ಹನೂರು,ನ.11- ಮಹದೇಶ್ವರಬೆಟ್ಟದಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮತ್ತು ಉಘೇ ಉಘೇ ಮಾದಪ್ಪ ಹರ್ಷೋದ್ಗಾರ ನಡುವೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಾದಪ್ಪನ ದೀಪಾವಳಿ ಜಾತ್ರಾ ಮಹಾರಥೋತ್ಸವ ಅದ್ಧೂರಿಯಾಗಿ ವಿಜೃಂಭಣೆೆಯಿಂದ ಜರುಗಿತು.
ತಾಲ್ಲೂಕಿನ ಪ್ರಸಿದ್ಧ ಪುಣ್ಯ ಕ್ಷೇತ್ರ ಹಾಗೂ ರಾಜ್ಯದ ಅತಿ ಹೆಚ್ಚು ಆದಾಯಗಳಿಸುವ ದೇಗುಲಗಳಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಮಲೈ ಮಹದೇಶ್ವರಬೆಟ್ಟದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಐದು ದಿನಗಳ ಕಾಲ ನಡೆದ ಜಾತ್ರೆ ರಥೋತ್ಸವ, ರಾತ್ರಿ ಜರುಗಿದ ಕೊಂಡೋತ್ಸವ ಮತ್ತು ತೆಪ್ರೋತ್ಸವದೊಂದಿಗೆ ದೀಪಾವಳಿ ಜಾತ್ರೆಗೆ ತೆರೆ ಎಳೆಯಲಾಗಿದೆ.
ಮಹದೇಶ್ವರ ಬೆಟ್ಟದಲ್ಲಿ ಧಾರ್ಮಿಕ ವಿ ವಿಧಾನಗಳಿಂದ ಜರುಗಿದ ಮಹಾರಥೋತ್ಸವಕ್ಕೆ ಸಾಲೂರು ಬೃಹನ್ಮಠದ ಪೀಠಾಧ್ಯಕ್ಷರಾದ ಡಾ.ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಮತ್ತು ಪ್ರಾ ಕಾರದ ಕಾರ್ಯದರ್ಶಿ ಪುರುಷೋತ್ತಮ ರವರು ಚಾಲನೆ ನೀಡಿದರು.
ಜಾತ್ರಾ ಪ್ರಯುಕ್ತ ಮಾದಪ್ಪನಿಗೆ ಮುಂಜಾನೆ ಸಂಪ್ರದಾಯಕ ವಿವಿಧ ಪೂಜಾ ಕಾರ್ಯಗಳಾದ ಎಣ್ಣೆ ಮಜ್ಜನ ಸೇವೆ ,ಬಿಲ್ವಾರ್ಚನೆ ,ವಿಶೇಷ ಅಭಿಷೇಕ ,ಪೂಜಾ ಕಾರ್ಯಗಳನ್ನು ಪ್ರಧಾನ ಅರ್ಚಕರು ಸೇರಿದಂತೆ ಅರ್ಚಕರ ವೃಂದದವರಿಂದ ಮುಂಜಾನೆಯೇ ಪೂಜಾ ಸೇವಾ ಕಾರ್ಯಗಳನ್ನು ನೆರವೇರಿಸಲಾಯಿತು.
ಬಳಿಕ ಬಿಳಿ ಕುದುರೆ ವಾಹನ ಸತ್ತಿಗೆ ಸೂರಿಪಾನಿ ನಂದಿಧ್ವಜಾ ವಾದ್ಯಮೇಳ ಮೆರೆವಣಿಗೆಯೊಂದಿಗೆ ಸಾಲೂರು ಬೃಹನ್ಮಠಾಧ್ಯಕ್ಷರಾದ ಶಾಂತ ಮಲ್ಲಿಕಾಜುನ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ತೇರಿಗೆ ಕರ್ಪೂರದ ಆರತಿ ಬೆಳಗಿಸಿ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ದೀಪಾವಳಿ ಜಾತ್ರೆ ಹಿನ್ನೆಲೆ ಭಕ್ತರು ಉಘೇ ಉಘೇ ಮಾದಪ್ಪ ಘೋಷ ವಾಕ್ಯದೊಂದಿಗೆ ಮಹಾರಥ ಎಳೆದು ಹರ್ಷ ವ್ಯಕ್ತಪಡಿಸಿದರು. ಇನ್ನೂ ಕೆಲವರು ತೇರಿಗೆ ಹಣ್ಣು ,ಜವನೆ ,ದವಸ -ಧಾನ್ಯ ,ಚಿಲ್ಲರೆ ಕಾಸು ಎಸೆದು ಹರಕೆ ಕಾಣಿಕೆ ಸಮರ್ಪಿಸಿ ಭಕ್ತಿಯ ಪರಾಕಾಷ್ಟತೆ ಮೆರೆದರು.
ಭಕ್ತರ ಸುರಕ್ಷಿತೆ ಹಿತದೃಷ್ಟಿಯಿಂದ ತ್ರಿಚಕ್ರ,ದ್ವಿಚಕ್ರ ವಾಹನಗಳಿಗೆ ಜಿಲ್ಲಾಡಳಿತ ನಿಷೇಧ ಏರಿದ ಹಿನ್ನೆಲೆ ಕೌದಳ್ಳಿ ಗ್ರಾಮದ ಖಾಸಗಿ ಸ್ಥಳದಲ್ಲಿ ನಿಲ್ಲಿಸಲು ವ್ಯವಸ್ಥೆ ಮಾಡುವ ಮೂಲಕ ಬೈಕ್ಗಳು ಮ.ಬೆಟ್ಟಕ್ಕೆ ಹೋಗದಂತೆ ಪೊಲೀಸರು ಸೂಕ್ತ ಕ್ರಮವಹಿಸಿ ಬಂದೋಬ್ತ್ ಮಾಡಲಾಗಿತ್ತು.
