ನವದೆಹಲಿ, ನ.11 (ಪಿಟಿಐ)- ಶಾ ಬಾನೋ ಪ್ರಕರಣದ ಕುರಿತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ತಮ್ಮ ಪತಿ ಹಾಗೂ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಪ್ರಶ್ನಿಸಿದ್ದರು ಎನ್ನುವುದು ಸೋನಿಯಾ ಅವರ ಆತ್ಮಚರಿತ್ರೆಯಿಂದ ಬಹಿರಂಗಗೊಂಡಿದೆ.
ಮುಸ್ಲಿಂ ಮಹಿಳೆಯರ ಹಿತಾಸಕ್ತಿಗಳನ್ನು ಬಲಿ ಕೊಡುತ್ತಿದ್ದೀರಿ ಎಂದು ಪತ್ರಿಕೆಗಳು ನಿಮ್ಮನ್ನು ಟೀಕಿಸುತ್ತಿವೆ. ಹೀಗಾಗಲು ನೀವು ಏಕೆ ಅವಕಾಶ ನೀಡುತ್ತಿದ್ದೀರಿ ಎಂದು ಸೋನಿಯಾ ಕೇಳಿದ್ದರು. ಇದಕ್ಕೆ ಉತ್ತರಿಸಿದ ರಾಜೀವ್ ಗಾಂಧಿ, ತಾವು ಒಂದು ಸಂಕೀರ್ಣ ಪರಿಸ್ಥಿತಿಯನ್ನು ನ್ಯಾಯಯುತವಾಗಿ ನಿಭಾಯಿಸಲು ಪ್ರಯತ್ನಿಸುತ್ತಿರುವುದಾಗಿ ಹೇಳಿದರು. ಅಲ್ಲದೆ, ತಾನು ಮಹಿಳೆಯರ ಹಕ್ಕುಗಳನ್ನು ರಕ್ಷಿಸುವುದಿಲ್ಲವೇ ಎಂದು ಮರುಪ್ರಶ್ನಿಸಿದರು.
ಈ ಸಂಭಾಷಣೆಯು ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಪುಸ್ತಕದಲ್ಲಿದೆ. ಈ ಪುಸ್ತಕವು ನಿನ್ನೆ ಬಿಡುಗಡೆಯಾಗಿದೆ. ಭಾರತದಲ್ಲಿ ಸಮಾನತೆ, ಬಹುತ್ವ ಮತ್ತು ಜಾತ್ಯತೀತತೆಯಂತಹ ಸಾಂವಿಧಾನಿಕ ಆದರ್ಶಗಳನ್ನು ತೆಗೆದುಹಾಕಿ, ಮುಸ್ಲಿಮರು, ಕ್ರೈಸ್ತರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರನ್ನು ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ಮಾಡುವ ಹಿಂದೂ ರಾಷ್ಟ್ರವೊಂದನ್ನು ನಿರ್ಮಿಸುವುದು ಆರ್ಎಸ್ಎಸ್ನ ಕನಸಾಗಿತ್ತು. ಅವರ ಈ ಶ್ರೇಷ್ಠತೆಯ ಮನೋಭಾವದ ನಂಬಿಕೆಗಳು ಮುಂದೆ ಬಿಜೆಪಿಯ ರಾಜಕೀಯ ಕಾರ್ಯಸೂಚಿಯಾದವು ಎಂದು ಸೋನಿಯಾ ಗಾಂಧಿ ಪುಸ್ತಕದಲ್ಲಿ ಹೇಳಿದ್ದಾರೆ.
ರಾಜೀವ್ ಗಾಂಧಿ ಅಧಿಕಾರದಲ್ಲಿದ್ದಾಗ ಹಿಂದೂ-ಮುಸ್ಲಿಂ ದ್ವೇಷವನ್ನು ಉಲ್ಬಣಗೊಳಿಸುವಂತಹ ಮೊದಲ ಸನ್ನಿವೇಶವು 1985ರಲ್ಲಿ ಎದುರಾಯಿತು. ಇದು ಮುಸ್ಲಿಂ ಸಮುದಾಯದ ವಿಚ್ಛೇದಿತ ಮಹಿಳೆಯೊಬ್ಬರ ಹಕ್ಕುಗಳಿಗೆ ಸಂಬಂಧಿಸಿದ ಕಾನೂನು ಪ್ರಕರಣವಾಗಿತ್ತು ಎಂದು ಅವರು ಉಲ್ಲೇಖಿಸಿದ್ದಾರೆ.
