ಬೆಂಗಳೂರು,ನ.9- ಪೋಷಕರ ಹತ್ಯೆಯ ನಂತರ ಅವರ ಹತ್ತು ವರ್ಷದ ಬಾಲಕನನ್ನೇ ಬಳಸಿಕೊಂಡು ಇಡೀ ಪ್ರಕರಣವನ್ನು ಮುಚ್ಚಿಡಲು ಆರೋಪಿ ಇಂದುಶೇಖರ್ ಯತ್ನಿಸಿದ್ದ ಎಂಬ ಬೆಚ್ಚಿಬೀಳಿಸುವ ಮಾಹಿತಿ ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ಭಾಮೈದ ಶಂಕರ್, ಆತನ ಪತ್ನಿ ನಳಿನಿ ದಂಪತಿಯನ್ನು ಕೊಲೆ ಮಾಡಿದ ಬಳಿಕ ಅವರ 10 ವರ್ಷದ ಪುತ್ರನಿಗೆ ಪೋಷಕರು ತೀರ್ಥಯಾತ್ರೆಗೆ ತೆರಳಿದ್ದಾರೆ. ಮೂರು ತಿಂಗಳ ಕಾಲ ಉತ್ತರ ಭಾರತ ಪ್ರವಾಸದಲ್ಲಿರಲಿದ್ದಾರೆ ಯಾರೂ ಅವರಿಗೆ ತೊಂದರೆ ಕೊಡಬಾರದು ಎಂದು ಸಂಬಂ ಕರು ಮತ್ತು ಕುಟುಂಬದ ಸ್ನೇಹಿತರಿಗೆ ತಿಳಿಸುವಂತೆ ಆರೋಪಿ ಇಂದುಶೇಖರ್ ಒತ್ತಾಯಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಾಲಕ ಪೊಲೀಸರಿಗೆ ನೀಡಿದ ಮಾಹಿತಿ ಪ್ರಕಾರ ತಂದೆ ಶಂಕರ್ ಕಾಣೆಯಾಗಿದ್ದರು. ಮಧ್ಯಾಹ್ನದ ವೇಳೆಗೆ ತಾಯಿ ನಳಿನಿ ಕೂಡ ಕಾಣಿಸಿಲ್ಲ. ಅಂದು ಸಂಜೆ ಮಾಮ ಇಂದುಶೇಖರ್ ಕರೆದುಕೊಂಡು ಹೋದರು. ಬಾಲಕನನ್ನು ಸಂಬಂ ಕರೊಂದಿಗೆ ನೇರವಾಗಿ ಮಾತನಾಡಲು ಆರೋಪಿ ಬಿಡದೆ, ವಿವಿಧ ಮೊಬೈಲ್ ಫೋ ನ್ಗಳನ್ನು ಆತನ ಕೈಗೆ ನೀಡಿ ಧ್ವನಿ ಸಂದೇಶಗಳನ್ನು ರೆಕಾರ್ಡ್ ಮಾಡಿಸಿದ್ದಾನೆ.
ಆರಂಭದಲ್ಲಿ ಪೋಷಕರು ದೇವಸ್ಥಾನಕ್ಕೆ ತೆರಳಿದ್ದಾರೆ ಎಂದು ಹೇಳುವಂತೆ ಮತ್ತು ಅಲ್ಲಿನವರ ಬಳಿ ತಮ ಮೊಬೈಲ್ಗಳನ್ನು ನೀಡಿದ್ದಾರೆ ಎಂದು ತಿಳಿಸುವಂತೆ ಆರೋಪಿ ಸೂಚಿಸಿದ್ದನು.
