ಬೆಂಗಳೂರು, ನ.9- ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಕೊಲೆ ಮಾಡಿ, ಹೃದಯಾಘಾತವೆಂದು ಬಿಂಬಿಸಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ದೊಡ್ಡತೋಗೂರಿನ ನಿವಾಸಿ ಅನಿತಾ (36) ಹಾಗೂ ಆಕೆಯ ಪ್ರಿಯಕರ ಮಧುಸೂದನ (46) ಬಂಧಿತರು.
ಉಪೇಂದ್ರ (41) ಮತ್ತು ಅನಿತಾ ದಂಪತಿ ಕಚೇರಿಯೊಂದನ್ನು ತೆರೆದು ಬ್ಯಾಂಕ್‌ನಲ್ಲಿ ಸಾಲ ಕೊಡಿಸುವ ಕೆಲಸ ಮಾಡುತ್ತಿದ್ದರು. ಈ ನಡುವೆ ಪತ್ನಿಯ ಮೇಲೆ ಉಪೇಂದ್ರನಿಗೆ ಅನುಮಾನ ಮೂಡಿತ್ತು. ಇದೇ ವಿಚಾರವಾಗಿ ದಂಪತಿ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಕ್ಯಾಬ್ ಚಾಲಕನಾಗಿರುವ ಪತ್ನಿಯ ಪ್ರಿಯಕರ ಮಧುಸೂದನನಿಗೆ ಹಲವಾರು ಬಾರಿ ಉಪೇಂದ್ರ ಬುದ್ಧಿವಾದ ಹೇಳಿ ಎಚ್ಚರಿಕೆ ನೀಡಿದ್ದರು.
ಅಕ್ರಮ ಸಂಬಂಧಕ್ಕೆ ಉಪೇಂದ್ರ ಅಡ್ಡಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಅನಿತಾ ಹಾಗೂ ಆಕೆಯ ಪ್ರಿಯಕರ ಸೇರಿ ಕೊಲೆ ಮಾಡಲು ಸಂಚು ರೂಪಿಸಿದ್ದರು. ಅದರಂತೆ ಅ.12ರಂದು ಬೆಳಗಿನ ಜಾವ ಉಪೇಂದ್ರ ನಿದ್ರಿಸುತ್ತಿದ್ದಾಗ ಪತ್ನಿ ಅನಿತಾ, ಪ್ರಿಯಕರನೊಂದಿಗೆ ಸೇರಿಕೊಂಡು ಪತಿಯ ಕತ್ತು ಹಿಸುಕಿ, ಮೂಗು ಮತ್ತು ಬಾಯಿಯನ್ನು ಮುಚ್ಚಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಈ ಕೊಲೆಯನ್ನು ಮರೆಮಾಚುವ ಉದ್ದೇಶದಿಂದ ಬಾತ್‌ರೂಂಗೆ ಹೋಗುವಾಗ ಕಾಲು ಜಾರಿ ಬಿದ್ದು, ಹೃದಯಾಘಾತವಾಗಿ ಉಪೇಂದ್ರ ಮೃತಪಟ್ಟಿದ್ದಾರೆಂದು ಸಂಬಂಧಿಕರಿಗೆ ಅನಿತಾ ಸುಳ್ಳು ಮಾಹಿತಿ ನೀಡಿದ್ದಾಳೆ.
ಮೃತನ ಸಹೋದರ ನೀಡಿದ ದೂರಿನಂತೆ ಪೊಲೀಸರು ಯುಡಿಆರ್ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಮರಣೋತ್ತರ ಪರೀಕ್ಷೆಯ ವರದಿ ಪೊಲೀಸರ ಕೈಸೇರಿದಾಗ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ತಕ್ಷಣ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡ ಪೊಲೀಸರು, ವಿಚಾರಣೆಗಾಗಿ ಮಧುಸೂದನನನ್ನು ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಆತನ ಮಾಹಿತಿಯಂತೆ ಆರೋಪಿತೆ ಅನಿತಾಳನ್ನು ಆಕೆಯ ಮನೆಯಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ನಂತರ ಯುಡಿಆರ್ ಪ್ರಕರಣವನ್ನು ಕೊಲೆ ಪ್ರಕರಣವಾಗಿ ದಾಖಲಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯನ್ನು ಇನ್‌ಸ್ಪೆಕ್ಟರ್ ಅಜರುದ್ದಿನ್ ಮತ್ತು ಸಿಬ್ಬಂದಿ ತಂಡ ಕೈಗೊಂಡು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.