ಶಾ ಬಾನೋ ಎಂಬ ಅತ್ಯಂತ ಬಡ ಮಹಿಳೆಯೊಬ್ಬರು, ತಮ್ಮ ಪತಿ ಮತ್ತೊಂದು ಮದುವೆಯಾಗಿ ತಮ್ಮನ್ನು ಮನೆಯಿಂದ ಹೊರಹಾಕಿದ ನಂತರ, ತಮಗೂ ಮತ್ತು ತಮ್ಮ ಮಕ್ಕಳಿಗೂ ಜೀವನಾಂಶ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯವು ಅವರ ಪರವಾಗಿ ತೀರ್ಪು ನೀಡಿ, ಅಲ್ಪ ಮೊತ್ತದ ಜೀವನಾಂಶವನ್ನು ಪಾವತಿಸುವಂತೆ ಆದೇಶಿಸಿತು. ಮೇಲ್ನೋಟಕ್ಕೆ ಇದೊಂದು ಸರಳ ಪರಿಹಾರದಂತೆ ಕಂಡರೂ, ಅವರ ಪತಿ ಮುಸ್ಲಿಂ ವೈಯಕ್ತಿಕ ಕಾನೂನಿನ ಆಧಾರದ ಮೇಲೆ ಈ ತೀರ್ಪನ್ನು ಪ್ರಶ್ನಿಸಿದರು ಎಂದು ಅವರು ನೆನಪಿಸಿಕೊಂಡಿದ್ದಾರೆ.
ಧರ್ಮದ ಭೇದವಿಲ್ಲದೆ ಎಲ್ಲಾ ನಾಗರಿಕರಿಗೂ ಒಂದೇ ರೀತಿಯ ಕಾನೂನುಗಳನ್ನು ಅನ್ವಯಿಸಬೇಕು ಎಂಬ ವಾದವು, ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿನೊಂದಿಗೆ ನೇರ ಸಂಘರ್ಷಕ್ಕೆ ಇಳಿಯಿತು. ಸ್ವಾತಂತ್ರ್ಯ ಬಂದ ಆರಂಭದ ವರ್ಷಗಳಲ್ಲಿ ದೇಶದ ಅಲ್ಪಸಂಖ್ಯಾತರಿಗೆ ಅವರ ವೈಯಕ್ತಿಕ ಕಾನೂನುಗಳನ್ನು ರಕ್ಷಿಸಲಾಗುವುದು ಎಂದು ನೀಡಲಾಗಿದ್ದ ಕಾನೂನು ಭರವಸೆಗಳು ಈ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನ ಭಾಗವಾಗಿದ್ದವು ಎಂದು ಅವರು ಹೇಳಿದ್ದಾರೆ.
ರಾಜೀವ್ ಗಾಂಧಿ ಒಪ್ಪಿಕೊಂಡಿದ್ದ ರಾಜಿ ಸೂತ್ರವು ಧಾರ್ಮಿಕ ನಂಬಿಕೆಗಳು ಮತ್ತು ಲಿಂಗ ನ್ಯಾಯದ ನಡುವೆ ಒಂದು ಸಮತೋಲನವನ್ನು ಕಾಯ್ದುಕೊಂಡಿತ್ತು. ಅಲ್ಲದೆ, ನ್ಯಾಯಾಲಯವು ಶಾ ಬಾನೋ ಅವರಿಗೆ ನೀಡಿದ್ದ ಅತ್ಯಲ್ಪ ಮಾಸಿಕ ಮೊತ್ತವಾದ 179.2 ರೂಪಾಯಿಗಳಿಗಿಂತ ಮುಸ್ಲಿಂ ಮಹಿಳೆಯರಿಗೆ ಹೆಚ್ಚು ನ್ಯಾಯಯುತವಾದ ಮತ್ತು ಸಮಂಜಸವಾದ ಪಾಲನ್ನು ಇದು ಒದಗಿಸಿಕೊಟ್ಟಿತ್ತು ಎಂದು ಅವರು ಪ್ರತಿಪಾದಿಸಿದ್ದಾರೆ.
ಬಿಜೆಪಿ ನಿರೀಕ್ಷೆಯಂತೆಯೇ, ಸರ್ಕಾರವು ವೋಟ್ ಬ್ಯಾಂಕ್ ರಾಜಕೀಯದಲ್ಲಿ ತೊಡಗಿದೆ ಎಂದು ಆರೋಪಿಸಿತು. ಅದೇ ಸಮಯದಲ್ಲಿ, ಪ್ರಗತಿಪರ ಉದಾರವಾದಿ ದೃಷ್ಟಿಕೋನವು ಈ ನಿರ್ಧಾರವನ್ನು ಮುಸ್ಲಿಂ ಸಮಾಜದ ಸಂಪ್ರದಾಯವಾದಿ ಶಕ್ತಿಗಳಿಗೆ ಶರಣಾದ ಕ್ರಮ ಎಂದು ಪರಿಗಣಿಸಿತು ಎಂದು ಅವರು ತಿಳಿಸಿದ್ದಾರೆ.
