಪಿ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆದಿದ್ದರು. ದೇಶದ ಸಂಪತ್ತು ಕೆಲವೇ ಕೆಲವು ವ್ಯಕ್ತಿಗಳ ಬಳಿಕ ಕ್ರೋಢಿಕರಣಗೊಳ್ಳುತ್ತಿದೆ. ಕೇಂದ್ರ ಸರ್ಕಾರದ ಕಾರ್ಯಕ್ರಮಗಳು ಹಣ ಇರುವವರಿಗೆ ಪೂರಕವಾಗಿವೆ. ಜನ ಸಾಮಾನ್ಯರು ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದಾರೆ. ಅದರ ಮೇಲೆ ಅವೈಜ್ಞಾನಿಕವಾದ ತೆರಿಗೆ ಪದ್ಧತಿಯಿಂದ ಮತ್ತಷ್ಟು ಭಾರ ಹೊರಿಸಲಾಗಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಅವೈಜ್ಞಾನಿಕವಾದ ಜಿಎಸ್‍ಟಿ ಪದ್ಧತಿಯನ್ನು ಪರಿಷ್ಕರಣೆ ಮಾಡಲಾಗುವುದು, ಆಹಾರ ಪದಾರ್ಥಗಳ ಮೇಲೆ ತೆರಿಗೆ ಹೊರೆಯನ್ನು ತೆಗೆದು ಹಾಕಲಾಗುವುದು, ಸ್ವಾಮೀನಾಥನ್ ವರದಿ ಅನುಸಾರ ವೈಜ್ಞಾನಿಕವಾದ ಬೆಂಬಲ ಬೆಲೆ ನಿಗದಿಯೊಂದಿಗೆ, ಕೃಷಿ ಸಾಲವನ್ನು ಮನ್ನಾ ಮಾಡುವುದಾಗಿ ಭರವಸೆ ನೀಡಿದರು.

ಪ್ರತಿಕುಟುಂಬದ ಮಹಿಳೆಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಆರ್ಥಿಕ ನೆರವಿನ ಮಹಿಳಾ ನ್ಯಾಯ, ಪ್ರತಿಯೊಬ್ಬ ವಿದ್ಯಾವಂತ ಯುವಕನಿಧಿಗೆ ಮೊದಲ ಉದ್ಯೋಗದ ಗ್ಯಾರಂಟಿಯೊಂದಿಗೆ ಒಂದು ಲಕ್ಷ ರೂಪಾಯಿ ವೇತನ, ಜಾತಿ ಜನಗಣತಿಯ ಮೂಲಕ ಸಾಮಾಜಿಕ ನ್ಯಾಯ ಜಾರಿ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ದಿನಗೂಲಿಯನ್ನು 400 ರೂಪಾಯಿಗೆ ಏರಿಕೆ ಸೇರಿದಂತೆ ಅನೇಕ ಯೋಜನೆಗಳನ್ನು ಕಾಂಗ್ರೆಸ್ ಜಾರಿಗೆ ತರಲಿದೆ ಎಂದು ವಿವರಿಸಿದರು.

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನಾ ನೀಡಿದ್ದ ಭರವಸೆಗಳನ್ನು ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿ ಜಾರಿಗೆ ತಂದಿದೆ. ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿದೆ. ಜನರನ್ನು ದಿಕ್ಕು ತಪ್ಪಿಸುವ ಭರವಸೆಗಳನ್ನು ನೀಡುವುದಿಲ್ಲ, ಭರವಸೆ ನೀಡಿದ ಮೇಲೆ ಅದನ್ನು ತಪ್ಪದೆ ಈಡೇರಿಸುತ್ತೇವೆ ಎಂದು ಹೇಳಿದರು.

ಆದರೆ ಬಿಜೆಪಿ ನುಡಿದಂತೆ ನಡೆಯುವುದಿಲ್ಲ, ಚುನಾವಣೆ ಕಾಲದಲ್ಲಿ ಜನರನ್ನು ಭಾವನಾತ್ಮಕವಾಗಿ ದಿಕ್ಕು ತಪ್ಪಿಸಿ ಮತ ಗಿಟ್ಟಿಸುವ ಪ್ರಯತ್ನ ನಡೆಸುತ್ತದೆ. ನಂತರ ಅಧಿಕಾರಾವಧಿಯ ಉದ್ದಕ್ಕೂ ಒಂದಲ್ಲ ಒಂದು ಸಮಸ್ಯೆಗಳಿಂದ ಜನ ನರಳುವಂತಾಗುತ್ತದೆ. ಈ ಹಿಂದೆ ನೋಟು ಅಮಾನ್ಯ, ಜನರಿಗೆ ಹೊರೆಯಾಗುವ ತೆರಿಗೆ ಪದ್ಧತಿ ಸೇರಿದಂತೆ ಅನೇಕ ಆರ್ಥಿಕ ಸಮಸ್ಯೆಗಳನ್ನು ಮೋದಿ ಸರ್ಕಾರ ಸೃಷ್ಟಿಸಿದೆ ಎಂದು ಟೀಕಿಸಿದರು.

ಚುನಾವಣಾ ಬಾಂಡ್ ವಿಚಾರದಲ್ಲಿ ಈವರೆಗೂ ಪ್ರಧಾನಿ ಮೌನವಾಗಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಗಳಾದ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಸಿಬಿಐಗಳನ್ನು ದುರುಪಯೋಗ ಪಡಿಸಿಕೊಂಡು ಚುನಾವಣಾ ಬಾಂಡ್‍ಗಳನ್ನು ಮಾರಾಟ ಮಾಡಲಾಗಿದೆ. ಗುತ್ತಿಗೆ ನೀಡಿದ್ದಕ್ಕೆ ಪ್ರತಿಯಾಗಿ ಬಾಂಡ್‍ಗಳನ್ನು ಖರೀದಿಸುವಂತೆ ಮಾಡಲಾಗಿದೆ. ಇದು ಸ್ಪಷ್ಟವಾದ ಭ್ರಷ್ಟಚಾರ ಪ್ರಕರಣವಾಗಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಬಿಜೆಪಿಯ ಅನೇಕ ಸಂಸದರು, ಪ್ರಮುಖರು ಸಂವಿಧಾನ ಬದಲಾವಣೆಯ ಕುರಿತು ಹೇಳಿಕೆ ನೀಡಿದ್ದಾರೆ. ಬಿಜೆಪಿ ಮರಳಿ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಅಪಾಯವಿದೆ. ಈಗಾಗಲೇ ಪ್ರಜಾಪ್ರಭುತ್ವವನ್ನು ಧಿಕ್ಕರಿಸಿ ಮೋದಿ ಸರ್ಕಾರ ಸಾಕಷ್ಟು ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೃಷಿ ಸಚಿವ ಚಲುವರಾಯಸ್ವಾಮಿ, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ಪಿ.ಎಂ.ನರೇಂದ್ರಸ್ವಾಮಿ, ಉದಯ, ಗಣಿಗ ರವಿ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News