ಈ ಸಂದೇಶಗಳ ಹಿಂದೆ ಬಾಲಕನ ಸ್ವಂತ ಇಚ್ಛೆ ಇರಲಿಲ್ಲ. ಇಂದುಶೇಖರ್ ಹೇಳಿದ್ದನ್ನೇ ಬಾಲಕ ಧ್ವನಿ ಸಂದೇಶಗಳ ರೂಪದಲ್ಲಿ ದಾಖಲಿಸಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಇಂದುಶೇಖರ್ ಕಾರಿನಲ್ಲಿ ಬಾಲಕನ ಪೋಷಕರ ಶವಗಳನ್ನು ಸಾಗಿಸುವ ವೇಳೆ ಆರೋಪಿಯ ಮಗಳು ಹಾಗೂ ಈ ಬಾಲಕ ಇದ್ದನು. ವಾಹನದೊಳಗೆ ತೀವ್ರ ದುರ್ವಾಸನೆ ಬರುತ್ತಿರುವುದನ್ನು ಬಾಲಕ ಗಮನಿಸಿದ್ದಾನೆ. ಕಾರಿನ ಹಿಂಭಾಗದಲ್ಲಿ ಎರಡು ಅಥವಾ ಮೂರು ಭಾರವಾದ ಗೋಣಿಚೀಲಗಳಿದ್ದವು .
ದುರ್ವಾಸನೆ ಬರುತ್ತಿರುವ ಬಗ್ಗೆ ಬಾಲಕ ಕೇಳಿದಾಗ ಹಿಂಭಾಗದಲ್ಲಿ ತ್ಯಾಜ್ಯ ವಸ್ತುಗಳಿವೆ ಎಂದು ಇಂದುಶೇಖರ್ ಹೇಳಿದ್ದಾನೆ. ಚೀಲಗಳ ಒಳಗೆ ಏನಿರ ಬಹುದೆಂದು ಬಾಲಕ ನೋಡಲು ಯತ್ನಿಸಿದಾಗ, ಆರೋಪಿ ಆತನನ್ನು ಗದರಿಸಿ ಚೀಲಗಳ ಬಳಿ ಹೋಗದಂತೆ ಎಚ್ಚರಿಸಿದನೆಂದು ಬಾಲಕ ತಿಳಿಸಿರುವ ಮಾಹಿತಿ ಲಭ್ಯವಾಗಿದೆ.ನಂತರ ಇಂದುಶೇಖರ್ ಕಾರನ್ನು ನಂದಿಬೆಟ್ಟದ ಕಡೆಗೆ ಹೋಗಿ ಆ ಗೋಣಿಚೀಲಗಳನ್ನು ಎಸೆದಿದ್ದಾನೆ ಎಂದು ಪೊಲೀಸರಿಗೆ ಬಾಲಕ ತಿಳಿಸಿದ್ದಾನೆ.
ಮಾತು ನಂಬಿದ್ದ ಬಾಲಕ:
ಇಂದುಶೇಖರ್ ಕುಟುಂಬಕ್ಕೆ ಪರಿಚಿತನಾಗಿದ್ದ ವ್ಯಕ್ತಿಯಾ ಗಿದ್ದರಿಂದ ಬಾಲಕ ಆತನನ್ನು ನಂಬಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ನಂಬಿಕೆಯನ್ನು ಬಳಸಿಕೊಂಡು ಬಾಲಕನನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡು, ಪೋಷಕರು ಪ್ರವಾಸಕ್ಕೆ ತೆರಳಿದ್ದಾರೆ ಎಂಬ ಸುಳ್ಳು ಕಥೆಯನ್ನು ಆರೋಪಿ ಸಂಬಂ ಕರಿಗೆ ನಂಬಿಸುವ ಪ್ರಯತ್ನ ಮಾಡಿದ್ದಾನೆ ಎಂಬುವುದು ಇದುವರೆಗಿನ ತನಿಖೆಯಿಂದ ಬೆಳಕಿಗೆ ಬಂದಿದೆ.
ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದ ವೇಳೆ ಕಾರಿನಲ್ಲಿ ಆತನ ಮಗಳು ಹಾಗೂ ಬಾಲಕ ಜೊತೆಯಲ್ಲಿದ್ದರು.ಇಡೀ ಪ್ರಕರಣದಲ್ಲಿ ಈ ಬಾಲಕನ ಹೇಳಿಕೆ ತನಿಖೆಗೆ ಪ್ರಮುಖ ಸುಳಿವಾಗಿದ್ದು, ಈ ಅಂಶಗಳ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