ಹಿಂದೂ ಸಮುದಾಯದ ಕೆಲವು ವರ್ಗಗಳ ನಂಬಿಕೆಯ ಪ್ರಕಾರ, ಮೊಘಲ್ ಸಾಮ್ರಾಜ್ಯದ ಸ್ಥಾಪಕ ಚಕ್ರವರ್ತಿ ಬಾಬರ್, ಇಸ್ಲಾಂ ಧರ್ಮದ ಪ್ರಾಬಲ್ಯವನ್ನು ಸ್ಥಾಪಿಸುವ ಉದ್ದೇಶದಿಂದ ಭಗವಾನ್ ರಾಮನು ಜನಿಸಿದನೆಂದು ನಂಬಲಾದ ಸ್ಥಳದಲ್ಲಿದ್ದ ಪ್ರಾಚೀನ ದೇವಾಲಯವೊಂದರ ಮೇಲೆ ಈ ಮಸೀದಿಯನ್ನು ನಿರ್ಮಿಸಿದ್ದನು ಎಂದು ಅವರು ಹೇಳಿದ್ದಾರೆ.
ರಾಮನ ಕಥೆಯಾದ ರಾಮಾಯಣವು ಶತಮಾನಗಳಿಂದಲೂ ಭಾರತದ ಮೂಲೆಮೂಲೆಗೆ ತಲುಪಿದೆ ಮತ್ತು ಏಷ್ಯಾದಾದ್ಯಂತ ಭಾರತದ ಗಡಿಯಾಚೆಗೂ ವಿಸ್ತರಿಸಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ರಾಮನನ್ನು ದೇವರೆಂದು ವ್ಯಾಪಕವಾಗಿ ಪೂಜಿಸಲಾಗುತ್ತದೆ. ವಿಶೇಷವಾಗಿ ಉತ್ತರ ಭಾರತದಲ್ಲಿ ಆತ ಜನರ ಭಾವನೆಗಳೊಂದಿಗೆ ಆಳವಾಗಿ ಬೆಸೆದುಕೊಂಡಿದ್ದಾನೆ.
1984ರಲ್ಲಿ ಬಿಜೆಪಿ ನಾಯಕತ್ವವು ತನ್ನ ಸಹವರ್ತಿ ಸಂಘಟನೆಯಾದ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಜೊತೆಗೂಡಿ ಅಯೋಧ್ಯೆಯಲ್ಲಿ ದೇವಾಲಯವನ್ನು ನಿರ್ಮಿಸಲು ಒಂದು ಚಳವಳಿಯನ್ನು ಪ್ರಾರಂಭಿಸಿತು. ಇದನ್ನೇ ರಾಮ ಜನ್ಮಭೂಮಿ ಆಂದೋಲನ ಎಂದು ಕರೆಯಲಾಯಿತು.
ಹಿಂದೆ ಕೂಡ ಈ ಎರಡು ಪ್ರಮುಖ ಸಮುದಾಯಗಳ ನಡುವೆ ಸಣ್ಣಪುಟ್ಟ ಘರ್ಷಣೆಗಳು ನಡೆಯುತ್ತಿದ್ದವು. ಆದರೆ, ಈಗ ಇಂತಹ ಸಂಘರ್ಷಗಳು ನಿತ್ಯದ ವಿದ್ಯಮಾನಗಳಾದವು ಎಂದು ಅವರು ಹೇಳಿದ್ದಾರೆ.
1949ರಲ್ಲಿ ಮಸೀದಿಯ ಒಳಗೆ ಶ್ರೀರಾಮ ಮತ್ತು ಸೀತಾದೇವಿಯ ವಿಗ್ರಹಗಳನ್ನು ಇರಿಸಲಾಗಿತ್ತು. ತದನಂತರ ಅಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಲಾಯಿತಾದರೂ, ಕೋಮು ಶಾಂತಿಯನ್ನು ಕಾಪಾಡುವ ದೃಷ್ಟಿಯಿಂದ ನ್ಯಾಯಾಲಯದ ತಡೆಯಾಜ್ಞೆಯ ಮೇರೆಗೆ ಮಸೀದಿಯ ಬಾಗಿಲುಗಳನ್ನು ಮುಚ್ಚಿಯೇ ಇರಿಸಲಾಗಿತ್ತು ಎಂದು ಅವರು ಬರೆದುಕೊಂಡಿದ್ದಾರೆ.
